ರೈತರೊಂದಿಗೆ ನಾವಿದ್ದೇವೆ… ಅಭಿಯಾನ
ಧಾರವಾಡ,ಏ3: ಕಳೆದ ಸೆಪ್ಟೆಂಬರ ಮತ್ತು ಅಕ್ಟೋಬರದಲ್ಲಿ ರಾಜ್ಯ ಸರ್ಕಾರವು ಧಾರವಾಡ ಜಿಲ್ಲೆ ಪೂರ್ಣ ಬರಪಡಿತ ಜಿಲ್ಲೆಯೆಂದು ಘೋಷಿಸಿತು. ಅಂದಿನಿಂದ ಧಾರವಾಡ ಜಿಲ್ಲಾಡಳಿತವು ಜನ, ಜಾನುವಾರುಗಳಿಗೆ ಅಗತ್ಯವಾದ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಮತ್ತು ಜನರಿಗೆ ನರೇಗಾ ಯೋಜನಯಡಿ ಉದ್ಯೋಗ ನೀಡಲು ಕಾರ್ಯಾರಂಭ ಮಾಡಿತು.
ಕುಡಿಯುವ ನೀರಿನ ಸಮಸ್ಯೆ ಕಂಡುಬಂದ ಗ್ರಾಮಗಳಿಗೆ ಈಗಾಗಲೇ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಜಾನುವಾರುಗಳಿಗೆ ಅಗತ್ಯವಿರುವ ಮೇವು ಸರಬರಾಜು ಮಾಡಲು ಜಿಲ್ಲೆಯ ವಿವಿಧ ಸ್ಥಳಗಳಲ್ಲಿ 7 ಮೇವು ಬ್ಯಾಂಕಗಳನ್ನು ತರೆಯಲಾಗಿದ್ದು, ಈಗಾಗಲೇ ರೈತರು ಮೇವು ಖರೀದಿ ಮಾಡುತ್ತಿದ್ದಾರೆ.
ಆದರೂ ರೈತರಿಗೆ ಮೇವು ಬ್ಯಾಂಕ್, ಮೇವು ಮಾರಾಟದ ಬಗ್ಗೆ ಮಾಹಿತಿ ನೀಡಲು ಮತ್ತು ಬರ ಪರಿಸ್ಥಿತಿಯಲ್ಲಿ ರೈತರಿಗೆ ಧೈರ್ಯ ತುಂಬಲು ಧಾರವಾಡ ಜಿಲ್ಲಾಡಳಿತವು “ರೈತರೊಂದಿಗೆ ನಾವಿದ್ದೇವೆ…” ಎಂಬ ವಿನೂತನ ಅಭಿಯಾನವನ್ನು ಆರಂಭಿಸಿದೆ.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಜಿಲ್ಲೆಯ ರೈತರಿಗೆ ಕುಡಿಯುವ ನೀರು, ಜಾನುವಾರು ಮೇವು ಲಭ್ಯತೆಯ ಬಗ್ಗೆ ಮಾಹಿತಿ ನೀಡಲು ಮತ್ತು ಬರಪರಿಹಾರ ಪೂರಕ ಸೌಲಭ್ಯ ದೊರಕಿಸಲು ಅನುಕೂಲವಾಗುವಂತೆ ಕಂದಾಯ ಇಲಾಖೆ, ಪಶುಪಾಲನೆ ಇಲಾಖೆ ಹಾಗೂ ಪಂಚಾಯತ ರಾಜ್ಯ ಇಲಾಖೆಗಳ ಸಹಯೋಗದಲ್ಲಿ ರೈತರಿಗೆ ಸರ್ಕಾರ, ಜಿಲ್ಲಾಡಳಿತ ನಿಮ್ಮ ನೆರವಿಗೆ ಇದೆ ಎಂಬುದನ್ನು ತಿಳಿಸಲು ಈ ರೈತರೊಂದಿಗೆ ನಾವಿದ್ದೇವೆ… ಎಂಬ ವಿನೂತ ಅಭಿಯಾನ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಯಾವುದೇ ಒತ್ತಡಗಳಿಗೆ ಒಳಗಾಗದೇ ರೈತರು ತಮ್ಮ ಜಾನುವಾರುಗಳನ್ನು ಜೋಪಾನ ಮಾಡಬೇಕು. ಜಿಲ್ಲೆಯಲ್ಲಿ ಮುಂದಿನ 8 ವಾರಗಳಿಗೆ ಆಗುವಷ್ಟು ಮೇವು ಲಭ್ಯವಿದೆ. ರೈತರು ಸಹ ಮೇವಿನ ಬಣವಿ ಹೊಂದಿದ್ದಾರೆ. ಜಿಲ್ಲಾಡಳಿತದಿಂದ ಜಿಲ್ಲೆಯ ಎ.ಪಿ.ಎಂ.ಸಿಗಳು ಸೇರಿದಂತೆ ವಿವಿಧ 7 ಸ್ಥಳಗಳಲ್ಲಿ ಮೇವು ಬ್ಯಾಂಕ ಸ್ಥಾಪಿಸಲಾಗಿದೆ. ಈ ಮಾಹಿತಿಯನ್ನು ಪ್ರತಿ ರೈತರಿಗೆ ತಲುಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಎಸಿ ಶಾಲಂ ಹುಸೇನ್, ತಹಸಿಲ್ದಾರ ಡಾ. ಡಿ.ಎಚ್. ಹೂಗಾರ ಹಾಗೂ ಪಶುಪಾಲನೆಯ ಉಪನಿರ್ದೇಶಕ ಡಾ. ರವಿ ಸಾಲಿಗೌಡರ ನೇತೃತ್ವದಲ್ಲಿ ಧಾರವಾಡ ತಾಲೂಕು ಆಡಳಿತದಿಂದ ಧಾರವಾಡ ಹಳೆ ಎಪಿಎಂಸಿಯ ದನಗಳ (ಮಾರಾಟ) ಸಂತೆ ಜಾಗದಲ್ಲಿ ರೈತರಿಗೆ ಧ್ವನಿವರ್ಧಕ ಬಳಸಿ ಜಾಗೃತಿ ಮೂಡಿಸುವ ಮೂಲಕ ಅಭಿಯಾನ ಆರಂಭಿಸಲಾಯಿತು.
ಮೇವು ಲಭ್ಯತೆ, ದಾಸ್ತಾನು ಬಗ್ಗೆ ಹಾಗೂ ಕುಡಿಯುವ ನೀರಿನ ಕೊರತೆ ಇಲ್ಲ ಎಂಬುವುದರ ಬಗ್ಗೆ ಸಾಕಷ್ಟು ಸಲ ಮಾಧ್ಯಮ, ಗ್ರಾಮ ಪಂಚಾಯಿತಗಳ ಮೂಲಕ ರೈತರಿಗೆ ಮಾಹಿತಿ ನೀಡಲಾಗಿದೆ. ಈಗಲೂ ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯತ ಮೂಲಕ ಗ್ರಾಮಗಳಲ್ಲಿ ಡಂಗುರ ಸಾರಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಜಿಲ್ಲೆಯ ಧಾರವಾಡ ತಾಲೂಕಿನ ಮಾಧನಬಾವಿಯಲ್ಲಿ ಫೆ. 28, 2024 ರಂದು ಮೊದಲು ಮೇವು ಬ್ಯಾಂಕ ತೆರೆಯಲಾಗಿತ್ತು. ಧಾರವಾಡ ತಾಲೂಕಿನ ಮಾಧನಬಾವಿ, ಧಾರವಾಡ ಎ.ಪಿ.ಎಂ.ಸಿ., ಹುಬ್ಬಳ್ಳಿ ತಾಲೂಕಿನ ಶರೇವಾಡ ಮತ್ತು ಶಿರಗುಪ್ಪಿ, ಕಲಘಟಗಿ ಎ.ಪಿ.ಎಂ.ಸಿ., ಕುಂದಗೋಳ ಎ.ಪಿ.ಎಂ.ಸಿ., ನವಲಗುಂದ ಎ.ಪಿ.ಎಂ.ಸಿ. ಸೇರಿ ಒಟ್ಟು 7 ಸ್ಥಳಗಳಲ್ಲಿ ರೈತರ ಬೇಡಿಕೆಯಂತೆ ಈಗಾಗಲೇ ಜಿಲ್ಲಾಡಳಿತದಿಂದ ಮೇವು ಬ್ಯಾಂಕ ತೆರೆಯಲಾಗಿದೆ.
ಸಹಾಯವಾಣಿ ಹಾಗೂ ಇತರ ಸೌಲಭ್ಯಗಳ ಕುರಿತು ರೈತರಿಗೆ ಧ್ವನಿವರ್ಧಕ ಬಳಸಿ, ಪೊಸ್ಟರ್, ಬ್ಯಾನರ್ ಅಳವಡಿಕೆ, ಡಂಗುರ ಸಾರುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಅಭಿಯಾನದ ಅಂಗವಾಗಿ ಧಾರವಾಡ ತಹಸಿಲ್ದಾರ ಡಾ. ಡಿ.ಎಚ್. ಹೂಗಾರ ಅವರು ಧ್ವನಿವರ್ಧಕ ಬಳಸಿ ಮಾತನಾಡಿ, ರೈತರ ನೆರವಿಗೆ ತಹಸಿಲ್ದಾರ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದೆ. ತಮಗೆ ಮೇವು, ನೀರಿನ ಕೊರತೆ ಉಂಟಾದಲ್ಲಿ ತಕ್ಷಣ ಕರೆ ಮಾಡಿ, ಪರಿಹರಿಸುತ್ತೇವೆ. ಧಾರವಾಡದ ಮಾಧನಬಾವಿ ಸರಕಾರಿ ಗೋಶಾಲೆ ಮತ್ತು ಧಾರವಾಡ ಎ.ಪಿ.ಎಂ.ಸಿಯಲ್ಲಿ ಮೇವು ಬ್ಯಾಂಕ್ ತೆರೆಯಲಾಗಿದೆ. ಪ್ರತಿ ಕೆ.ಜಿ. ಮೇವಿಗೆ ರೂ. 2 ರ ದರದಲ್ಲಿ ಗರಿಷ್ಠ 50 ಕೆಜಿ ಮೇವನ್ನು ಒಬ್ಬ ರೈತನಿಗೆ ನೀಡಲಾಗುತ್ತದೆ. ಇದನ್ನು ರೈತ ಹೊಂದಿರುವ ಜಾನುವಾರುಗಳಿಗೆ ಅನುಗುಣವಾಗಿ ನೀಡಲಾಗುತ್ತದೆ. ರೈತರು ತಮ್ಮ ಜಾನುವಾರುಗಳನ್ನು ಸಾಕಿ, ಸಲುಹಬೇಕು. ರೈತರ ಕಷ್ಟಗಳಿಗೆ ಜಿಲ್ಲಾಡಳಿತ, ತಾಲೂಕು ಆಡಳಿತ ಸದಾ ಸ್ಪಂದಿಸಿ, ಬೆನ್ನಿಗಿದೆ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಅವರು ಮಾತನಾಡಿ, ರೈತರು ಬರ ಪರಸ್ಥಿತಿಯಿಂದ ಹೆದರುವ ಅಗತ್ಯವಿಲ್ಲ. ಸರಕಾರ, ಜಿಲ್ಲಾಡಳಿತ ನಿಮ್ಮ ನೆರವಿಗಿದೆ. ರೈತರು ಯಾವುದೇ ಸಮಸ್ಯೆಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಹಾಯವಾಣಿಗೆ ಕರೆ ಮಾಡಿ ತಿಳಿಸಬಹುದು. ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸುತ್ತಾರೆ ಎಂದು ತಿಳಿಸಿದರು.