ನೇತ್ರದಾನದಿಂದ ಅಂಧ ಮುಕ್ತ ಭಾರತ ಸಾಧ್ಯ
ಕಲಬುರಗಿ:ಏ.3: ವ್ಯಕ್ತಿಗಳು ನಿಧನರಾದ ನಂತರ ತಮ್ಮ ಕಣ್ಣುಗಳನ್ನು ಮಣ್ಣು, ಬೆಂಕಿಪಾಲು ಮಾಡುವ ಬದಲು, ಅಂಧರಿಗೆ ನೇತ್ರದಾನ ಮಾಡಬೇಕು. ಇದರಿಂದ ಎಲ್ಲರೂ ಕಣ್ಣುಗಳು ಪಡೆದು, ಅಂಧ ಮುಕ್ತ ಭಾರತ ನಿರ್ಮಾಣವಾಗುತ್ತದೆ. ನೇತ್ರದಾನದಿಂದ ಮತ್ತೊಬ್ಬರ ಬಾಳಿಗೆ ಬೆಳಕಾಗಲು ಸಾಧ್ಯವಿದ್ದು, ಸತ್ತ ನಂತರವು ಕಣ್ಣುಗಳು ಜೀವಂತವಾಗಿರುತ್ತವೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಸಲಹೆ ನೀಡಿದರು.
ನಗರದ ಶೇಖರೋಜಾದಲ್ಲಿರುವ ‘ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಬುಧವಾರ ಜರುಗಿದ ‘ರಾಷ್ಟ್ರೀಯ ಅಂಧತ್ವ ನಿವಾರಣಾ ಸಪ್ತಾಹ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಪ್ರತಿಯೊಬ್ಬರು ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ನಿಯಮಿತ ಹಾಗೂ ಪೌಷ್ಠಿಕಾಂಶಗಳುಳ್ಳ ಆಹಾರದ ಸೇವೆನೆ, ಸೂಕ್ತ ನಿದ್ರೆ, ಕಣ್ಣಿಗೆ ವಿಶ್ರಾಂತಿ, ವಿಟಾಮಿನ್-ಎ ಹೊಂದಿರುವ ಗಜ್ಜರಿಯಂತಹ ತರಕಾರಿ, ಹಣ್ಣು ಹೆಚ್ಚಿನ ಸೇವನೆ ಮಾಡಬೇಕು. ವ್ಯಾಯಾಮ, ಧ್ಯಾನ ಮಾಡುವುದು, ಮಂದ ಬೆಳಕಿನಲ್ಲಿ ಮತ್ತು ಅತ್ಯಂತ ಸಮೀಪದಿಂದ ಓದುವುದು, ಟಿವಿ ನೋಡುವುದು ಬೇಡ. ಪ್ರತಿ ಆರು ತಿಂಗಳಿಗೊಮ್ಮೆ ನುರಿತ ನೇತ್ರ ತಜ್ಞರಿಂದ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು. ತ್ರಾಟಕ್‍ವನ್ನು ಮಾಡುವುದರಿಂದ ಕಣ್ಣಿನ ಆರೋಗ್ಯ, ತೇಜಸ್ಸು ವೃದ್ಧಿಯಾಗುತ್ತದೆ ಎಂದು ಕಣ್ಣಿಗೆ ಸಂಬಂಧಿಸಿದಂತೆ ಅನೇಕ ಸಲಹೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಜಗನಾಥ ಗುತ್ತೇದಾರ, ಗುರುರಾಜ ಕೈನೂರ್, ನಾಗೇಶ್ವರಿ ಮುಗಳಿವಾಡಿ, ಸಂಗಮ್ಮ ಅತನೂರ, ರೇಷ್ಮಾ ನಕ್ಕುಂದಿ, ಗಂಗಾಜ್ಯೋತಿ ಗಂಜಿ, ಮಂಗಲಾ ಚಂದಾಪುರೆ, ಚಂದ್ರಕಲಾ ಮಠಪತಿ, ಚಂದಮ್ಮ ಮರಾಠಾ, ಅರ್ಚನಾ ಸಿಂಗೆ, ನಾಗಮ್ಮ ಚಿಂಚೋಳಿ, ಸಿದ್ರಾಮ ಸೇರಿದಂತೆ ಇನ್ನಿತರರಿದ್ದರು.