ಫೈಜ್ನಟ್ರಾಜ್ ಗೆ ಮಂಗಳಾ ರಾಮಚಂದ್ರ ಪುಸ್ತಕ ಪ್ರಶಸ್ತಿ

ಸಂಜೆವಾಣಿ ವಾರ್ತೆ
ದಾವಣಗೆರೆ. ಏ.೩; ಬೆಂಗಳೂರಿನ ಲೇಖಿಕಾ ಸಾಹಿತ್ಯ ವೇದಿಕೆ ಪ್ರತಿ ವರ್ಷ ಕೊಡಮಾಡುವ ಪುಸ್ತಕ ಪ್ರಶಸ್ತಿ ಗೆ ಕನ್ನಡದ ಕವಿ ಸಾಹಿತಿ ಸಂತೆಬೆನ್ನೂರು ಫೈಜ್ನಟ್ರಾಜ್ ಭಾಜನರಾಗಿದ್ದಾರೆ.ಇವರು ಬರೆದ ಮಕ್ಕಳ ಸಾಹಿತ್ಯದ ‘ ಮಗಳಿಗೆ ಹೇಳಿದ ಕಥೆಗಳು’ ಕೃತಿ ಈ ಪ್ರಶಸ್ತಿ ಪಡೆದುಕೊಂಡಿದೆ ಎಂದು ಸಂಘದ ಸಂಚಾಲಕಿ, ಲೇಖಕಿ ಶೈಲಜಾ ಸುರೇಶ್ ಹೇಳಿದರು.ಬೆಂಗಳೂರಿನ ಎನ್ ಆರ್ ಕಾಲೋನಿಯಲ್ಲಿರುವ ಕನ್ನಡ ಕಣ್ವ ಬಿ.ಎಂ.ಶ್ರೀ ಕಲಾಭವನದಲ್ಲಿ ನಡೆದ ಪುಸ್ತಕ ಪ್ರಶಸ್ತಿ ಸಮಾರಂಭದಲ್ಲಿ ಫೈಜ್ನಟ್ರಾಜ್ ಅವರಿಗೆ ” ಮಂಗಳಾ ರಾಮಚಂದ್ರ” ಪ್ರಶಸ್ತಿ ನೀಡಿ ಗೌರವಿಸಲಾಯಿತು.ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಭೈರಮಂಗಲ ರಾಮೇಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಗೌರವ ಕಾರ್ಯದರ್ಶಿ ಡಾ. ಶಾಂತರಾಜು , ಸಂಚಾಲಕಿ ಶೈಲಜಾ ಸುರೇಶ್ , ಕಥೆಗಾರ್ತಿ ಮಧುರಾ ಕರ್ಣಂ, ಪ್ರಾಯೋಜಕರಾದ ಶಾಂತ ಜಯಾನಂದ ಮುಂತಾದ ಗಣ್ಯರ ಮುಂದೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಇದೇ ಕೃತಿಗೆ ಇತ್ತೀಚೆಗಷ್ಟೇ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ದತ್ತಿ ಪ್ರಶಸ್ತಿ ಲಭ್ಯವಾಗಿತ್ತು.ಇವರ ಈ ಸಾಧನೆಗೆ ಸಂತೆಬೆನ್ನೂರಿನ ಸಾಹಿತ್ಯ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.