ವಿಜ್ಞಾನ ಕೇಂದ್ರಗಳು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುತ್ತಿವೆ : ಸಲಸಾರೆ
ಸಂಜೆವಾಣಿ ವಾರ್ತೆ
ಔರಾದ್ :ಏ.3: ಆಧುನಿಕ ಯುಗದಲ್ಲಿ ವಿಜ್ಞಾನ ತಂತ್ರಜ್ಞಾನದ ಜೊತೆ ನಾವು ಸಮನ್ವಯತೆಯಿಂದ ಬದುಕಬೇಕಿದೆ ಎಂದು ಬೀದರ್ ಕೋರ್ ಚಟುವಟಿಕಾ ವಿಜ್ಞಾನ ಕೇಂದ್ರದ ಮುಖ್ಯಸ್ಥ ಬಾಬುರಾವ ಸಲಸಾರೆ ಹೇಳಿದರು.
ತಾಲೂಕಿನ ಎಕಲಾರ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಬೇಸಿಗೆ ವಿಜ್ಞಾನ ಶಿಬಿರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಮಕ್ಕಳು ಪ್ರತಿಯೊಂದನ್ನೂ ಸ್ವತಃ ನೋಡಿ, ಮಾಡಿ ಕಲಿಯುವ, ಎಲ್ಲದಕ್ಕೂ ಪುರಾವೆ ಕೇಳುವ, ಪ್ರಶ್ನೆ ಕೇಳಿ ತಿಳಿದುಕೊಳ್ಳುವ, ಪ್ರಯೋಗ ಮಾಡಿ ಖಚಿತಪಡಿಸಿಕೊಳ್ಳುವ ಗುಣಗಳು ಬೆಳೆಸಿಕೊಳ್ಳಬೇಕು.
ಅಗಸ್ತ್ಯ ಫೌಂಡೇಶನ್‍ನ ವಿಜ್ಞಾನ ಕೇಂದ್ರಗಳು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುತ್ತ, ಹೊಸ ಹೊಸ ಅನ್ವೇಷಣೆಗಳತ್ತ ಮಕ್ಕಳನ್ನು ಕರೆದೊಯ್ಯುವ ಕೆಲಸ ಮಾಡುತ್ತಿವೆ. ದೂರದೃಷ್ಟಿಯ ಅಧಿಕಾರಿಗಳು, ಪ್ರಮುಖರ ಸಹಕಾರದಿಂದ ಇಂದು ಪ್ರತಿ ತಾಲೂಕಿನಲ್ಲಿ ವಿಜ್ಞಾನ ಕೇಂದ್ರಗಳು ತೆರೆದು ಮಕ್ಕಳಲ್ಲಿ ವಿಜ್ಞಾನ ಜಾಗೃತಿ ಮೂಡಿಸುತ್ತಿವೆ ಎಂದರು.
ವಿಜ್ಞಾನ ಶಿಕ್ಷಕ ಬಾಲಾಜಿ ಅಮರವಾಡಿ ಮಾತನಾಡಿ, ಬೀದರ್ ಜಿಲ್ಲೆಯಲ್ಲಿ ಮಕ್ಕಳ ಗುಣಮಟ್ಟದ ಕಲಿಕೆಗೆ ವಿಜ್ಞಾನ ಕೇಂದ್ರಗಳು ಮಹತ್ವದ ಪಾತ್ರ ವಹಿಸುತ್ತಿವೆ. ನಮ್ಮ ಶಾಲೆಯಲ್ಲಿ ಬೇಸಿಗೆ ವಿಜ್ಞಾನ ಶಿಬಿರ ಹಮ್ಮಿಕೊಂಡಿದ್ದು ನಮ್ಮ ಶಾಲೆಯ ಹಾಗೂ ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ ಎಂದರು.
ಔರಾದ್ ವಿಜ್ಞಾನ ಕೇಂದ್ರದ ಮುಖ್ಯಸ್ಥ ವಿರೇಶ ಪಾಂಚಾಳ, ಮುಖ್ಯ ಶಿಕ್ಷಕ ಪ್ರಭು ಬಾಳೂರೆ, ಶಿಕ್ಷಕರಾದ ವೀರಶೆಟ್ಟಿ ಗಾದಗೆ, ಜೈಸಿಂಗ್ ಠಾಕೂರ್, ಅಂಕುಶ ಪಾಟೀಲ್, ರೂಪಾ ಸೇರಿದಂತೆ ಇನ್ನಿತರರಿದ್ದರು. ಕು. ಸಾಕ್ಷಿ ನಿರೂಪಿಸಿದರೆ, ಕು. ಅನ್ನಪೂರ್ಣ ಸ್ವಾಗತಿಸಿ, ಕು. ವರ್ಷಾ ವಂದಿಸಿದರು. ಕು. ವಿಜಯಲಕ್ಷ್ಮಿ ಸ್ವಾಗತ ಗೀತೆ ಹಾಡಿದರು.