ಮುಕ್ತಿ ಸಂಗ್ರಾಮದ ಕೇಂದ್ರ ಸ್ಥಾನ ಆಳಂದ: ಮಾಜಿ ಶಾಸಕ ಗುತ್ತೇದಾರ
ಆಳಂದ:ಸೆ.19: ಕಲ್ಯಾಣ ಕರ್ನಾಟಕ ಪ್ರದೇಶವನ್ನು ನಿಜಾಮರ ಕೈಯಿಂದ ಮುಕ್ತಿಗೊಳಿಸುವಲ್ಲಿ ಆಳಂದ ತಾಲೂಕಿನ ಪಾತ್ರ ಅತ್ಯಂತ ಮಹತ್ವವಾದುದ್ದು ಎಂದು ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ಅಭಿಪ್ರಾಯಪಟ್ಟರು.
ಆಳಂದ ಪಟ್ಟಣದ ಎಸ್‍ಆರ್‍ಜಿ ಫೌಂಡೇಶನ್‍ನಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ನಿಮಿತ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮದಲ್ಲಿ ಸರ್ದಾರ ವಲ್ಲಭಭಾಯಿ ಪಟೇಲರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ದೇಶ ಸ್ವಾತಂತ್ರ್ಯ ಪಡೆದರೂ ಕೆಲವು ಭಾಗಗಳಲ್ಲಿ ರಜಾಕರ ಹಾವಳಿ ವೀಪರಿತವಾಗಿತ್ತು ಅವರು ಬಲವಂತದ ಮತಾಂತರ, ಅತ್ಯಾಚಾರ, ಕೊಲೆ, ಸುಲಿಗೆ ದರೋಡೆಯಂತಹ ಪೈಶಾಚಿಕ ಕೃತ್ಯಗಳನ್ನು ಮಾಡುತ್ತಿದ್ದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಹುಸಂಖ್ಯಾತ ಹಿಂದುಗಳಿದ್ದರೂ ನಮ್ಮನ್ನು ಆಳುವವರು ಅಲ್ಪಸಂಖ್ಯಾತ ರಾಜರುಗಳಾಗಿದ್ದರು ಅವರು ಈ ಭಾಗವನ್ನು ಸ್ವತಂತ್ರವಾಗಿ ಆಳಲು ನಿರ್ಧರಿಸಿದ್ದರು ಆದರೆ ಸರ್ದಾರ ಪಟೇಲರ ಕ್ಷೀಪ್ರ ಕ್ರಾಂತಿಯಿಂದ ನಿಜಾಮ ಶರಣಾಗಿ ಭಾರತದ ಒಕ್ಕೂಟದೊಳಗೆ ಸೇರಲು ಒಪ್ಪಿದ ಎಂದು ಹೇಳಿದರು.
ವಿಮೋಚನಾ ಚಳುವಳಿಯಲ್ಲಿ ಆಳಂದ ತಾಲೂಕಿನ ಪಾತ್ರ ಅತ್ಯಂತ ಮಹತ್ವವಾದುದ್ದು ಈ ಭಾಗದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ನಿಜಾಮರ ದಬ್ಬಾಳಿಕೆಯನ್ನು ಮೆಟ್ಟಿ ನಿಂತರು ಅಲ್ಲಲ್ಲಿ ಶಿಬಿರಗಳನ್ನು ನಡೆಸಿ ಜನರಲ್ಲಿ ವಿಮೋಚನೆಯ ಜಾಗೃತಿಯನ್ನು ಬಿತ್ತಿದರು. ಎ ವಿ ಪಾಟೀಲ, ಗುರು ಭೀಮರಾವ ಪಾಟೀಲ, ಭೈರಪ್ಪ ಪಾಟೀಲ, ದಿಗಂಬರರಾವ ಕಲ್ಮಣಕರ ಸೇರಿದಂತೆ ಅನೇಕರು ಚಳುವಳಿಯ ಮುಂದಾಳತ್ವ ವಹಿಸಿದ್ದರು ಎಂದು ನುಡಿದರು.
ಗ್ರಾಮಗಳಲ್ಲಿರುವ ಹಿಂದು ಸಮುದಾಯದ ಮೇಲೆ ದಾಳಿ ಮಾಡಿ ಜಮೀನುಗಳಲ್ಲಿಯ ಬೆಳೆ ನಾಶ ಮಾಡುವದು, ಮನೆಗಳನ್ನು ಹಾಗು ದೇವಸ್ಥಾನಗಳನ್ನು ಲೂಟಿ ಮಾಡುವದು, ಹೆಂಗಸರ ಮೇಲೆ ಅತ್ಯಾಚಾರಗೈದು ವಿರೂಪಗೊಳಿಸುವದು, ಮಕ್ಕಳು ಮುದುಕರೆನ್ನದೆ ಕಂಡವರನ್ನೆಲ್ಲ ಕತ್ತಿ, ಕೊಡಲಿ, ಬಂದೂಕುಗಳಿಂದ ಹಿಂಸಿಸಿ ಕೊಲ್ಲುವದು, ರಾಷ್ಟ್ರೀಯ ವಿದ್ಯಾಲಯಗಳ ಮೇಲೆ ದಾಳಿ ಮಾಡುವದು ಇವೆಲ್ಲ ಪ್ರಜಾ ಚಳುವಳಿಯನ್ನು ಹತ್ತಿಕ್ಕಲು ರಜಾಕಾರರು ಕಂಡುಕೊಂಡ ತಂತ್ರಗಳಾಗಿದ್ದವು ಎಂದು ಹೇಳಿದರು.
ಆ. 15ರಂದು ಭಾರತ ಸ್ವತಂತ್ರವಾಯಿತು. ಆದರೆ ಆಗ ಭಾರತದೊಡನೆ ವಿಲೀನವಾಗಲು ಬಯಸಿದ ತನ್ನ ಸಂಸ್ಥಾನದ ಬಹುಜನರ ಅಭಿಪ್ರಾಯವನ್ನು ವಿರೋಧಿಸಿದ ಹೈದರಾಬಾದಿನ ನಿಜಾಮ ಮೀರ್ ಉಸ್ಮಾನ್ ಅಲಿ, “ಡೆಕ್ಕನ್ ರೇಡಿಯೋ” (ಅಥವಾ “ನಿಜಾಮ್ ರೇಡಿಯೋ”) ಮೂಲಕ ಹೈದರಾಬಾದ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿದ. ನಿರೀಕ್ಷೆಯಂತೆ ಪಾಕಿಸ್ತಾನವು ಹೈದರಾಬಾದ ಸ್ವತಂತ್ರ ರಾಷ್ಟ್ರವೆಂದು ಮಾನ್ಯ ಮಾಡಿದ ಮೊದಲ ದೇಶವಾಯಿತು. ಭಾರತಕ್ಕೆ ಸ್ವಾತಂತ್ರ್ಯ ದೊರೆಯುವ ಹಲವು ವರ್ಷಗಳು ಮೊದಲಿನಿಂದ, ನಿಜಾಮ್ “ಸೋಲರಿಯದ ಅಲ್ಲಾಹುವಿನ ಸೈನಿಕರು” ಎಂದು ಕರೆದು ಕೊಳ್ಳುತ್ತಿದ್ದ ತನ್ನ ಸೇನೆಗೆ ಮತ್ತು ನಿಜಾಂ ಪೆÇೀಲಿಸರಿಗೆ ಬ್ರಿಟಿಷರ ಸೇನಾಧಿಕಾರಿಗಳಿಂದ ತರಬೇತಿ ಶಿಬಿರಗಳನ್ನು ನಡೆಸಿದ್ದ ಮತ್ತು ಆಗ ಪ್ರಸಿದ್ಧವಾಗಿದ್ದ ಸಿಡ್ನಿ ಕಾಟನ್ ಬಂದೂಕುಗಳು ಮತ್ತು ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ಸಂಗ್ರಹಿಸಿದ್ದ. ಆ ಕಾಲಲ್ಲಿ ವಿಶ್ವದ ಗಣನೀಯ ಶ್ರೀಮಂತರಲ್ಲಿ ಒಬ್ಬನಾಗಿದ್ದ ನಿಜಾಮ್ ಮೀರ್ ಉಸ್ಮಾನ್ ಅಲಿಗೆ, ಹೈದರಾಬಾದ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಲು ಬ್ರಿಟಿμï ಹಾಗು ಪಾಕಿಸ್ತಾನಿ ರಾಜಕಾರಣಿಗಳ ಪ್ರತ್ಯಕ್ಷ ಮತ್ತು ಪರೋಕ್ಷ ಬೆಂಬಲವಿತ್ತು ಎಂದು ತಿಳಿಸಿದರು.
ಬಿ.ಎಡ್ ಕಾಲೇಜು ಪ್ರಾಚಾರ್ಯ ಡಾ. ಅಶೋಕರೆಡ್ಡಿ, ವಿಕೆಜಿ ಪದವಿ ಕಾಲೇಜು ಪ್ರಾಚಾರ್ಯ ಕಲ್ಯಾಣಿ ಸಾವಳಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹ ಆಡಳಿತಾಧಿಕಾರಿ ಹಣಮಂತ ಶೇರಿ, ಡಾ. ಅಪ್ಪಾಸಾಬ ಬಿರಾದಾರ, ಶ್ರೀಧರ ಪಾಟೀಲ, ಜ್ಯೋತಿ ವಿಶಾಕ್ ಸೇರಿದಂತೆ ಸಂಸ್ಥೆಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಹಾನಂದಾ ಕಲಶೆಟ್ಟಿ ನಿರೂಪಿಸಿದರು. ವಿಜಯಲಕ್ಷ್ಮೀ ನಾಗೂರೆ ವಂದಿಸಿದರು.