ಅಬಕಾರಿ ದಾಳಿ: 8.640 ಲೀಟರ್ ಮದ್ಯ ಜಪ್ತಿ
ಯಾದಗಿರಿ,ಏ.2-ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಚುನಾವಣೆ ಶಾಂತಿಯುತವಾಗಿ, ನಿಷ್ಪಕ್ಷಪಾತವಾಗಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಲು ಜಿಲ್ಲೆಯ ವ್ಯಾಪ್ತಿಯಲ್ಲಿ ನಕಲಿ ಮದ್ಯ, ಅಕ್ರಮ ಮದ್ಯ, ಕಲಬೆರಕೆ ಸೇಂದಿ, ಕಳ್ಳಭಟ್ಟಿ ಸಾರಾಯಿ ಹಾಗೂ ಇತರೆ ಅಬಕಾರಿ ಅಕ್ರಮ ಪದಾರ್ಥಗಳ ತಯಾರಿಕೆ, ಸಾಗಾಣಿಕೆ, ಸಂಗ್ರಹಣೆ ಹಾಗೂ ಮಾರಾಟಗಳಂತಹ ಅಕ್ರಮ ಚಟುವಟಿಕೆಗಳು ನಡೆಯದಂತೆ ಕ್ರಮ ಕೈಗೊಂಡಿರುವ ಮಾಹಿತಿ ಸಲ್ಲಿಸಲಾಗಿದೆ ಎಂದು ಯಾದಗಿರಿ ಅಬಕಾರಿ ಉಪ ಆಯುಕ್ತೆ ಶಾರದಾ ಸಿ.ಕೋಲಕಾರ ಅವರು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಕಲಬುರಗಿ ವಿಭಾಗದ ಅಬಕಾರಿ ಜಂಟಿ ಆಯುಕ್ತರು, ಯಾದಗಿರಿಯ ಅಬಕಾರಿ ಉಪ ಆಯುಕ್ತರÀ ನಿರ್ದೇಶನ ಮತ್ತು ಶಹಾಪುರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ಸುರಪುರ ತಾಲೂಕಿನ ಮಾಚಗುಂಡಾಳ ಗ್ರಾಮದ ಕ್ರಾಸ್ ಹತ್ತಿರ ರಸ್ತೆಗಾವಲು ಮಾಡುತ್ತಿರುವಾಗ ಆರೋಪಿಯು ಸಮವಸ್ತ್ರದಲ್ಲಿದ್ದ ಆಧಿಕಾರಿಗಳ ನೋಡಿ ವಾಹನ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿ ಪರಾರಿಯಾಗಿದ್ದು, ಅಲ್ಲಿದ್ದ ಕಪ್ಪು ಬಣ್ಣದ ದ್ವಿಚಕ್ರ ವಾಹನದ ಮೇಲಿಟ್ಟಿದ್ದ ಬಿಳಿ ಚಿಲವನ್ನು ಪರಿಶೀಲಿಸಲಾಗಿ ಅದರಲ್ಲಿ ಒರಿಜಿನಲ್ ಚಾಯ್ಸ್ ವಿಸ್ಕಿ ಅಂತ ಮುದ್ರಿತ 90 ಎಂ.ಎಲ್ ನ 96 ಟೆಟ್ರಾ ಪ್ಯಾಕೆಟ್ ಇರುವುದು (8.640 ಲೀಟರ್ ಮದ್ಯ) ಕಂಡು ಬಂದಿರುವುದರಿಂದ ದ್ವಿಚಕ್ರ ವಾಹನ ಮತ್ತು ಮದ್ಯ ಜಪ್ತಿಪಡಿಸಿಕೊಂಡು ಪ್ರಕರಣ ದಾಖಲು ಮಾಡಲಾಗಿದೆ. ಆರೋಪಿ ಮತ್ತು ವಾಹನ ಮಾಲೀಕನ ಪತ್ತೆಗೆ ಜಾಲ ಬೀಸಲಾಗಿದೆ ಎಂದು ತಿಳಿಸಿದ್ದಾರೆ.