ಏ. 7ರಂದು ಸ್ಟಾರ್ ಕೆಯರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭೋತ್ಸವ
ಕಲಬುರಗಿ:ಏ.02:ನಗರದಲ್ಲಿ 40 ಹಾಸಿಗೆ ಸಾಮಥ್ಯರ್ಥದ ಸುಸಜ್ಜಿತ ಅತ್ಯಾಧುನಿಕ ಸ್ಟಾರ್ ಕೆಯರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭೋತ್ಸವವನ್ನು ಬೆಳಿಗ್ಗೆ 9 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ಪ್ರಶಾಂತ್ ಮಾಲಿ ಅವರು ಹೇಳಿದರು.
ನಗರದ ಗುಬ್ಬಿ ಕಾಲೋನಿಯ ಮುಖ್ಯ ರಸ್ತೆಯಲ್ಲಿರುವ ನೂತನ ಆಸ್ಪತ್ರೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನುರಿತ ವೈದ್ಯರ ತಂಡವು ಸೇರಿ ಈ ಭಾಗದ ಜನರ ಆರೋಗ್ಯದ ಹಿತದೃಷ್ಟಿಯಿಂದ ಒಂದು ಒಳ್ಳೆಯ ಆಸ್ಪತ್ರೆಯನ್ನು ನಾವು ಆರಂಭಿಸುತ್ತಿದ್ದೇವೆ ಎಂದರು.
ಆಸ್ಪತ್ರೆಯಲ್ಲಿನ ವೈದ್ಯರು ಒಂದೊಂದು ವಿಭಾಗದಲ್ಲಿ ಒಂದೊಂದು ರೀತಿಯಲ್ಲಿ ಪರಿಣಿತಿಯನ್ನು ಪಡೆದಿದ್ದು, ಎಲ್ಲರ ಸೇವೆಯನ್ನು ಪಡೆದುಕೊಂಡು ಈ ಭಾಗದ ರೋಗಿಗಳ ಸಮಸ್ಯೆಗಳಿಗೆ ತ್ವರಿತವಾಗಿ ಹಾಗೂ ಪರಿಣಾಮಕಾರಿಯಾಗಿ ಸ್ಪಂದಿಸಲು ಆಸ್ಪತ್ರೆಯು ದಿನದ 24 ಗಂಟೆಗಳ ಅವಧಿಯವರೆಗೂ ಸಹ ಸೇವೆ ಒದಗಿಸಲಿದೆ ಎಂದು ಅವರು ಹೇಳಿದರು.
ನಾವು ಈ ಮೊದಲು ಜಿಲ್ಲೆಯಿಂದ ಅನೇಕ ರೋಗಿಗಳು ಸೊಲ್ಲಾಪುರ ಹಾಗೂ ಹೈದ್ರಾಬಾದ್‍ಗೆ ಹೋಗುತ್ತಿದ್ದರು. ಈಗ ಅಂತಹ ಪರಿಸ್ಥಿತಿ ಇಲ್ಲ. ಎಲ್ಲ ಚಿಕಿತ್ಸೆಯನ್ನೂ ಸಹ ನೀಡುವಂತಹ ಆಸ್ಪತ್ರೆಗಳು ನಗರದಲ್ಲಿವೆ. ಅದೇ ರೀತಿ ಸ್ಟಾರ್ ಕೆಯರ್ ಆಸ್ಪತ್ರೆಯೂ ಸಹ ಸೇರಿದೆ. ಹಾಗಾಗಿ ಆಸ್ಪತ್ರೆಯ ಉಪಯೋಗ ಪಡೆಯಬೇಕು ಎಂದು ಅವರು ಮನವಿ ಮಾಡಿದರು.
ನಾವು ಹಣ ಗಳಿಕೆಗಾಗಿ ಆಸ್ಪತ್ರೆಯನ್ನು ಪ್ರಾರಂಭಿಸಿಲ್ಲ. ಜನರ ಜೀವ ರಕ್ಷಣೆಗಾಗಿ ನಾವು ಆಸ್ಪತ್ರೆಯನ್ನು ನಿರ್ಮಾಣ ಮಾಡಿದ್ದೇವೆ. ನಮ್ಮದು ಮೊದಲು ರೋಗಿಯ ಗುಣಮುಖತೆಗೆ ಒತ್ತು ಕೊಡುತ್ತೇವೆ. ನಂತರ ಹಣಕಾಸಿನ ವಿಚಾರ ಎಂದು ಅವರು ಹೇಳಿದರು.
ನೂತನ ಆಸ್ಪತ್ರೆಯಲ್ಲಿ ಸರ್ಕಾರದ ಯೋಜನೆಗಳೂ ಸಹ ಜಾರಿಯಾಗಲಿವೆ. ಆ ಕುರಿತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ ಅವರು, ದರಪಟ್ಟಿಯನ್ನು ಆಸ್ಪತ್ರೆಯ ಮುಂಭಾಗದಲ್ಲಿ ಹಾಕಲಾಗುತ್ತಿದೆ. ರೋಗಿಯ ಉಪಚಾರದಲ್ಲಿ ಮಾತ್ರ ಯಾವುದೇ ರೀತಿಯಲ್ಲಿ ಹಿಂಜರಿಕೆ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಆಸ್ಪತ್ರೆಯಲ್ಲಿ ಕಿಡ್ನಿ, ಹೃದ್ರೋಗ, ಸುಟ್ಟ ಗಾಯಗಳಿಗೆ ಚಿಕಿತ್ಸೆ, ಅಪಘಾತದಲ್ಲಿನ ಗಾಯಾಳುಗಳಿಗೆ ಚಿಕಿತ್ಸೆ, ಆಕಸ್ಮಿಕ ಮತ್ತು ತುರ್ತು ಆರೈಕೆಯಂತಹ ಚಿಕಿತ್ಸೆಗಳು ಲಭ್ಯವಿವೆ ಎಂದು ಹೇಳಿದ ಅವರು, ಆಸ್ಪತ್ರೆಯಲ್ಲಿ ರೋಗಿಗಳೊಂದಿಗೆ ಸಿಬ್ಬಂದಿಗಳು ಸೌಜನ್ಯದಿಂದ ವರ್ತಿಸುವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ರೋಗಿಗಳು ಔಷಧಿಗಳನ್ನು ತಮಗೆ ಬೇಕೆನಿಸಿದಲ್ಲಿ ಖರೀದಿಸಬಹುದಾಗಿದೆ. ಅವರಿಗೆ ಔಷಧ ಖರೀದಿಯಲ್ಲಿ ಯಾವುದೇ ಶರತ್ತುಗಳನ್ನು ಆಸ್ಪತ್ರೆ ಹಾಕುವುದಿಲ್ಲ. ಆಸ್ಪತ್ರೆಯಲ್ಲಿ ಸಾರ್ವಜನಿಕ ಸಂಪರ್ಕ ವಿಭಾಗವನ್ನೂ ಸಹ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ಆಸ್ಪತ್ರೆ ಪ್ರಾರಂಭದ ದಿನದ ಮರುದಿನ ಏಪ್ರಿಲ್ 8 ಮತ್ತು 9ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಆರೋಗ್ಯವನ್ನು ತಪಾಸಣೆ ಮಾಡಿಕೊಳ್ಳಬೇಕು. ಎರಡು ದಿನಗಳ ಶಿಬಿರದಲ್ಲಿ ರೋಗಿಗಳಿಗೆ ಏನಾದರೂ ಶಸ್ತ್ರಚಿಕಿತ್ಸೆ ಮಾಡುವ ಅಗತ್ಯಬಿದ್ದರೆ ಅಂಥವರಿಗೆ ರಿಯಾಯಿತಿ ದರದಲ್ಲಿ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ನೂತನ ಆಸ್ಪತ್ರೆಯ ಪ್ರಾರಂಭೋತ್ಸವಕ್ಕೆ ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್, ಐಟಿಬಿಟಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್, ಕರ್ನಾಟಕ ರಾಜ್ಯ ರೇಷ್ಮೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಹಾಗೂ ಉತ್ತರ ಕ್ಷೇತ್ರದ ಶಾಸಕಿ ಶ್ರೀಮತಿ ಕನೀಜ್ ಫಾತಿಮಾ, ಆಳಂದ್ ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ್ ಅವರು ಆಗಮಿಸುವರು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಆಡಳಿತಾಧಿಕಾರಿ ಚಂದ್ರಕಾಂತ್ ಝಳಕಿ, ವೈದ್ಯಾಧಿಕಾರಿಗಳಾದ ಡಾ. ಬಸವರಾಜ್, ಶ್ರೀನಿತ್ ಪಾಟೀಲ್, ರಾಜ್ ಅಹ್ಮದ್, ಡಾ. ಅರುಣಕುಮಾರ್, ಡಾ. ರೂಪಾ, ಡಾ. ಅನೂಜ್ ಮುಂತಾದವರು ಉಪಸ್ಥಿತರಿದ್ದರು.