ಜಿಲ್ಲಾ ಪತ್ರಕರ್ತರ ಭವನ ಸರ್ವ ಪತ್ರಕರ್ತರಿಗೂ ಸಲ್ಲಿಕೆ, ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸಂಕಲ್ಪ..!
ಸಂಜೆವಾಣಿ ವಾರ್ತೆ
ಹನೂರು ಏ 3 :- ಚಾಮರಾಜನಗರ ಜಿಲ್ಲಾ ಕೇಂದ್ರದ ಸರ್ವ ಪತ್ರಕರ್ತರ ಬಳಕೆಗೆಂದೆ ಸರ್ಕಾರದ ವತಿಯಿಂದ ನಿರ್ಮಿಸಿರುವ ಜಿಲ್ಲಾ ಪತ್ರಕರ್ತರ ಭವನವನ್ನು ಆರಂಭದಿಂದಲೂ ಕೇವಲ ಒಂದೇ ಸಂಘಟನೆಯ ಪತ್ರಕರ್ತರ ಗುಂಪೆÇಂದು ಧಮನಕಾರಿ ಧೋರಣೆ ಅನುಸರಿಸುತ್ತ ಬಂದಿದೆ.
ತಮಗೆ ಮಾತ್ರ ಸೀಮಿತ ಹಾಗೂ ತಮ್ಮ ಖಾಸಗಿ ಸ್ವತ್ತೆಂಬಂತೆ ದಬ್ಬಾಳಿಕೆಯಿಂದ ತಮ್ಮ ಸುಪರ್ಧಿಗೆ ತೆಗೆದುಕೊಂಡು ತಮ್ಮದೇ ಪಾಳೇಪಟ್ಟು ಎಂಬಂತೆ ದರ್ಪದಿಂದ ಮೆರೆಯುತ್ತಾ ಅನ್ಯ ಸಂಘಟನೆಗಳ ಪತ್ರಕರ್ತರಿಗೆ ಅನುವು ಮಾಡಿಕೊಡದಿರುವುದರ ವಿರುದ್ದ ಕ್ರಮ ಕೈಗೊಂಡು ಪತ್ರಕರ್ತರ ಭವನ ಸರ್ವ ಪತ್ರಕರ್ತರಿಗೂ ಸದ್ಬಳಕೆಯಾಗುವಂತೆ ಹಾಗೂ ಕಟ್ಟುನಿಟ್ಟಿನ ಚುನಾವಣಾ ನೀತಿ ಸಂಹಿತೆಯನ್ನು ಜಾರಿಗೊಳಿಸುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘದ ಪದಾಧಿಕಾರಿಗಳು ಜಿಲ್ಲಾಧ್ಯಕ್ಷ ಜಿ.ಬಂಗಾರು ನೇತೃತ್ವದಲ್ಲಿ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ರಿಗೆ ದೂರು ಸಲ್ಲಿಸಿದರು.
ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರದ ಅನುದಾನದಲ್ಲಿ ನಿರ್ಮಾಣವಾಗಿರುವ ಪತ್ರಕರ್ತರ ಭವನದಲ್ಲಿ ಚುನಾವಣೆ ವೇಳೆ ಅಕ್ರಮ ನಡೆಯಬಹುದೆಂಬ ವಿಚಾರವಾಗಿ ಈಗಾಗಲೇ ಇದೇ ಸಂಘಟನೆಯವರು ದೂರು ಸಲ್ಲಿಸಿದ್ದ ಮೇರೆಗೆ
ಪತ್ರಕರ್ತರ ಭವನದಲ್ಲಿ ಅಕ್ರಮ ಹಾಗೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕ್ರಮ ವಹಿಸಲು ಜಿಲ್ಲಾ ವಾರ್ತಾಧಿಕಾರಿಗಳಿಗೆ ಡಿಸಿಯವರು ನೊಟೀಸ್ ನೀಡಿದ್ದರು.
ಈಹಿನ್ನೆಲೆಯಲ್ಲಿ ಜಿಲ್ಲಾ ವಾರ್ತಾಧಿಕಾರಿಗಳು ಪತ್ರಕರ್ತರ ಭವನಕ್ಕೆ ಭೇಟಿ ನೀಡಿರುವುದಾಗಿ ತಮಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದ್ದಾಗಿ ರಾಜ್ಯ ಮಟ್ಟದ ಪತ್ರಿಕೆಯೊಂದರಲ್ಲಿ ವರದಿಯಾಗಿತ್ತು. ಆದರೆ ಅದರಲ್ಲಿನ ಸಾರಾಂಶದಂತೆ ವಾರ್ತಾಧಿಕಾರಿಗಳು ಅಲ್ಲಿ ಯಾವುದೇ ರೀತಿಯ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ ಎಂದು ಹೇಳಿದ್ದಾಗಿ ವರದಿ ಪ್ರಕಟವಾಗಿದೆ.
ಆದರೆ ವಾಸ್ತವವಾಗಿ ಪತ್ರಕರ್ತರ ಭವನ ಯಾವ ಇಲಾಖೆಗೆ ಸೇರಿದ್ದು, ಎನ್ನುವುದೇ ಯಾರಿಗೂ ತಿಳಿದಿಲ್ಲ. ಮೂಲಗಳ ಪ್ರಕಾರ ಅದು ಇನ್ನೂ ಲೋಕೋಪಯೋಗಿ ಇಲಾಖೆಯ ನಿವೇಶನ ಎಂದೇ ದಾಖಲೆಯಲ್ಲಿದೆ. ಪತ್ರಕರ್ತರ ಸಂಘದ ಹೆಸರಿಗೆ ಇನ್ನೂ ಬದಲಾವಣೆಯಾಗಿಲ್ಲ. ಹೀಗಿರುವಾಗ ಪತ್ರಕರ್ತರ ಭವನ ಯಾರಿಗೆ ಸೇರಿದ್ದು ಎಂದು ನಿನ್ನೆ ಮೊನ್ನೆಯಷ್ಟೆ ಬಂದ ಅಧಿಕಾರಿಗೆ ತಿಳಿಯಲು ಹೇಗೆ ಸಾಧ್ಯ..?
ಈ ಬಗ್ಗೆ ವಾರ್ತಾ ಇಲಾಖೆಯಲ್ಲಿರುವ ಕಡತ ಪರಿಶೀಲನೆ ಮಾಡಿದಾಗ ಮಾತ್ರ ಪತ್ರಕರ್ತರ ಭವನ ಯಾವ ಇಲಾಖೆಯ ಸ್ವತ್ತು ಎನ್ನುವುದು ತಿಳಿಯಲಿದೆ. ನಗರಸಭೆಯಲ್ಲೂ ಸಹ ಪತ್ರಕರ್ತರ ಭವನ ಪತ್ರಕರ್ತರ ಸಂಘದ ಹೆಸರಿನಲ್ಲಿ ಖಾತೆಯಾಗಿಲ್ಲ ಅದನ್ನು ಸಹ ಪರಿಶೀಲನೆ ಮಾಡಬಹುದಾಗಿದೆ.
ಪತ್ರಕರ್ತರ ಭವನ ಸ್ಥಾಪನೆಯಾದ ದಿನದಿಂದ ಇಂದಿನ ತನಕ ಒಂದು ಸಂಘಟನೆಯವರು ಮಾತ್ರ ಬಳಸುತ್ತಿದ್ದು ಅನ್ಯ ಪತ್ರಕರ್ತರಿಗೆ ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ಹಲವಾರು ಭಾರಿ ವಾರ್ತಾ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಅವರು ಸಹ ಆ ಸಂಘಟನೆಯ ಪರ ಇದ್ದಾರೆ.
ಚುನಾವಣೆ ನಿಮಿತ್ತ ಚಿಕ್ಕಬಳ್ಳಾಪುರದಿಂದ ಚಾಮರಾಜನಗರಕ್ಕೆ ತಾತ್ಕಾಲಿಕವಾಗಿ ಬಂದಿರುವ ಈಗಿನ ವಾರ್ತಾಧಿಕಾರಿಗೆ ಪತ್ರಕರ್ತರ ಭವನದ ಪೂರ್ವಾಪರ ಇತಿಹಾಸ ಸಂಪೂರ್ಣವಾಗಿ ತಿಳಿದಿಲ್ಲ ಮೇಲ್ನೋಟಕ್ಕೆ ಮಾತ್ರ ಮಾಹಿತಿ ಕಲೆ ಹಾಕಿ ತಮಗೆ ಅಸಂಬದ್ದ ಹಾಗೂ ಅಪೂರ್ಣ ವರದಿ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.
ಪತ್ರಕರ್ತರ ಭವನದಲ್ಲಿ ಈ ಹಿಂದೆ ಪತ್ರಕರ್ತರ ಸಂಘಟನೆಯೊಂದು 14-07-2018 ರಂದು ಡಾ. ಅಂಬೇಡ್ಕರ್ ಜಯಂತಿ ವಿಚಾರ ಸಂಕಿರಣ ಹಮ್ಮಿಕೊಳ್ಳಲು ಹೋದಾಗ ಪತ್ರಕರ್ತರ ಭವನಕ್ಕೆ ಬೀಗ ಹಾಕಿಕೊಂಡು ಹೋಗಿ ಅಸ್ಪೃಶ್ಯತೆ ಆಚರಣೆ ಮಾಡಿದ್ದಾರೆ. ಆಗ ಪ್ರತಿಭಟನೆ ನಡೆಸಿದ ಘಟನೆಯೂ ಘಟಿಸಿದೆ. ಈ ಬಗ್ಗೆ ಇವೆಲ್ಲಾ ಬೆಳವಣಿಗೆ ನಡೆಯುತ್ತಿದ್ದರೂ ಸಹ ಹಿಂದಿನ ವಾರ್ತಾಧಿಕಾರಿಗಳು ಒಂದೆ ಸಂಘದವರು ಹೇಳಿದಂತೆ ಕೇಳುತ್ತಿದ್ದರು.
ಆದ್ದರಿಂದ ತಾವು ಪತ್ರಕರ್ತರ ಭವನದ ಬಗ್ಗೆ ವಾರ್ತಾ ಇಲಾಖೆಯಲ್ಲಿರುವ ಕಡತ ಪರಿಶೀಲಿಸಿ ಎಲ್ಲಾ ಪತ್ರಕರ್ತರ ಸಂಘಟನೆಗಳಿಗೂ ಪತ್ರಕರ್ತರ ಭವನ ಬಳಕೆಗೆ ಸಮಾನ ಅವಕಾಶ ನೀಡಬೇಕೆಂದು ಈ ಬಗ್ಗೆ ತಾವು ತಾತ್ಸಾರ ಮನೋಭಾವ ತೋರಿದಲ್ಲಿ ಲೋಕಸಭೆ ಚುನಾವಣೆಯಲ್ಲಿ ಮತದಾನದಿಂದ ದೂರ ಉಳಿಯಲು ನಿರ್ಧಾರ ಕೈಗೊಳ್ಳುವುದಾಗಿ ಆಗ್ರಹಿಸಿದ್ದಾರೆ.
ಜಿಲ್ಲಾಧ್ಯಕ್ಷ ಜಿ ಬಂಗಾರು, ಉಪಾಧ್ಯಕ್ಷ ಚಿನ್ನಸ್ವಾಮಿ, ಜಂಟಿ ಕಾರ್ಯದರ್ಶಿ ಪಾಝಿಲ್, ಅಹಮದ್ ಷರೀಫ್, ಯಳಂದೂರು ತಾಲೂಕು ಘಟಕದ ಅಧ್ಯಕ್ಷ ಮಣಿಕಂಠ ನಾಯಕ್ ಎಚ್, ಡಿ.ಕಾರ್ಯದರ್ಶಿ ಅನಿಲ್ ಕುಮಾರ್ ಜಿ, ಎಂ ನಿರ್ದೇಶಕ ರಾದ,ವೀರಭದ್ರಸ್ವಾಮಿ,ಮಾದೇ ವ ಸ್ವಾಮಿ,ನಿಯೋಗದಲ್ಲಿ ಇದ್ದರು.