ಪ್ರತಿಭಾ ಕಾರಂಜಿಯಲ್ಲಿ ಮಕ್ಕಳ ಕಲೆಗಳ ಕಲರವ
ಚಿಂಚೋಳಿ:ಸೆ.19: ತಾಲ್ಲೂಕಿನ ಚಂದಾಪುರ ಪಟ್ಟಣದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಕೆ.ಪಿ.ಎಸ್ ಶಾಲೆಯಲ್ಲಿ ಆಯೋಜಿಸಲಾಗಿದ್ದ 2024 ಮತ್ತು 25 ನೇ ಸಾಲಿನ ಚಿಂಚೋಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳ ಕಲೆಗಳ ಕಲರವ ಕಣ್ಮನ ಸೆಳೆಯಿತು.
ಚಿಂಚೋಳಿಯ ಕ್ಲಸ್ಟರ್ ನ ವಿವಿಧ ಶಾಲೆಗಳ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮಲ್ಲಿರುವ ಕಲೆಗಳನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ನೃತ್ಯ,ಗಾಯನ,ಚಿತ್ರಕಲೆ ಹಾಗೂ ಛದ್ಮ ವೇಶದಂತಹ ನಾಟಕ ಕೀರ್ತನೆಗಳ ಮೂಲಕ ತಮ್ಮ ಪ್ರತಿಭೆಗಳನ್ನು ಹೊರಹಾಕಿದ ಮಕ್ಕಳ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಸೇರಿದಂತೆ ವೇದಿಕೆಯ ಮೇಲಿದ್ದ ಅತಿಥಿಗಳು ಕೂಡ ತಲೆದೂಗಿದರು. ಇನ್ನು ಚಂದಾಪುರ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಕೆ.ಪಿ.ಎಸ್. ಶಾಲೆಯ 4ನೇ ತರಗತಿಯ ಪ್ರತಿಕ್ಷಾ ತಂದೆ ಕೃಷ್ಣಕುಮಾರ ಧರಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮಳ ಛದ್ಮ ವೇಶ ಹಾಗೂ ದೇಶಭಕ್ತಿಯ ನುಡಿಗಳು ಎಲ್ಲರ ಗಮನ ಸೆಳೆಯಿತು.
ಇನ್ನು ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ್ದ ಸರಕಾರಿ ಪದವಿ ಪೂರ್ವ ಕಾಲೇಜಿನ ಪಾಚಾರ್ಯ ಮಲ್ಲಿಕಾರ್ಜುನ ಪಾಲಮೂರ ಕಾರ್ಯಕ್ರಮದ ಕುರಿತು ಮಾತನಾಡಿ, ಕೇವಲ ಓದು ಬರಹದಲ್ಲಿ ಮುಂದಿದ್ದರೆ ಮಾತ್ರ ನಾವು ಅಂತಹ ವಿದ್ಯಾರ್ಥಿಗಳಿಗೆ ಪ್ರತಿಭಾವಂತರೆಂದು ಪ್ರಶಂಸಿಸುತ್ತೇವೆ ಆದರೆ, ಇಂತಹ ಕಲೆಗಳನ್ನು ಹೊಂದಿರುವ ಮಕ್ಕಳಿಗೂ ಕೂಡ ಪ್ರಶಂಸಿಸಬೇಕು.ಅವರಲ್ಲಿನ ಪ್ರತಿಭೆಗಳಿಗೆ ಪೆÇ್ರೀತ್ಸಾಹಿಸಿ ಬೆನ್ನು ತಟ್ಟಿದಾಗ ಅವರು ಕೂಡ ತಮ್ಮ ಪ್ರತಿಭೆಯಲ್ಲಿ ಇನ್ನು ಹೆಚ್ಚಿನ ಆಸಕ್ತಿ ತೋರಿಸಿ ನಾಡಿನ ಕೀರ್ತಿ ಹೆಚ್ಚಿಸುವಂತವರಾಗುತ್ತಾರೆ ಎಂದರು.
ಬಳಿಕ ಮಾತನಾಡಿದ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಜಯಪ್ಪ ಚಾಪಲ್, ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತರುವ ಸಲುವಾಗಿ ಕಲ್ಪಿಸಿಕೊಡುವ ಸೂಕ್ತ ವೇದಿಕೆಯೇ ಈ ಪ್ರತಿಭಾ ಕಾರಂಜಿ ಇಲ್ಲಿ ಮಕ್ಕಳಲ್ಲಿರುವ ಪ್ರತಿಭೆಗಳು ಹೊರ ಬರುತ್ತವೆ ಎಂದರು. ಬಳಿಕ ಸುರೇಶ ಕೊರವಿ ಮತ್ತು ಕ್ಲಸ್ಟರ್ ನ ಸಿ.ಆರ್.ಪಿ. ಮೀನಾಕ್ಷಿ ಮಧುಗಿರಿ ಕಾರ್ಯಕ್ರಮದ ಕುರಿತು ಮಾತನಾಡಿದರು.
ನಂತರದಲ್ಲಿ ಪ್ರತಿಭಾ ಕಾರಂಜಿಯ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪಾರಿತೋಷಕವನ್ನು ನೀಡಿ ಹುರಿದುಂಬಿಸಲಾಯಿತು. ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲಕ್ಷ್ಮಯ್ಯ ವಿ ,ಅತಿಥಿಗಳಾಗಿ ಶಿವಕುಮಾರ ಬಿರಾದಾರ, ಮಕ್ಸುದ ಅಲಿ, ನಿಸ್ಸಾರ ಅಹ್ಮದ, ಅಶ್ವಥ ಸೇರಿದಂತೆ ಕ್ಲಸ್ಟರ್ ನ ವಿವಿಧ ಶಾಲೆಗಳ ಮುಖ್ಯಗುರುಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಿ.ಆರ್.ಪಿ.ಮೀನಾಕ್ಷಿ ಮಧುಗಿರಿ ನಿರೂಪಿಸಿದರೆ, ಮುಖ್ಯಗುರು ಗೋಪಾಲ ಎಂಪಳ್ಳಿ ವಂದಿಸಿದರು.