ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಇಲಾಖೆ ಪೊಲೀಸ್ ಇಲಾಖೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಏ.3: ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವುದು ಇತರೆ ಇಲಾಖೆಗಳಿಗಿಂತ ಉತ್ತಮವಾದ ಕೆಲಸ ನಿರ್ವಹಿಸುತ್ತಾರೆ. ಸಾರ್ವಜನಿಕರನ್ನು ಹತ್ತಿರದಿಂದ ಕಾಣುವ ಇಲಾಖೆ ಆಗಿದೆ ಎಂದು ನಿವೃತ್ತ ಪೊಲೀಸ್ ಉಪ ನಿರೀಕ್ಷಕ ಸಿ.ಎನ್. ಬಸವರಾಜ್ ಅಭಿಪ್ರಾಯ ಪಟ್ಟರು. ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಇಲಾಖೆ ಪೊಲೀಸ್ ಇಲಾಖೆ, ಆಯಾ ಸಮಯಕ್ಕೆ ತಕ್ಕಂತೆ ವೈದ್ಯರಾಗಿ, ನ್ಯಾಯ ದೊರಕಿಸಿ ಕೊಡುವ ನ್ಯಾಯಾಧೀಶರಾಗಿ, ಕಷ್ಟದ ಸ್ಥಿತಿಯಲ್ಲಿ ಉಪಕರಣಗಳನ್ನು ಹೊಂದಿಸುವ ಇಂಜಿನಿಯರ್ ಅಗಿ ಕೆಲಸ ನಿರ್ವಹಣೆ ಮಾಡಬೇಕು. ಇದಲ್ಲದೇ ಠಾಣೆಗೆ ಆಗಮಿಸುವ ಸಾರ್ವಜನಿಕರ ಕಷ್ಟ ಕಾರ್ಪಣ್ಯಗಳನ್ನು ಸಮಾಧಾನದಿಂದ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕೆಂದು ಕರೆ ನೀಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಧ್ವಜಗಳ ಮಾರಾಟ ನಿಧಿಯಿಂದ ಬಂದ ಹಣವನ್ನು ಜಿಲ್ಲೆಗೆ ಉಳಿದ ಅರ್ಧ ಹಣವನ್ನು ಕೇಂದ್ರ ಸಮಿತಿಗೆ ನೀಡಲಾಗುತ್ತಿದ್ದು, ಕಲ್ಯಾಣ ಕಾರ್ಯಗಳಿಗೆ ಬಳಸಲಾಗುತ್ತಿದೆ ಎಂದು ಮಾಹಿತಿನೀಡಿದರು.ಕಾರ್ಯಕ್ರಮದಲ್ಲಿ ಪೂರ್ವ ವಲಯ ಪೊಲೀಸ್ ಮಹಾ ನಿರೀಕ್ಷಕ ಡಾ.ಕೆ.ತ್ಯಾಗರಾಜನ್ ಅಧ್ಯಕ್ಷತೆ ವಹಿಸಿದ್ದರು.  ಮುಖ್ಯ ಅತಿಥಿಗಳಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯ ಕುಮಾರ್ ಸಂತೋಷ, ಮಂಜುನಾಥ್ ಇತರರು ಇದ್ದರು.ಜಿಲ್ಲಾ ಸಶಸ್ತ್ರ ಮೀಸಲು ಪಡೆ,ನಗರ ನಾಗರಿಕ ಪೊಲೀಸ್, ಮಹಿಳಾ ಪೊಲೀಸ್ ತಂಡ, ಚನ್ನಗಿರಿ ಉಪ ವಿಭಾಗ ತಂಡ, ದಾವಣಗೆರೆ ಗ್ರಾಮಾಂತರ ಉಪ ವಿಭಾಗ ತಂಡವು ಮುಖ್ಯ ಅತಿಥಿಗಳಿಗೆ ನಿಧಾನ ನಡಿಗೆ ಮೂಲಕ ನಂತರ ಶೀಘ್ರ ನಡಿಗೆ ಮೂಲಕ ಶಸ್ತ್ರಸಜ್ಜಿತ ಗೌರವ ಸಲ್ಲಿಸಿದರು. ‌ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ವಾದ್ಯ ತಂಡವು ಸುಶ್ರಾವ್ಯ ಸಂಗೀತ ನುಡಿಸಿತು. ನಂತರ 2023-24ನೇ ಸಾಲಿನಲ್ಲಿ ನಿವೃತ್ತಿ ಹೊಂದಿದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.