12ನೇ ಶತಮಾನವು ಸಮಾನತೆ ಕಂಡು ಸಮಾಜಕ್ಕೆ ಕಾಣಿಸಿದ ಕಾಲವದು: ದಾಸರ್
ಅಫಜಲಪುರ: ಸೆ.19:12ನೇ ಶತಮಾನವು ಬಹು ಮುಖ್ಯವಾದ ಕಾಲಘಟ್ಟವದು. ಸಮಾನತೆಯನ್ನು ಕಂಡು ಸಮಾಜಕ್ಕೆ ಕಾಣಿಸಿದ ಕಾಲವದು ಎಂದು ತಹಸೀಲ್ದಾರ್ ಸಂಜೀವಕುಮಾರ ದಾಸರ್ ತಿಳಿಸಿದರು.
ಪಟ್ಟಣದ ರೇವಣಸಿದ್ಧ ಹೂಗಾರ್ ಅವರ ನಿವಾಸದಲ್ಲಿ ಬಸವಾದಿ ಶರಣ ಶ್ರೀ ಹೂಗಾರ ಮಾದಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಅನೇಕ ಸಮಾಜದಿಂದ ಬಂದ ಶರಣರ ಅನುಭವದ ಸಮಾಗಮದ ಕಾಲದಲ್ಲಿ ವಿವಿಧ ಕಾಯಕದ ಆಧಾರದ ಮೇಲೆ ಗುರುತಿಸಿಕೊಂಡ ಶರಣರು ಒಂದೆಡೆ ಸೇರಿ ಸಮ ಸಮಾಜ ನಿರ್ಮಾಣದಲ್ಲಿ ತೊಡಗಿದ್ದ ಕಾಲವು ಇಂದಿಗೂ ಆದರ್ಶ ಮತ್ತು ಪ್ರಸ್ತುತ. ಇಂತಹ ಅನೇಕ ಶರಣರಲ್ಲಿ ಹೂಗಾರ ಮಾದಯ್ಯನವರು ಒಬ್ಬರು. ಅಂತಹ ಶರಣರ ಆದರ್ಶಮಯ ಬದುಕನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕು. ಸರ್ಕಾರ ಇಂದು ಹತ್ತು ಹಲವು ಯೋಜನೆಗಳನ್ನು ರೂಪಿಸಿದ್ದು ಅಂತಹ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡಬೇಕು ಮತ್ತು ಶರಣರ ಆದರ್ಶಮಯ ಬದುಕನ್ನು ಅವರ ಬದುಕಿನಲ್ಲಿ ರೂಪಿಸಿಕೊಳ್ಳುವಂತೆ ಮಾರ್ಗದರ್ಶನ ನೀಡಬೇಕೆಂದು ಸಲಹೆ ನೀಡಿದರು.
ಉಪನ್ಯಾಸಕರಾಗಿ ಆಗಮಿಸಿದ ಶಿಕ್ಷಕ ಬಾಪುಗೌಡ ಬಿರಾದಾರ್ ಮಾತನಾಡಿ, ಮನುಷ್ಯನ ಪ್ರತಿಯೊಂದು ಧರ್ಮ ಸಂಸ್ಕಾರಗಳು ಆರಂಭವಾಗುವುದು ಹೂಗಾರ ಸಮಾಜದ ಕಾಯಕದಿಂದ. ದೇವರು ಮತ್ತು ಮನುಷ್ಯನ ಪ್ರತಿಯೊಂದು ಹಂತಕ್ಕೂ ಹೂಗಾರ ಸಮಾಜ ಬೇಕು. ಹೂಗಾರ ಮಾದಯ್ಯನವರು ಕೇವಲ ಹೂಗಾರ ಸಮುದಾಯಕ್ಕೆ ಮಾತ್ರ ಸೀಮಿತವಲ್ಲ ಅವರು ಇಡೀ ಮನುಕುಲದ ಆಸ್ತಿ ಎಂದು ಭಾವಿಸಿಕೊಳ್ಳುವಂತಾಗಬೇಕು. ಮಾದಯ್ಯನವರು ಬರೆದಿರುವ ವಚನಗಳು ಸಿಕ್ಕಿಲ್ಲ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿರುವುದು ವಿಪರ್ಯಾಸ ಆದರೆ ಹುಡುಕುವ ಪ್ರಯತ್ನವಾಗಿಲ್ಲ ಎಂದಷ್ಟೇ ಹೇಳಬಹುದು. ಕೆಲವು ಅನಾಮಧೇಯ ವಚನಗಳು ಸಿಕ್ಕಿವೆ ಮತ್ತು ಕೆಲವು ಅನಾಮಧೇಯ ವಚನಕಾರರು ಸಿಕ್ಕಿದ್ದಾರೆ ಎಂಬ ಮಾತುಗಳು ಎಲ್ಲೆಡೇ ಕೇಳಿ ಬಂದರೂ ಸಹ ಇನ್ನು ಸರಿಯಾದ ಸಂಶೋಧನೆಯ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟ ಅವರು ಹೂಗಾರ ಮಾದಯ್ಯನವರ ಜೀವನ ಚರಿತ್ರೆಯನ್ನು ವಿವರಿಸಿದರು.
ಆಶಾಕಿರಣ ಸೇವಾ ಸಂಸ್ಥೆಯ ಅಧ್ಯಕ್ಷೆ ಪ್ರಭಾವತಿ ಮೇತ್ರಿ ಅವರು ಮಾತನಾಡಿ, ಹೂಗಾರ ಸಮಾಜ ಇದೊಂದು ಜಾತಿಯಲ್ಲ ಇದೊಂದು ಸಂಸ್ಕøತಿ. ಪ್ರತಿ ಗ್ರಾಮದಲ್ಲಿ ಐದಾರು ಮನೆಗಳಿರುವ ಹೂಗಾರರು ಪ್ರತಿ ಮನೆಗೂ ದೇವರ ಪೂಜೆಗೆಂದು ಹೂ ಪತ್ರಿ ನೀಡಿ ಅದರಿಂದ ಬಂದ ದವಸ ಧಾನ್ಯಗಳನ್ನು ಪಡೆಯುವವರು. ದೇವಸ್ಥಾನಗಳಲ್ಲಿ ದೇವರ ಪೂಜೆ ಮಾಡುವವರು ಮತ್ತು ಎಲ್ಲ ಸಮುದಾಯಕ್ಕೂ ಬೇಕಾದವರು. ಹೀಗಾಗಿ ಇಂತಹ ಹಿಂದುಳಿದ ಸಮಾಜವು ಎಲ್ಲ ಸ್ಥರಗಳಲ್ಲಿ ಮುಂದೆ ಬರಬೇಕು. ಹೂಗಾರ ಮಾದಯ್ಯನವರ ಜಯಂತಿಯನ್ನು ಸರ್ಕಾರದ ಮಟ್ಟದಲ್ಲಿ ಆಚರಿಸಲು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಹೂಗಾರ ಸಮಾಜದ ಅಭಿವೃದ್ಧಿ ನಿಗಮ ಮಂಡಳಿಗೆ ಹೆಚ್ಚಿನ ಅನುದಾನ ಮೀಸಲಿರಿಸಬೇಕು ಎಂದು ಒತ್ತಾಯಿಸಿದರು.
ಪುರಸಭೆಯ ಮುಖ್ಯಾಧಿಕಾರಿ ವಿಜಯಮಹಾಂತೇಶ ಹೂಗಾರ ಮಾತನಾಡಿ, ಯಾವುದೇ ಕ್ಷೇತ್ರದಲ್ಲಿ ಮುಂದೆ ಬರಲು ಸಾಮಾಜಿಕ ಪ್ರಜ್ಞೆ ಮತ್ತು ಶಿಕ್ಷಣ ಬಹಳ ಅವಶ್ಯ. ಹೀಗಾಗಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಸಮುದಾಯದ ಸಂಘಟನೆ ಮತ್ತು ಬಲವರ್ಧನೆ ಮಾಡಬೇಕು ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ ಚಾಂದಕವಟೆ, ಹಿರಿಯ ಸಾಹಿತಿ ಬಿ.ಎಂ ರಾವ್ ಅನೇಕರು ಮಾತನಾಡಿದರು.
ಸಾನಿಧ್ಯವನ್ನು ಚಿಂಚೋಳಿಯ ಆನಂದಾಶ್ರಮಠದ ಶರಣಬಸವ ಶರಣರು ವಹಿಸಿಕೊಂಡರು.
ಅಧ್ಯಕ್ಷತೆಯನ್ನು ಹೂಗಾರ ಸಮಾಜದ ತಾಲೂಕು ಅಧ್ಯಕ್ಷ ಮಡಿವಾಳ ಹೂಗಾರ ಹಾಗೂ
ಕಾರ್ಯಕ್ರಮದ ನೇತೃತ್ವ ರೇವಣಸಿದ್ಧ ಹೂಗಾರ ವಹಿಸಿಕೊಂಡರು.
ಮುಖ್ಯ ಅತಿಥಿಗಳಾಗಿ ಕಂಪ್ಯೂಟರ್ ಶಿಕ್ಷಕ ಸುಭಾಷ ತೇಲಿ, ಡಾ. ಸಚೀನ್ ಹೂಗಾರ, ಸದಾಶಿವ ಮೇತ್ರಿ ಆಗಮಿಸಿದ್ದರು.
ಸ್ವಾಗತವನ್ನು ಕು. ವಿಜಯಲಕ್ಷ್ಮಿ ಹೂಗಾರ, ನಿರೂಪಣೆಯನ್ನು ಪತ್ರಕರ್ತ ಅರುಣಕುಮಾರ ಹೂಗಾರ ಹಾಗೂ ವಂದನಾರ್ಪಣೆಯನ್ನು ಹೂಗಾರ ಸಮಾಜದ ತಾಲೂಕು ಪ್ರಧಾನ ಕಾರ್ಯದರ್ಶಿ ಸಿದ್ದಾರಾಮ ಅವಟೆ ನಡೆಸಿಕೊಟ್ಟರೆ ವಚನ ಪ್ರಾರ್ಥನೆಯನ್ನು ಮಹಾನಂದಾ ಸಿ. ಮಾಲಿಪಾಟೀಲ ಹವಳಗಾ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಸಿದ್ದನಗೌಡ ಮಾಲಿಪಾಟೀಲ್ ಹವಳಗಾ, ರಾಜೇಂದ್ರ ನರೋಣಿ, ಬಸವರಾಜ ಕೆಂಗನಾಳ, ರಮೇಶ ಹೂಗಾರ, ಗ್ರಾ.ಪಂ ಸದಸ್ಯ ಅಶೋಕ ಹೂಗಾರ, ಮಹೇಶ ಆಲೇಗಾಂವ, ಶಿವಾನಂದ ಹೂಗಾರ, ಶಂಕ್ರೆಪ್ಪ ಮಣೂರ,
ಸಿದ್ದೇಶ್ವರ ಹೂಗಾರ, ಶಿವಶರಣ ಕುಂಬಾರ, ಬಸವರಾಜ ಹೂಗಾರ ರೇವೂರ, ರವಿ ಗೌರ, ಶಿವಲಿಂಗ ಹೂಗಾರ, ಸಿದ್ದಮ್ಮ ರೇ. ಹೂಗಾರ, ಪ್ರತಿಭಾ ಮಹೀಂದ್ರಕರ, ವಿಜಯಕುಮಾರ ಹೂಗಾರ, ಶೀತಲ ತೇಲಿ, ಆರ್.ಡಿ ಪೂಜಾರಿ, ಗೋಪಾಲ ಮಾಂಗ, ನಿಂಗಣ್ಣ ಹೂಗಾರ, ಗಿರಿಮಲ್ಲಪ್ಪ ಹೂಗಾರ ಮುಂತಾದವರು ಉಪಸ್ಥಿತರಿದ್ದರು.
ಸಾಧಕರಿಗೆ ವಿಶೇಷ ಸನ್ಮಾನ:
ನವೆಂಬರ್ ತಿಂಗಳಿನಲ್ಲಿ ನಡೆಯುವ ಕನ್ನಡ ಸಾಹಿತ್ಯ ಪರಿಷತ್ತಿನ 7ನೇ ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಸಾಹಿತಿ ಬಿ.ಎಂ ರಾವ್, ಪುರಸಭೆಯ ಮುಖ್ಯಾಧಿಕಾರಿ ವಿಜಯಮಹಾಂತೇಶ್ ಹೂಗಾರ, ಬೆಂಗಳೂರು ದವಾಖಾನೆಯ ವೈದ್ಯ ಡಾ. ಸಚಿನ ಹೂಗಾರ, ಬ್ರಿಲಿಯಂಟ್ ಕಂಪ್ಯೂಟರ್ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುಭಾಷ ತೇಲಿ ಹಾಗೂ ಆಶಾಕಿರಣ ಸೇವಾ ಸಂಸ್ಥೆಯ ಅಧ್ಯಕ್ಷೆ ಪ್ರಭಾವತಿ ಮೇತ್ರಿ ಅವರಿಗೆ ಸತ್ಕರಿಸಲಾಯಿತು.
