ಸಿಎಂ ಸಿದ್ದರಾಮಯ್ಯರಿಂದ ರಾಜ್ಯದ ಜನರಿಗೆ ಅನ್ಯಾಯ
ಹುಮನಾಬಾದ್ : ಸೆ.19:ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಭ್ರಷ್ಟಚಾರ ಮಾಡುವುದು ಹೆಚ್ಚಾಗಿದೆ. ಇದರಿಂದಾಗಿ ರಾಜ್ಯದ ಜನರಿಗೆ ಅನ್ಯಾಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಯಡಿಯೂರಪ್ಪ ಆರೋಪಿಸಿದರು.
ತಾಲೂಕಿನ ಹುಡಗಿ ಗ್ರಾಮದ ಖಾಸಗಿ ಸಭಾ ಮಂಟಪದಲ್ಲಿ ಬಿಜೆಪಿ ಮಂಡಲ್ ವತಿಯಿಂದ ಬುಧವಾರ ಆಯೋಜಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಪರಿಶೀಲನೆ ಸಭೆ ಉದ್ದೇಶಿಸಿ ಮಾತನಾಡಿದರು.
ಸುಳ್ಳು ಭರವಸೆಗಳ ಆಧಾರದ ಮೇಲೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ರಾಜ್ಯದ ಜನರಿಗೆ ಅನ್ಯಾಯ ಮಾಡುತ್ತಿದೆ. ಜತೆಗೆ ಜನ ವಿರೋಧಿ ಆಡಳಿತಕ್ಕೆ ಹೆಸರುವಾಸಿಯಾದೆ. ಇದನ್ನೆಲ್ಲ ಮುಚ್ಚಿಕೊಳ್ಳುವ ನಿಟ್ಟಿನಲ್ಲಿ ಸಿಎಂ. ಸಿದ್ದರಾಮಯ್ಯ ನೇತೃಯ್ವದಲ್ಲಿ ಜನಾಂಧೋಲನೆ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಮಾತನಾಡಿ, ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಯಾವ ಪ್ರಮುಖರು ಹೆಚ್ಚು ಸದಸ್ಯತ್ವ ಮಾಡುತ್ತಾರೆ ಅವರಿಗೆ ಹುಮನಾಬಾದ್, ಬಸವಕಲ್ಯಾಣ, ಬೀದರ್ ದಕ್ಷಿಣ ಹಾಗೂ ಔರಾದ್ ಕ್ಷೇತ್ರದ ಶಾಸಕರು ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸಕ್ಕೆ ಕರೆದುಕೊಂಡು ಹೋಗುವ ಆಶ್ವಾಸನೆ ನೀಡಿದ್ದಾರೆ. ಹೀಗಾಗಿ ಎಲ್ಲರೂ ಚುರುಕಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಶಾಸಕರಾದ ಡಾ. ಸಿದ್ದು ಪಾಟೀಲ್, ಡಾ. ಶೈಲೇಂದ್ರ ಬೆಲ್ದಾಳೆ, ಶರಣು ಸಲಗಾರ್, ಪ್ರಭು ಚವ್ಹಾಣ, ವಿಧಾನ ಪರಿಷತ್ ಸದಸ್ಯ ಎಮ್.ಜಿ. ಮೂಳೆ, ಮಾಜಿ ಶಾಸಕ ಪಿ. ರಾಜು, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ಪ್ರಮುಖರಾದ ಸುಭಾಷ ಕಲ್ಲೂರ್, ಈಶ್ವರಸಿಂಗ್ ಠಾಕೂರ್, ಬಸವರಾಜ ಆರ್ಯ, ನಿತಿನ್ ಗುತ್ತೆದಾರ್, ಸಂತೋಷ ಪಾಟೀಲ್, ಅನಿಲ ಪಸಾರ್ಗಿ, ರವಿ ಹೊಸಳ್ಳಿ ಇದ್ದರು.
ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ:
ಶಾಸಕರ ನಾಲಿಗೆ ಕತ್ತಿರಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ನೀಡಿರುವ ಹೇಳಿಕೆ ಕೇಳಿಕೊಂಡು ನಮ್ಮ ಕಾರ್ಯಕರ್ತರು ಸುಮ್ಮನಿರುವುದಿಲ್ಲ. ಎನ್ನುವ ವಿಚಾರ ಸ್ಥಳೀಯ ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಬಿ.ವೈ. ವಿಜಯೇಂದ್ರ ಎಚ್ಚರಿಕೆ ನೀಡಿದರು.
ತಾಲೂಕಿನ ಹುಡಗಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಮನಾಬಾದ್ ಶಾಸಕ ಡಾ. ಸಿದ್ದು ಪಾಟೀಲ್ ವಿರುದ್ಧ ಮಾತನಾಡಿದ ಶಾಸಕ ಯಾರೇ ಆಗಿರಲಿ ಮೊದಲು ಅವನು ಅರ್ಥ ಮಾಡಿಕೊಳ್ಳಲಿ, ಈ ರೀತಿ ಒಬ್ಬರ ಬಗ್ಗೆ ಇಷ್ಟು ಹಗುರವಾಗಿ ಮಾತನಾಡಿದರೆ ನಮ್ಮ ಕಾರ್ಯಕರ್ತರು ಅವನಿಗೆ ನಡು ರಸ್ತೆಯಲ್ಲಿ ಓಡಾಲು ಬಿಡುವುದಿಲ್ಲ ಎಂದು ಏಕವಚನದಲ್ಲೇ ವಾಕ್‍ಸಮರ ನಡೆಸಿದರು.