ಬಸವ ತತ್ವದಂತೆ ಬದುಕಿದ ಶಿವಕುಮಾರ ಸ್ವಾಮೀಜಿ
ಬೀದರ್:ಏ.3: ತುಮಕೂರಿನ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರು ಬಸವ ತತ್ವದಂತೆ ಬದುಕಿದ್ದರು ಎಂದು ಹಿರಿಯ ಮಕ್ಕಳ ತಜ್ಞ ಡಾ. ಸಿ. ಆನಂದರಾವ್ ಹೇಳಿದರು.
ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಚಿಕ್ಕಪೇಟೆ ಸಮೀಪದ ನಂದಿ ಟೈರ್ ಕಚೇರಿಯಲ್ಲಿ ಆಯೋಜಿಸಿದ್ದ ತುಮಕೂರಿನ ಲಿಂ. ಡಾ. ಶಿವಕುಮಾರ ಸ್ವಾಮೀಜಿ ಅವರ 117ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀಗಳು ಕಾಯಕ ಹಾಗೂ ದಾಸೋಹ ಉಸಿರಾಗಿಸಿಕೊಂಡಿದ್ದರು. ಸಮಾಜದ ಉದ್ಧಾರವೇ ಅವರ ಧ್ಯೇಯವಾಗಿತ್ತು ಎಂದು ತಿಳಿಸಿದರು.
ನಾಡಿನ ಉದ್ದಗಲಕ್ಕೂ ಅವರು ಜಗಜ್ಯೋತಿ ಬಸವೇಶ್ವರ ನಾಟಕ ಪ್ರದರ್ಶಿಸಿದ್ದರು. ದಾನ, ಧರ್ಮದ ಮಹತ್ವವನ್ನು ಸಾರಿದ್ದರು ಎಂದು ಹೇಳಿದರು.
ನಿವೃತ್ತ ಮುಖ್ಯಶಿಕ್ಷಕ ಸಿದ್ಧಾರೆಡ್ಡಿ ನಾಗೋರಾ ಮಾತನಾಡಿ, ಒಬ್ಬರು ಸ್ವಾಮೀಜಿ ಮನಸ್ಸು ಮಾಡಿದರೆ ಸಮಾಜದಲ್ಲಿ ಎಂತಹ ಬದಲಾವಣೆ ತರಬಹುದು ಎನ್ನುವುದಕ್ಕೆ ಡಾ. ಶಿವಕುಮಾರ ಸ್ವಾಮೀಜಿ ನಿದರ್ಶನವಾಗಿದ್ದಾರೆ ಎಂದು ನುಡಿದರು.
ಜೋಳಿಗೆ ಹಿಡಿದು ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ತ್ರಿವಿಧ ದಾಸೋಹ ಮಾಡಿದ್ದರು. ಅವರ ಬಾಳಲ್ಲಿ ಹೊಸ ಬೆಳಕು ಮೂಡಿಸಿದ್ದರು. ಮಠದಲ್ಲಿ ಓದಿದ ಅಸಂಖ್ಯಾತ ವಿದ್ಯಾರ್ಥಿಗಳು ಇಂದು ದೇಶ-ವಿದೇಶದಲ್ಲಿ ವಿವಿಧ ಉನ್ನತ ಹುದ್ದೆಗಳಲ್ಲಿದ್ದಾರೆ. ಶ್ರೀಗಳು ಎಲ್ಲ ಮಠಾಧೀಶರಿಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಕೊಡಬೇಕು. ದೇಶದಾದ್ಯಂತ ಸರ್ಕಾರದ ವತಿಯಿಂದ ಅವರ ಜಯಂತಿ ಆಚರಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ ಪಾಟೀಲ ತೇಗಂಪುರ ಮಾತನಾಡಿ, ಡಾ. ಶಿವಕುಮಾರ ಸ್ವಾಮೀಜಿ 111 ವರ್ಷ ಬಾಳಿದ್ದರು. 89 ವರ್ಷ ಸಿದ್ಧಗಂಗಾ ಮಠವನ್ನು ಮುನ್ನಡೆಸಿದ್ದರು. ಮಠದಲ್ಲಿ ಓದಿದ ಮಕ್ಕಳನ್ನು ಆದರ್ಶ ಪ್ರಜೆಗಳಾಗಿ ರೂಪಿಸಿದ್ದರು. ಸಮಾಜದಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಿದ್ದರು. 21ನೇ ಶತಮಾನದ ನಡೆದಾಡುವ ದೇವರು ಅವರಾಗಿದ್ದರು ಎಂದರು.
ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿ ಸದಸ್ಯ ಬಸವರಾಜ ಭತಮುರ್ಗೆ ಅವರನ್ನು ಸನ್ಮಾನಿಸಲಾಯಿತು.
ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ರಮೇಶ ಪಾಟೀಲ ಪಾಶಾಪುರ, ಪ್ರಮುಖರಾದ ಬಸವರಾಜ ಹೊಕ್ರಾಣೆ ಕೊಳ್ಳೂರ, ಬಸವರಾಜ ಕರೆಪ್ಪನೋರ, ಪತ್ರಕರ್ತ ನಾಗೇಶ ಪ್ರಭಾ, ಧರ್ಮವೀರ ಬಿರಾದಾರ, ಗುರುಪಾದಪ್ಪ ಸಿರ್ಸಿ, ಮಂಜುನಾಥ ಪಾಟೀಲ, ಜ್ಯೋತಿಷ್ ಹಲಬುರ್ಗೆ, ರಾಜಕುಮಾರ ಪಾಟೀಲ, ಶಾಮರಾವ್ ಬಂಬಳಗಿ ಮತ್ತಿತರರು ಇದ್ದರು.
ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಕರಂಜೆ ನಿರೂಪಿಸಿದರು. ಜಿಲ್ಲಾ ಘಟಕದ ಗೌರವಾಧ್ಯಕ್ಷ ನಾಗಭೂಷಣ ಹುಗ್ಗೆ ವಂದಿಸಿದರು.