ಬಿಸಿಲಿನ ಜಳದಿಂದ  ಬೇಡಿಕೆ ಹೆಚ್ಚಿತು ಕಲ್ಲಂಗಡಿ ಹಣ್ಣಿಗೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.03: ಯಾವುದೇ ಕಾಲವಾಗಲಿ ಬಿಸಿಲ ನಾಡು ಬಳ್ಳಾರಿಯಲ್ಲಿ ಟೀ ಮತ್ತು ಒಗ್ಗರಣೆ ಮೆಣಸಿನಕಾಯಿಗೆ ಬೇಡಿಕೆ ಕುಸಿಯುವುದಿಲ್ಲ. ಆದರೆ ಕಳೆದ ಕೆಲ ದಿನಗಳಿಂದ ನೆತ್ತಿಯ ಮೇಲಿನ ಸೂರ್ಯನ ಪ್ರಖರತೆಯಿಂದ ಕಲ್ಲಂಗಡಿ ಹಣ್ಣು ಸೇರಿದಂತೆ, ಮಜ್ಜಿಗೆ ಮೊದಲಾದ ತಂಪಾದ ಪಾನಿಯಾ ಹಣ್ಣುಗಳಿಗೆ ಬೇಡಿಕೆ ಹೆಚ್ಚಿದೆ.
ಬಳ್ಳಾರಿ ಜನತೆ 40 ರಿಂದ 45 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೊಸದೇನಲ್ಲ. ಆದರೆ ಕಾಂಕ್ರೀಟ್ ಕಾಡು ಹೆಚ್ಚಾಗುತ್ತಿರುವುದರಿಂದ ಉಷ್ಣತೆ ಜೊತೆ ಸೆಕೆ ಹೆಚ್ಚಾಗಿ ಬಾಯಾರಿಕೆಯಿಂದ ಬಳಲುವಿಕೆ ಹೆಚ್ಚಾಗಿದೆ.
ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡವರಂತೂ ತಾಪಮಾನದಿಂದ ಬಳಲಿಕೆ ಹೆಚ್ಚಾಗಿದೆ.
ತಾಪಮಾನಕ್ಕೆ ಹೊಟ್ಟೆಯನ್ನು ತಂಪಾಗಿಸಲು, ಬಾಯಾರಿಕೆ ನಿವಾರಿಸಿಕೊಳ್ಳಲು ನೀರಷ್ಟೇ ಸಾಲದೆ. ಹಣ್ಣು, ಜ್ಯೂಸ್, ತಂಪು ಪಾನಿಯ, ಮಜ್ಜಿಗೆಯತ್ತ ಜನ ಬಾಯಿ ಚಾಚಿದ್ದಾರೆ.
ಇದರಿಂದಾಗಿ ಇವುಗಳಿಗೆ ಬೇಡಿಕೆ ಹೆಚ್ಚಿದೆ. ಇವುಗಳಲ್ಲಿ ಹೆಚ್ಚಾಗಿ ಕಲ್ಲಂಗಡಿ ಹಣ್ಣಿಗೆ ಇನ್ನಿಲ್ಲದ ಬೇಡಿಕೆಯಾಗಿದೆ.
ಒಂದು ಹೋಳು, ಪ್ಲೇಟ್ ಕಲ್ಲಂಗಡಿ ಹಣ್ಣಿಗೆ 20 ರೂ ತೆಗೆದುಕೊಳ್ಳುತ್ತಿದೆ. ಆದರೆ ಬಳ್ಳಾರಿಯ ಬಿಸಿ ಮಿರ್ಚಿಯಂತೆ ಈ ಹಣ್ಣು ಮಾರಾಟವಾಗುತ್ತಿವೆ.
ಬೆಲೆ ಹೆಚ್ಚು ಎಂದು ಗೊಣಗುತ್ತಲೇ ಹೊಟ್ಟೆ ತಂಪಾಯಿತೆಂದು ಗ್ರಾಹಕರು ಮನಸ್ಸಿನಲ್ಲೆ ಮಿಡಿದು ಮುನ್ನಡೆಯುತ್ತಾರೆ.
ಬಿಸಿಲು ಹೆಚ್ಚಾಗುತ್ತಿರುವುದರಿಂದ  ಮೊದಲಿಗಿಂತ ಈಗ ಹಣ್ಣಿಗೆ ಬೇಡಿಕೆ ಹೆಚ್ಚಿದೆ. ಅದೇರೀತಿ ನಮಗೆ ಹಣ್ಣು ಪೂರೈಕೆದಾರರಿಂದಲೂ ಬೆಲೆ ಹೆಚ್ಚಾಗಿದೆ. ಕಲ್ಲಂಗಡಿ ಹಣ್ಣಿಗೆ ಈಗ ಬೇಸಿಗೆ ಅಷ್ಟೇ ಅಲ್ಲ ಎಲ್ಲಾ ಕಾಲದಲ್ಲೂ ಗ್ರಾಹಕರು ಇದ್ದಾರೆ. ಹಾಗಾಗಿ ಸಹಜವಾಗಿ ಬಿಸಿಲ ಕಾಲದಲ್ಲಿ ಬೇಡಿಕೆ ಮತ್ತು ಬೆಲೆ ಹೆಚ್ಚಿದೆ. 30 ರೂ ನಿಂದ 35 ರೂ ಗೆ ಕಿಲೋ ಮಾರಾಟವಾಗುತ್ತದೆ.
ಮೆಹಬೂಬ್, ಹಣ್ಣಿನ ವ್ಯಾಪಾರಿ.