ಪಾರ್ವತಿ ಪ್ರತಿರೂಪ ಹೆಣ್ಣು, `ತಾಯ್ತನ’ ಪೂರ್ವಜನ್ಮದ ಫಲಹೆಣ್ಣು ಹುಣ್ಣಲ್ಲ, ಜಗದ ಕಣ್ಣು !
ಕಲಬುರಗಿ:ಏ.02: ಭಾರತದಲ್ಲಿ ತಾಯಿ’ಗೆ ವಿಶೇಷ ಗೌರವವಿದೆ. ತಾಯ್ತನ ಎನ್ನುವುದು ಪೂರ್ವ ಜನ್ಮದ ಫಲ. ಹೆಣ್ಣು ಸಾಕ್ಷಾತ ಪಾರ್ವತಿ ರೂಪವೇ ಆಗಿರುತ್ತಾಳೆ ಎಂದು ಭಕ್ತಕೋಟಿ ಜನಕ್ಕೆ ಮನವರಿಕೆ ಮಾಡಿಕೊಟ್ಟವರು ಚಿನ್ಮಯಗಿರಿಯ ಶ್ರೀಗುರು ಮಹಾಂತೇಶ್ವರ ಮಠದ ಪೀಠಾಧಿಪತಿ ಪೂಜ್ಯಶ್ರೀ ಷ.ಬ್ರ. ವೀರ ಮಹಾಂತೇಶ್ವರ ಶಿವಾಚಾರ್ಯರು. ಅವರು ಸೋಮವಾರ 3ನೇ ದಿನದಂದು ಸಂಜೆವರದಾನೇಶ್ವರಿ ಶ್ರೀ ಗುಡ್ಡಾಪೂರ ದಾನೇಶ್ವರಿ’ ಪುರಾಣವನ್ನು ಹೇಳುತ್ತಾ, ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿತ್ತು ಎಂಬ ಭಾವ ಒಂದು ಕಾಲದಲ್ಲಿತ್ತು. ಆ ಭಾವ ಬೇಡ. ಹೆಣ್ಣು ಹುಟ್ಟಿದ ಮನೆ ತಣ್ಣಗೆನ್ನಬೇಕು ಎಂದು ಸಲಹೆ ನೀಡಿದಳು.
ಇವತ್ತು ಕಡಣಿಯಲ್ಲಿ ಶಿರಸಮ್ಮ ಮತ್ತು ಅನಂತರಾಯ ದಂಪತಿಗಳ ಒಡಲ ಕುಡಿಯಾಗಿ `ಲಿಂಗಮ್ಮ’ ಎಂಬ ಹೆಸರಿನಲ್ಲಿ ದಾನಮ್ಮ ತಾಯಿ ಅವತರಿಸಿ ಬಂದಿದ್ದಾಳೆ. ದಾನಮ್ಮ, ಪಾರ್ವತಿ ಪ್ರತಿರೂಪವಾಗಿಯೇ ಅವತರಿಸಿ ಬಂದಿದ್ದಾಳೆ ಎಂದರು.
ಶರಣಸಿರಸಗಿಯ ಪೂಜ್ಯಶ್ರೀ ರುದ್ರಮುನಿ ದೇವರು, ನಿವೃತ್ತ ಶಿಕ್ಷಕ, ಆಧ್ಯಾತ್ಮಿಕ ಚಿಂತಕ ವ್ಹಿ.ಎಸ್. ಚತುರಾಚಾರ್ಯಮಠ ಉಪಸ್ಥಿತರಿದ್ದರು.
ತೊಟ್ಟಿಲು (ನಾಮಕರಣ) ಸಮಾರಂಭ ಅತ್ಯಂತ ವೈಭವದಿಂದ ನಡೆಯಿತು. ಜಾತ್ಯಾತೀತ ಜನತಾದಳದ ಯುವ ನಾಯಕ ಕೃಷ್ಣಾರೆಡ್ಡಿ ಸೇರಿದಂತೆ ಹೊನ್ನಕಿರಣಗಿ, ತಾಡತೆಗನೂರು, ಹಾರುತಿ ಹಡಗಿಲ್ ಸೇರಿದಂತೆ ಸಹಸ್ರಾರು ಭಕ್ತರು ಇದಕ್ಕೆ ಸಾಕ್ಷಿಯಾಗಿದ್ದರು.
ಸಂಗೀತ ಸೇವೆ ಸಿಂಧಗಿಯ ಸಂತೋಷ ಹರಸೂರಮಠ ನೇತೃತ್ವದ ಕಲಾ ಬಳಗದವರಿಂದ ನಡೆಯಿತು.
ಇದೇ ಸಂದರ್ಭದಲ್ಲಿ ಕಡಣಿ ಗ್ರಾಮದ ಉರ್ದು ಮಾಧ್ಯಮದ ಪ್ರಾಥಮಿಕ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ನೀಡಿ ಪುರಸ್ಕರಿಸಲಾಯಿತು.