ಕೇಂದ್ರೀಯ ವಿವಿಯಲ್ಲಿ 11 ಸಂಶೋಧನಾರ್ಥಿಗಳ ಪಿಎಚ್‍ಡಿ ಪ್ರವೇಶ ರದ್ದತಿ ಪುನರ್ ಪರಿಶೀಲನೆಗೆ ಚೇತನ್ ಅಹಿಂಸಾ ಆಗ್ರಹ
ಕಲಬುರಗಿ:ಏ.02: ಜಿಲ್ಲೆಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕೇಸರಿಕರಣದಿಂದಾಗಿ ಕೋಮು ದ್ವೇಷ ಹರಡುತ್ತಿದ್ದು, ಆ ಹಿನ್ನೆಲೆಯಲ್ಲಿ ಧರ್ಮದ ದಂಗಲ್ ಹಿನ್ನೆಲೆಯಲ್ಲಿ ಅತ್ಯಂತ ಸುಶಿಕ್ಷಿತ, ಸಂಶೋಧನೆ ಮಾಡುತ್ತಿರುವ ನಂದಪ್ಪ ಅವರೂ ಸೇರಿದಂತೆ ಹನ್ನೊಂದು ಜನ ಸಂಶೋಧನಾರ್ಥಿಗಳ ಪಿಎಚ್‍ಡಿ ಪ್ರವೇಶ ರದ್ದುಗೊಳಿಸಿದ ಕ್ರಮವು ಅಕ್ರಮವಾಗಿದ್ದು, ಕೂಡಲೇ ವಿಶ್ವವಿದ್ಯಾಲಯ ಆದೇಶವನ್ನು ಪುನರ್ ಪರಿಶೀಲಿಸಬೇಕು ಎಂದು ಪ್ರಗತಿಪರ ಚಿಂತಕ, ಹೋರಾಟಗಾರ ಹಾಗೂ ಖ್ಯಾತ ಚಿತ್ರನಟ ಚೇತನ್ ಅಹಿಂಸಾ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿನಾಕಾರಣ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುವುದು, ವಿದ್ಯಾರ್ಥಿಗಳ ಕೋಮುದ್ವೇಷ ಬಿತ್ತಿ ಧರ್ಮದ ದಂಗಲ್‍ನ್ನು ಕುಲಪತಿಗಳು ಎಬ್ಬಿಸುತ್ತಿದ್ದಾರೆ. ಅಲ್ಲಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಹಿನ್ನೆಲೆಯ ಅಧ್ಯಾಪಕರು ವಿಶ್ವವಿದ್ಯಾಲಯದ ವಾತಾವರಣವನ್ನು ಕಲುಷಿತಗೊಳಿಸುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಬಾಬಾಸಾಹೇಬರನ್ನು ಅವಮಾನಗೊಳಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಇಂತಹ ಕೆಟ್ಟ ಬೆಳವಣಿಗೆಯಿಂದ ಕೇಂದ್ರೀಯ ವಿಶ್ವದ್ಯಾಲಯದ ಶೈಕ್ಷಣಿಕ ಅಭಿವೃದ್ಧಿ ಕುಂಠಿತಗೊಳ್ಳಲಿದೆ. ಹಾಗಾಗಿ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಮೊದಲು ವಿದ್ಯಾರ್ಥಿಗಳ ಮೇಲಿನ ದಬ್ಬಾಳಿಕೆ ನಿಲ್ಲಬೇಕು. ಕೋಮು ದ್ವೇಷಕ್ಕೆ ಕಡಿವಾಣ ಹಾಕಬೇಕು. ಸ್ಥಳೀಯರಿಗೆ ಉದ್ಯೋಗದ ಅವಕಾಶ ಸಿಗಬೇಕು. ವಿದ್ಯಾರ್ಥಿಗಳಿಗೆ ಸಮಾನ ಶಿಕ್ಷಣ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಕಳೆದ 2022ರ ಸೆಪ್ಟೆಂಬರ್ 6ರಂದು ವಿಶ್ವವಿದ್ಯಾಲಯದ ಅಧಿಕಾರಿಗಳು ಸಂಶೋಧನಾ ವಿದ್ಯಾರ್ಥಿ ನಂದಪ್ಪ ಅವರು ವಿಶ್ವವಿದ್ಯಾಲಯದ ಪ್ರವೇಶ ದ್ವಾರದಲ್ಲಿ ನಿಂತಿದ್ದಕ್ಕಾಗಿ ಅವರ ವಿರುದ್ಧ ನರೋಣಾ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಅವರು ಆ ಮೊದಲು ಯಾವುದೇ ರೀತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರಲಿಲ್ಲ. ಕಳೆದ 2023ರ ಏಪ್ರಿಲ್ 6ರಂದು ಪಿಎಚ್‍ಡಿ ಅರ್ಥಶಾಸ್ತ್ರ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ಅಧ್ಯಕ್ಷ ನರೇಂದ್ರಕುಮಾರ್ ದರಿಯಾ ಎಂಬ ವಿದ್ಯಾರ್ಥಿ ಭೀಮಾ ವಸತಿ ನಿಲಯದಲ್ಲಿರುವ ಅವರ ಕೋಣೆಯಲ್ಲಿ ಅವರ ಬಟ್ಟೆ ಮತ್ತು ಪಾದರಕ್ಷೆ ಕದ್ದ ಕುರಿತು ಸುಳ್ಳು ದೂರು ಸಲ್ಲಿಸಿದ್ದರು. ಅದೇ ವಸತಿ ನಿಲಯದ ಕೊಠಡಿ ಸಂಖ್ಯೆ 4ಬಿಯಲ್ಲಿ ವಾಸಿಸುತ್ತಿದ್ದೆ. ನರೇಂದ್ರ ಅವರು ಯಾವುದೇ ಪುರಾವೆ ಕೊಡದಿದ್ದರೂ ಸಹ ವಿಶ್ವವಿದ್ಯಾಲಯವು ಅವರ ದೂರು ಸ್ವೀಕರಿಸಿತು ಎಂದು ಅವರು ಆರೋಪಿಸಿದರು.
ದೂರು ಸ್ವೀಕರಿಸಿದ ಒಂದೇ ದಿನದಲ್ಲಿ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ದೊಡ್ಡಿ ವೆಂಕಟರಮಣ ಅವರ ನೇತೃತ್ವದಲ್ಲಿ ಪ್ರೊಕ್ಟೋರಲ್ ಸಮಿತಿಯನ್ನು ರಚಿಸಿತು. ಸಮಿತಿಯಲ್ಲಿ ಸಮಾನವಕಾಶಗಳ ಕೋಶದ ಅಧಿಕಾರಿ ಡಾ. ಸಂಗಮೇಶ್ ಮತ್ತು ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಕೂಡ ಇರಲಿಲ್ಲ. ಸಮಿತಿಯು ನಂದಪ್ಪ ಅವರಿಗೆ ವಿಚಾರಣೆಗೆ ಕರೆದು, ಆ ಸಮಯದಲ್ಲಿ ನರೇಂದ್ರ ಕುಮಾರ್ ಅವರು ನಂದಪ್ಪ ವಿರುದ್ಧ ಆರೋಪಿಸಿದಂತೆ ನಾನು ಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆ ಸಂದರ್ಭದಲ್ಲಿ ಪ್ರೊ. ದೊಡ್ಡಿ ವೆಂಕಟರಮಣ ಅವರು ನಂದಪ್ಪ ಅವರಿಗೆ ನಿನ್ನ ಸಿದ್ದಾಂತ ಏನು?, ನಾನು ಗೋಮಾಂಸ ತಿನ್ನುತ್ತೇನೆಯೇ?, ಅಥವಾ ಇಲ್ಲವೇ ಎಂಬ ವಿಲಕ್ಷಣ ಮತ್ತು ಆಪೇಕ್ಷಾರ್ಹ ಪ್ರಶ್ನೆಗಳನ್ನು ಮುಂದಿಟ್ಟರು. ಆದಾಗ್ಯೂ, ನಂದಪ್ಪ ಅವರು ತಮ್ಮ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ನರೇಂದ್ರಕುಮಾರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಿದರೂ ಸಹ ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ ಎಂದು ಅವರು ದೂರಿದರು.
ಆ ಹಿನ್ನೆಲೆಯಲ್ಲಿ ನಂದಪ್ಪ ಅವರು ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಭೇಟಿಯಾಗಿ ಕ್ರಮಕ್ಕೆ ಒತ್ತಾಯಿಸಿದೆ. ನ್ಯಾಯ ಕೋರಿ ವಿಶ್ವವಿದ್ಯಾಲಯಕ್ಕೆ ಇಮೇಲ್‍ಗಳನ್ನೂ ಸಹ ಕಳಿಸಿದ್ದಾರೆ. ಯಾವುದೇ ಮನವಿಗಳಿಗೂ ಸ್ಪಂದಿಸಲಿಲ್ಲ. ಕೊನೆಗೆ ಕಳೆದ 2023ರ ಏಪ್ರಿಲ್ 12ರಂದು ಆಡಳಿತ ಕಟ್ಟಡದ ಮುಂದೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಏಪ್ರಿಲ್ 15ರವರೆಗೆ ಉಪವಾಸ ಮುಂದುವರೆಸಿದ್ದಾರೆ. ಆಗ ಬಲವಂತದಿಂದ ನನಗೆ ಆಸ್ಪತ್ರೆಗೆ ದಾಖಲಿಸಿದರು. ಅಲ್ಲದೇ ಆ ಸಂದರ್ಭದಲ್ಲಿ ನನ್ನ ಕುಂದು ಕೊರತೆಗಳನ್ನು ಕಾಲಕ್ರಮೇಣ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದು ಸಹ ಉಪಯೋಗ ಆಗಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ 2024ರ ಏಪ್ರಿಲ್ 22ರಂದು ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ ನಂದಪ್ಪ ಅವರು ವಿಶ್ವವಿದ್ಯಾಲಯದ ವಸತಿ ನಿಲಯದ ನನ್ನ ಕೋಣೆಗೆ ಮರಳಿದೆ. ನಾನು ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಏಪ್ರಿಲ್ 24ರಂದು ರಾತ್ರಿ ನಂದಪ್ಪ ಅವರ ಕೋಣೆಯ ಮೇಲೆ ಕಲ್ಲುಗಳನ್ನು ಎಸೆಯಲಾಯಿತು. ಜೀವಕ್ಕಾಗಿ ಹೆಣಗಾಡಿದ್ದಾರೆ. ಕೊನೆಗೆ ಹೊರಬಂದು ಮಧ್ಯರಾತ್ರಿಯಲ್ಲಿ ಪೋಲಿಸರಿಗೆ ಕರೆ ಮಾಡಿದ್ದಾರೆ. ಪೋಲಿಸರು ತಕ್ಷಣ ಬಂದು ಕೋಣೆಗೆ ಭೇಟಿ ನೀಡಿ ಛಾಯಾಚಿತ್ರಗಳನ್ನು ಪಡೆದುಕೊಂಡು ಹೋದರು. ಆದಾಗ್ಯೂ, ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ ಎಂದು ಅವರು ಆರೋಪಿಸಿದರು.
ನಂತರ ಎಲ್ಲ ಪುರಾವೆಗಳನ್ನು ಮತ್ತು ಛಾಯಾಚಿತ್ರಗಳನ್ನು ಸಂಗ್ರಹಿಸಿ ಕುಲಪತಿ, ಕುಲಸಚಿವರು, ಮಾನವೀಯ ಮತ್ತು ಭಾಷಾ ಅಧ್ಯಯನದ ಡೀನ್, ಕನ್ನಡ ವಿಭಾಗದ ಮುಖ್ಯಸ್ಥರು, ಸಮಾನ ಅವಕಾಶ ಕೋಶದ ಸಂಪರ್ಕ ಅಧಿಕಾರಿ ಡಾ. ಸಂಗಮೇಶ್ ಅವರಿಗೆ ದೂರು ಸಲ್ಲಿಸಿದ್ದಾರೆ. ಅವರೂ ಸಹ ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ ಎಂದು ಅವರು ಹೇಳಿದರು.
ನಂತರ ಭಯಾನಕ ಘಟನೆಗಳನ್ನು ನಂದಪ್ಪ ಅವರು ಎದುರಿಸಿದ್ದಾರೆ. ಕೋಣೆಯ ಮೇಲೆ ಮಿಸ್ಟರ್ ನಂದಪ್ಪ ನೀವು ಕ್ಯಾಂಪಸ್‍ನಲ್ಲಿ ಉಳಿಯಬಾರದು. ನೀವು ಹಾಸ್ಟೆಲ್ ಖಾಲಿ ಮಾಡಬೇಕು. ನೀವು ಏನೇ ಮಾಡಿದರೂ ನಿಮ್ಮನ್ನು ಬಿಡುವುದಿಲ್ಲ. ಜೈಶ್ರೀರಾಮ್ ಎಂಬ ಪೋಸ್ಟರ್‍ಗಳನ್ನು ಅಂಟಿಸಲಾಯಿತು. ಆ ಕುರಿತು ನರೋಣಾ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದರೂ ಸಹ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಅವರು ಅವರು ಆಕ್ರೋಶ ಹೊರಹಾಕಿದರು.
ಪಿಎಚ್‍ಡಿ ಮುಗಿಸಬೇಕು ಎನ್ನುವ ವಿನಂತಿ ಹೊರತಾಗಿಯೂ ವಿಶ್ವವಿದ್ಯಾಲಯದ ಅಧಿಕಾರಿಗಳು ವಸತಿ ನಿಲಯದ ಕೋಣೆಯನ್ನು ಖಾಲಿ ಮಾಡಲು ನಂದಪ್ಪ ಅವರಿಗೆ ಸೂಚಿಸಿದರು. ಕಳೆದ 2023ರ ಸೆಪ್ಟೆಂಬರ್ 25ರಂದು ನಂದಪ್ಪ ಅವರ ಕೋಣೆಗೆ ಬೀಗ ಹಾಕಿದರು. ಅವರ ವಸ್ತುಗಳನ್ನು ತೆಗೆದುಕೊಳ್ಳಲು ನನಗೆ ಅನುಮತಿ ಇಲ್ಲ. ನನಗೆ ವಿಶ್ವವಿದ್ಯಾಲಯ ತೊರೆಯುವಂತೆ ಕೇಳಲಾಗಿದೆ. ಸಂಜೆ 6 ಗಂಟೆಯ ನಂತರ ವಿಶ್ವವಿದ್ಯಾಲಯ ಪ್ರವೇಶವನ್ನು ನಿಷೇಧಿಸಿದರು ಎಂದು ಅವರು ಆಕ್ರೋಶ ಹೊರಹಾಕಿದರು.
ಹೊರಗೆ ಉಳಿಯಲು ನಂದಪ್ಪ ಅವರ ಹತ್ತಿರ ಹಣವಿಲ್ಲ. ಕಾರಣ ವಸತಿ ನಿಲಯದಲ್ಲಿ ಉಳಿಯಲು ಕೋರಿ ಅಧಿಕಾರಿಗಳಿಗೆ ಮನವಿ ಪತ್ರ ನೀಡಿದ್ದಾರೆ. ಆದಾಗ್ಯೂ, ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಪ್ರಕರಣವು ಕಲಬುರ್ಗಿ ಉಚ್ಛ ನ್ಯಾಯಾಲಯದಲ್ಲಿ ಬಾಕಿ ಇದೆ. ಈಗ ಇದ್ದಕ್ಕಿದ್ದಂತೆಯೇ ವಿಶ್ವವಿದ್ಯಾಲಯವು ನಂದಪ್ಪ ಅವರ ಪಿಎಚ್‍ಡಿ ರದ್ದುಪಡಿಸಿ ಸುತ್ತೋಲೆ ಹೊರಡಿಸಿದೆ. ವಿಶ್ವವಿದ್ಯಾಲಯ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ಇದು ನಂದಪ್ಪ ಅವರ ಹಕ್ಕುಗಳ ಉಲ್ಲಂಘನೆಯಾಗಿದೆ. ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ನಿಯಮಾವಳಿಗಳಿಗೆ ವಿರುದ್ಧವಾಗಿದೆ ಎಂದು ಅವರು ಕಿಡಿಕಾರಿದರು.
ನಂದಪ್ಪ ಅವರು 2023ರಲ್ಲಿ ಐದು ವರ್ಷಗಳನ್ನು ಪೂರ್ಣಗೊಳಿಸಿದ್ದೇನೆ. 2024ರಲ್ಲಿ ಪ್ರತಿಕ್ರಿಯಿಸುತ್ತಿದ್ದು, 2023ರಲ್ಲಿ ಅವರು ಯಾಕೆ ಪ್ರತಿಕ್ರಿಯಿಸಲಿಲ್ಲ?, ವಿಶ್ವವಿದ್ಯಾಲಯದ ಪ್ರತಿಯೊಂದು ಶೈಕ್ಷಣಿಕ ನಿರ್ಧಾರವನ್ನು ಅಕ್ಯಾಡೆಮಿಕ್ ಕೌನ್ಸಿಲ್‍ನಲ್ಲಿ ಅನುಮೋದಿಸಬೇಕು. ಅಂತಹ ಕ್ರಮ ಕೈಗೊಂಡಿಲ್ಲ. ಐದು ವರ್ಷಗಳು ಪೂರ್ಣಗೊಳಿಸಿದವರಿಗೆ ರದ್ದುಗೊಳಿಸಿದರು. ಆದಾಗ್ಯೂ, ಆರೇಳು ವರ್ಷಗಳ ಪಿಎಚ್‍ಡಿ ಪೂರ್ಣಗೊಳಿಸಿದವರನ್ನು ಏಕೆ ರದ್ದುಗೊಳಿಸಲಿಲ್ಲ?, ಸುತ್ತೋಲೆ ಹೊರಡಿಸುವ ಮುನ್ನ ಕನಿಷ್ಠ ಒಂದು ತಿಂಗಳು ಮುನ್ನ ನೋಟಿಸ್ ನೀಡಬೇಕು. ವಿಶ್ವವಿದ್ಯಾಲಯ ಸುಗ್ರೀವಾಜ್ಞೆ ಹೊರಡಿಸುವಂತಹ ಯಾವುದೇ ಪದ ನಂದಪ್ಪ ಅವರು ಬಳಸಿಲ್ಲ ಎಂದು ಅವರು ಹೇಳಿದರು.
ಅವರ ಹೇಳಿಕೆಯ ಪ್ರಕಾರ ಅವರು ಐದು ವರ್ಷಗಳನ್ನು ಪೂರ್ಣಗೊಳಿಸಿದರೂ 2018ರಲ್ಲಿ ಸೇರಿದ ಪಿಎಚ್‍ಡಿ ಮ್ಯಾನೇಜಮೆಂಟ್‍ನ ಸಾಯಿ ನಾಗೇಂದ್ರ, ಶಾಸ್ತ್ರೀಯ ಕನ್ನಡ ವಿಭಾಗದ ಪ್ರಕಾಶ್, ರಸಾಯನಶಾಸ್ತ್ರ ವಿಭಾಗದ ಮಲ್ಲಿಕಾರ್ಜುನ್, ಭೂ ವಿಜ್ಞಾನ ವಿಭಾಗದ ಚಿಪ್ಪಿ ಪುಷ್ಪಾ ನಾಗನಾಥನ್, ಶಾಸ್ತ್ರೀಯ ಕನ್ನಡ ವಿಭಾಗದ ಭೀಮಾಶಂಕರ್ ಅವರ ಹೆಸರು ಯಾಕಿಲ್ಲ? ಎಂದು ಪ್ರಶ್ನಿಸಿದ ಅವರು, ಪುಟ್ಟರಾಜ್, ಸುನೀತಕುಮಾರ್ ಸಾಹು, ಜಯಶ್ರೀ, ಮೋಹನ್ ಮುಂತಾದವರು ಆರರಿಂದ ಏಳು ವರ್ಷದ ಪಿಎಚ್‍ಡಿ ವಿದ್ಯಾರ್ಥಿಗಳಿದ್ದಾರೆ. ಅವರ ಹೆಸರು ರದ್ದಾದ ಪಟ್ಟಿಯಲ್ಲಿ ಇಲ್ಲ. ಎಂದು ಅಸಮಾಧಾನ ಹೊರಹಾಕಿದರು.
ಪ್ರವೇಶ ರದ್ದುಗೊಳಿಸಲ್ಪಟ್ಟ ವಿದ್ಯಾರ್ಥಿಗಳಲ್ಲಿ ಅನೇಕರು ವಿಭಾಗ ಮಟ್ಟದಲ್ಲಿ ಸಿಎಎಸ್‍ಆರ್ ಮತ್ತು ಆರ್ಎಸಿಯಿಂದ ಪಿಎಚ್‍ಡಿ ವಿಸ್ತರಣೆ ಆದೇಶ ಹೊಂದಿದ್ದಾರೆ. ಅದರ ಹೊರತಾಗಿಯೂ ವಿಶ್ವವಿದ್ಯಾಲಯ ನನ್ನ ಪ್ರವೇಶ ರದ್ದುಗೊಳಿಸಿದೆ. ರದ್ದತಿ ಕುರಿತು ಆಡಳಿತದಿಂದ ಯಾವುದೇ ಸಮರ್ಥನೆ ಇಲ್ಲ ಎಂದು ಅವರು ಹೇಳಿದರು.
ಪಿಎಚ್‍ಡಿ ರದ್ದತಿ ಯಾವುದೇ ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಆಗಿಲ್ಲ. ಅಲ್ಲದೇ 2020-2022ರವರೆಗೆ ಕೋವಿಡ್ ಅವಧಿಯಾಗಿದ್ದು, ಸಂಶೋಧನಾ ಅವಧಿಯಲ್ಲಿ ಮುಕ್ತವಾಗಿ ತಿರುಗಾಡಲು ಸಾಧ್ಯವಾಗದ ಕಾರಣ ಪಿಎಚ್‍ಡಿ ವಿದ್ಯಾರ್ಥಿಗಳಿಗೆ ವಿಶ್ರಾಂತಿ ನೀಡಲಾಗುವುದು ಎಂದು ನಂದಪ್ಪ ಅವರು ನಿರೀಕ್ಷಿಸಿದ್ದರು. ಆದಾಗ್ಯೂ, ಅವರ ಪಿಎಚ್‍ಡಿ ಪ್ರವೇಶ ರದ್ದುಪಡಿಸಲಾಗಿದೆ. ಅವರ ವಿರುದ್ಧವಿದ್ದ ನಾಲ್ಕು ಆರೋಪಗಳಲ್ಲಿ ಒಂದು ಪ್ರಕರಣದಲ್ಲಿ ದೋಷಮುಕ್ತರಾಗಿದ್ದಾರೆ. ಉಳಿದ ಮೂರು ಪ್ರಕರಣಗಳು ಸಣ್ಣಪುಟ್ಟ ಕಳ್ಳತನದ ಆರೋಪಗಳಾಗಿವೆ. ಆ ಕುರಿತು ಕಾನೂನು ಎದುರಿಸಲು ಸಂಶೋಧನಾ ವಿದ್ಯಾರ್ಥಿಯು ಸಿದ್ಧರಿದ್ದಾರೆ. ಆದಾಗ್ಯೂ, ನಂದಪ್ಪ ಅವರೂ ಸೇರಿದಂತೆ 11 ಸಂಶೋಧನಾರ್ಥಿಗಳ ಪಿಎಚ್‍ಡಿ ಪ್ರವೇಶ ರದ್ದುಪಡಿಸಿದ ಆದೇಶವು ಸಕ್ರಮವಾಗಿಲ್ಲ. ಕೂಡಲೇ ಆ ಆದೇಶ ಹಿಂಪಡೆಯಬೇಕು. ಇಲ್ಲದೇ ಹೋದಲ್ಲಿ ಕಾನೂನು ಹೋರಾಟವನ್ನು ಮಾಡುವ ಮೂಲಕ ಸಂಶೋಧನಾ ವಿದ್ಯಾರ್ಥಿಗಳಿಗೆ ನ್ಯಾಯ ಕಲ್ಪಿಸುವುದಾಗಿಯೂ ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಲಕ್ಷ್ಮೀ ಬಾವಗೆ, ಅಶ್ವಿನಿ ಮದನಕರ್, ಲಕ್ಷ್ಮಿಕಾಂತ್ ಹುಬಳಿ, ಮಾರುತಿ ಗಂಜಗಿರಿ, ಸಂತೋಷ್ ಮೇಲ್ಮನಿ ಮುಂತಾದವರು ಉಪಸ್ಥಿತರಿದ್ದರು.