ಈಶ್ವರ ಖಂಡ್ರೆ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ: ಖೂಬಾ
ಬೀದರ್: ಏ.3:ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ತಮ್ಮ ತಪ್ಪು ಮುಚ್ಚಿಕೊಳ್ಳಲು ನನ್ನ ಹಾಗೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದು, ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಆರೋಪಿಸಿದ್ದಾರೆ.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿ ಉದ್ದೇಸಿಸಿ ಮಾತನಾಡಿರುವ ಅವರು, 60 ವರ್ಷಗಳಲ್ಲಿ ಮಾಡದ ಕಾರ್ಯವನ್ನು ನಾವು 10 ವರ್ಷದಲ್ಲಿ ಮಾಡಿ ತೋರಿಸಿದ್ದೇವೆ. ಲೋಕಸಭೆ ಚುನಾವಣೆ ಮುಗಿದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿ ಇರುವುದಿಲ್ಲ. ನಮಗೆ ಆಪರೇಷನ್ ಮಾಡುವ ಅಗತ್ಯವೇ ಇಲ್ಲ. ಸರ್ಕಾರ ತನ್ನಿಂದ ತಾನೆ ಬಿದ್ದು ಹೋಗುತ್ತದೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ರಾಜ್ಯದಲ್ಲಿ ಗಟ್ಟಿಯಾಗಿದೆ. ಜಿಲ್ಲೆಯಲ್ಲೂ ಮಾಜಿ ಸಚಿವ ಖಾಶೆಂಪುರ ನೇತೃತ್ವದಲ್ಲಿ ಸೋಮವಾರ ದೊಡ್ಡ ಮಟ್ಟದ ಸಭೆಯಾಗಿದೆ. ಉಭಯ ಪಕ್ಷಗಳಲ್ಲಿ ಯಾವುದೇ ಗೊಂದಲಗಳಿಲ್ಲ. ಜೊಡೆತ್ತುಗಳಂತೆ ಮುಂದೆ ಸಾಗುತ್ತೇವೆ. 28 ಲೋಕಸಭೆ ಕ್ಷೇತ್ರಗಳನ್ನು ಗೆಲ್ಲೆ ಗೆಲ್ಲುತ್ತೇವೆ. ಇದರಲ್ಲಿ ಅನುಮಾನ ಬೇಡ ಎಂದರು.
ಒಬ್ಬ ಸಾಮಾನ್ಯ ವ್ಯಕ್ತಿ ಸಹ ವಿಮಾನದಲ್ಲಿ ಪ್ರಯಾಣಿಸಬಹುದೆಂಬ ಕಾರಣಕ್ಕೆ ಜಿಲ್ಲೆಯಲ್ಲಿ ನಾಗರಿಕ ವಿಮಾನಯಾನ ಆರಂಭಿಸಲಾಯಿತು. ಉಡಾನ ಯೋಜನೆಯಲ್ಲಿ ಮೂರು ವರ್ಷಗಳ ವರೆಗೆ ರಾಜ್ಯ ಸರ್ಕಾರದಿಂದ ಸಬ್ಸಿಡಿ ಹಣ ನೀಡಟಲಾಗುತ್ತದೆ. ಹಿಂದೆ ನಮ್ಮ ಪಕ್ಷದ ಸರ್ಕಾರ ಅಸ್ತಿತ್ವದಲ್ಲಿತ್ತು. ಈಗ ಕಾಂಗ್ರೆಸ್ ಸರ್ಕರ ಅಧಿಕಾರದಲ್ಲಿದ್ದು, ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಹಣ ನೀಡುವಂತೆ ಪತ್ರ ಬರೆದರೂ ಒಂದು ನಯಾ ಪೈಸೆ ಹಣ ನೀಡಲಿಲ್ಲ, ಅದಕ್ಕೆ ವಿಮಾನ ಹಾರಲಿಲ್ಲ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜನ ಸಾಮಾನ್ಯರಿಗೆ ಪ್ರಧಾನ ಮಂತ್ರಿ ಆವಾಜ್ ಯೋಜನೆ, ಉಜ್ವಲ ಯೋಜನೆ, ಮುದ್ರಾ ಯೋಜನೆ, ಬೇಟಿ ಬಚಾವೊ, ಬೀಟಿ ಪಢಾವೊ ಯೋಜನೆ, ಕಿಸಾನ್ ಸಮ್ಮಾನ ಯೋಜನೆ, ಮೇಕ್ ಇನ್ ಇಂಡಿಯಾ ಹೀಗೆ ಕಳೆದ 10 ವರ್ಷಗಳು ನಮ್ಮ ಸರ್ಕಾರ ಮಾಡಿದ ವಿವರ ನೀಡುತ್ತ ಹೋದರೆ ಒಂದು ಹಗಲು ಹಾಗೂ ರಾತ್ರಿ ಸಾಕಾಗಲ್ಲ, ಅಷ್ಟು ಸಾಧನೆ ಮಾಡಿದ್ದೇವೆ. ಕಾಂಗ್ರೆಸ್‍ನಲ್ಲಿ ಸೋಲಿನ ಭೀತಿಯಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು
ನಮ್ಮ ಪ್ರಧಾನಿಗಳ ಕುರಿತು ಹಗುರವಾಗಿ ಮಾತನಾಡುತ್ತಿದ್ದಾರೆ. ಸೋಲಿನ ಭೀತಿಯಿಂದ ಹತಶತನ ಕಾಂಗ್ರೆಸ್ಸಿಗರಲ್ಲಿ ಕಾಡುತ್ತಿದೆ. ಮುದ್ರಾ ಯೋಜನೆಯಡಿ ಪ್ರತಿ ವರ್ಷ 40 ಲಕ್ಷ ಉದ್ಯೋಗ ಸೃಷ್ಟಿ ಮಾಡಿ ಸ್ವಾವಲಂಬಿ ಭಾರತದತ್ತ ಮುನ್ನುಗ್ಗುತ್ತೇವೆ. ಜಗತ್ತಿನ ಆರ್ಥಿಕ ಪರಿಸ್ಥಿತಿ ಗಮನಿಸಿದಲ್ಲಿ ನಾವೀಗ 5ನೇ ಸ್ಥಾನದಲ್ಲಿದ್ದೇವೆ. ಕೆಂಪು ಕೋಟೆ ಮೇಲೆ ನಿಂತು ಶೌಚಾಲಯ ಹಾಗೂ ಸ್ವಚ್ಛತೆ ಬಗ್ಗೆ ಮಾತನಾಡಿ 55 ಪ್ರತಿಶತದಷ್ಟಿದ್ದ ಶೌಚಾಲಯ ಪ್ರಮಣ ಈಗ ಶೇಕಡಾ 95 ಪ್ರತಿಶತಕ್ಕೆ ತಂದು ನಿಲ್ಲಿಸಿದ್ದೇವೆ. ಒಟ್ಟಾರೆ ಕಳೆದ 10ವರ್ಷಗಳಲಲ್ಲಿ ನಮ್ಮ ಅಭಿವೃದ್ಧಿ ಕಾರ್ಯ ಮಾತ್ರ ಮಾತನಾಡುತ್ತದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ, ಕಳೆದ ಲೋಕಸಭೆ ಚುನಾವಣೆಯಲ್ಲಿ ಸ್ವತಃ ಈಸ್ವರ ಖಂಡ್ರೆ ಭಗವಂತ ಖೂಬಾ ಅವರ ವಿರೂದ್ಧ 1 ಲಕ್ಷ 25 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಈಗ ಅವರ ಸುಪುತ್ರ ಎರಡು ವರೆ ಲಕ್ಷ ಮತಗಳ ಅಂತರದಿಂದ ಸೋಲುತ್ತಾರೆ. ನಮ್ಮ ಔರಾದ್ ಶಾಸಕ ಪ್ರಭು ಚವ್ಹಾಣ ಅವರಿಗೆ ಮೂರು ತಿಂಗಳ ಕಾಲ ವೈದ್ಯರು ವಿಶ್ರಾಂತಿ ಹೇಳಿದ್ದರಿಂದ ಅವರು ಪ್ರಚಾರದಲ್ಲಿಮ ಭಾಗವಹಿಸಲಿಲ್ಲ. ಆದರೆ ಅವರಿಗೆ ಯಾವುದೆ ಮುನಿಸು ಇಲ್ಲ ಎಂದು ಸಮಜಾಯಿಸಿ ನೀಡಿದರು.
ಹುಮನಾಬಾದ್ ಶಾಸಕ ಡಾ.ಸಿದ್ಧಲಿಂಗಪ್ಪ ಪಾಟೀಲ ಮಾತನಾಡಿ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವೆಲ್ಲರು ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ಪ್ರಚಾರ ಕಾರ್ಯದಲ್ಲಿ ಸಹ ಒಂದಾಗಿದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಎಂದರು.
ಬೀದರ್ ದಕ್ಷಿಣ ಕೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಬಸವಕಲ್ಯಾಣ ಶಾಸಕ ಶರಣು ಸಲಗಾರ, ವಿಧಾನ ಪರಿಷತ್ ಸದಸ್ಯ ರಘುನಥರಾವ ಮಲ್ಕಾಪುರೆ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ರಾಜಕುಮಾರ ಪಾಟೀಲ ತೇಲ್ಕುರ್, ಪಕ್ಷದ ಕಲಬುರಗಿ ವಿಭಾಗಿಯ ಸಹ ಪ್ರಭಾರಿ ಈಸ್ವರಸಿಂಗ್ ಠಾಕೂರ್, ಪಕ್ಷದ ರಾಷ್ಟ್ರೀಯ ಎಸ್.ಸಿ ಮೋರ್ಚಾದ ಜೈಕುಮಾರ ಕಾಂಗೆ, ನಗರ ಸಭೆ ಸದಸ್ಯ ಶಶಿ ಹೊಸಳ್ಳಿ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಿರಣ ಪಾಟೀಲ, ಪೀರಪ್ಪ ಯರನಳ್ಳಿ, ಜಿಲ್ಲಾ ವಕ್ತಾರ ಸದಾನಂದ ಜೋಷಿ, ಮಾಧ್ಯಮ ಪ್ರಮುಖ ಶ್ರೀನಿವಾಸ ಚೌದ್ರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.