ಭಾಲ್ಕಿಯ ಶಿಕ್ಷಕಿಯರಿಗೆ ನೀಲಾಂಬಿಕಾ ಪ್ರಶಸ್ತಿ
ಭಾಲ್ಕಿ:ಏ.3: ತಾಲೂಕಿನ ಬಸವನಗರ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕಿ ಕಾವೇರಿ ಎಸ್ ಬಿರಾದಾರ ಹಾಗು ಚಿಟಗುಪ್ಪದ ಗೌರಿಬಾಯಿ ಅಗ್ರವಾಲ್ ಕನ್ಯಾ ಪ್ರೌಢಶಾಲೆಯ ಶಿಕ್ಷಕಿ ಪ್ರೇಮಲತಾ ಶಿವರುದ್ರಯ್ಯಾ ಸ್ವಾಮಿಯವರಿಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಜ್ಞಾನಯೋಗಿ ಶಿವಶರಣೆ ನೀಲಾಂಬಿಕಾ ಪ್ರಶಸ್ತಿನೀಡಿ ಗೌರವಿಸಲಾಗಿದೆ.
ಬೆಂಗಳೂರಿನ ಬಾಗಲಗುಂಟೆಯ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ, ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕøತಿಕ ಸಂಸ್ಥೆ ವತಿಯಿಂದ ಇತ್ತೀಚೆಗೆ ನಡೆದ ವಿಶ್ವ ಕನ್ನಡ ರಾಜ್ಯ ಮಟ್ಟದ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಶಿಕ್ಷಕಿ ಕಾವೇರಿ ಬಿರಾದಾರ ಮತ್ತು ಪ್ರೇಮಲತಾ ಶಿವರುದ್ರಯ್ಯಾ ರವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಜ್ಞಾನ ಯೋಗಿ ಶಿವಶರಣೆ ನೀಲಾಂಬಿಕಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಕನ್ನಡ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಈರವೀಶ ಅಕ್ಕರ್, ಸಮ್ಮೇಳನದ ಸರ್ವಾಧ್ಯಕ್ಷ ಕಮಲಾ ರಾಜೇಶ, ವಿಶ್ವ ಕನ್ನಡ ಕಲಾ ಸಂಸ್ಥೆಯ ಗೌರವಾಧ್ಯಕ್ಷೆ ಆರ್.ಶೈಲಜಾಬಾಬು, ಕಾರ್ಯಕ್ರಮ ಉದ್ಘಾಟಕಿ ಸುಜಾತ ಮುನಿರಾಜು ಸೇರಿದಂತೆ ಹಲವರು ಇದ್ದರು.