ಕಳವು ಮಾಡಲು ಹೋದಾಗ ಹಲ್ಲೆ: ಪೊಲೀಸ್ ಠಾಣೆ ಮೆಟ್ಟಿಲೇರಿದ ಕಳ್ಳ !
ಕಲಬುರಗಿ,ಏ.2-ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕಳವು ಮಾಡಲು ಹೋದಾಗ ನಾಲ್ವರು ಅಪರಿಚಿತರು ಹಲ್ಲೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಕಳ್ಳನೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಇಲ್ಲಿನ ಬಾಪು ನಗರದ ಮಾಂಗರಗಲ್ಲಿಯ ರಾಮಾ ತಂದೆ ರಾಜು ಉಪಾಧ್ಯ (30) ಎಂಬಾತನೆ ಹಲ್ಲೆಗೆ ಒಳಗಾಗಿ ದೂರು ನೀಡಿದ್ದು, ಅಪರಾಧ ಹಿನ್ನೆಲೆಯುಳ್ಳ ರಾಮಾ (ಎಂಒಬಿ) ಕೂಲಿ ಕೆಲಸ ಮತ್ತು ಸಣ್ಣಪುಟ್ಟ ಮೊಬೈಲ್ ಕಳ್ಳತನ ಮಾಡಿ ಜೀವನ ಸಾಗಿಸುತ್ತಿದ್ದ. ಏ.1 ರಂದು ರಾತ್ರಿ ಜಿಲ್ಲಾ ಆಸ್ಪತ್ರೆಯಲ್ಲಿ ಕಳ್ಳತನ ಮಾಡಲು ಹೋದಾಗ ಹೆರಿಗೆ ವಾರ್ಡ್‍ನ ಆವರಣದಲ್ಲಿದ್ದ ನಾಲ್ವರು ಅಪರಿಚಿತರು ಹಲ್ಲೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾನೆ. ಹಲ್ಲೆ ಮಾಡಿದ ನಾಲ್ವರು ಅಪರಿಚಿತರ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.