ಕರ್ನಾಟಕ ಕೇಂದ್ರೀಯ ವಿವಿ ಸಹಾಯಕ ಕುಲಸಚಿವ ಅಸಮಾಧಾನಹಕ್ಕು ಕೇಳಿದ ಸಂಶೋಧನಾರ್ಥಿ ಮೇಲೆ ಸಿಯುಕೆ ದಬ್ಬಾಳಿಕೆ
ಕಲಬುರಗಿ,ಏ.2-ನ್ಯಾಯೋಜಿತವಾಗಿ ತನಗೆ ದೊರಕಬೇಕಾದ ಹಕ್ಕು ಕೇಳಿದ ಸಂಶೋಧನಾ ವಿದ್ಯಾರ್ಥಿಯ ಮೇಲೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ದಬ್ಬಾಳಿಕೆ ನಡೆಸುತ್ತಿದೆ ಎಂದು ಸಿಯುಕೆ ಸಹಾಯಕ ಕುಲಸಚಿವ ಡಾ.ಅಜೀಂ ಪಾಶಾ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಹಿಂದಿ ಪ್ರಚಾರ ಸಭಾದ ಸಭಾಂಗಣದಲ್ಲಿ ಭಾನುವಾರ ಅಂಬೇಡ್ಕರ್ ವಿದ್ಯಾರ್ಥಿ ಒಕ್ಕೂಟ (ಎಎಸ್‍ಎ) ಹಮ್ಮಿಕೊಂಡಿದ್ದ ಚಿಂತಕ ಹ.ರಾ.ಮಹೇಶ್ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
‘ಕಣ್ಣ ಮುಂದೆಯೇ ಸಂಶೋಧನಾ ವಿದ್ಯಾರ್ಥಿ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಹಾಗೂ ಅನ್ಯಾಯವನ್ನು ನೋಡಿ ಸಹಿಸಿಕೊಳ್ಳಲು ಆಗುತ್ತಿಲ್ಲ. ಎರಡು ಕೈಗಳನ್ನು ಕತ್ತರಿಸಿದಾಗ ದಲಿತರ ಒಳಗಿನ ಎಡ-ಬಲ ಯಾವುದೂ ಇರುವುದಿಲ್ಲ. ಹಾಗಾಗಿ ದಲಿತ ಸಮುದಾಯ ಒಂದಾಗಿ ಹೋರಾಟ ನಡೆಸಬೇಕು. ವಿಶ್ವವಿದ್ಯಾಲಯದಲ್ಲಿನ ನಡೆಯುವ ಇಂತಹ ಘಟನಾವಳಿಗೆ ತಾರ್ಕಿಕ ಅಂತ್ಯ ಕಾಣಿಸಬೇಕು. ಅಂಬೇಡ್ಕರ್ ವಿಚಾರವು ಬಲಿಕೊಟ್ಟರೆ ದೇಶವು ಶಾಂತಿ-ಸೌಹಾರ್ದದ ಭಾರತವಾಗಿ ಉಳಿದುಕೊಳ್ಳುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಹುಸಂಖ್ಯಾತರಾದ ನಮಗೆ ಹೋರಾಟದ ಶಕ್ತಿಗೇನು ಕೊರತೆ ಇಲ್ಲ. ಆರ್ಥಿಕ ಸ್ಥಿತಿ ಬಹಳ ಹೀನಾಯವಾಗಿದೆ. ಐಎಎಸ್, ಕೆಎಎಸ್ ಪಾಸ್ ಮಾಡಿ ಉನ್ನತ ಸ್ಥಾನಮಾನ ಗಳಿಸಿದರೂ ದಲಿತರ ಬದುಕು ಬದಲಾಗಿಲ್ಲ.ಮೊದಲು ಆರ್ಥಿಕ ಸಬಲರಾಗುವುದರತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಸನ್ಮಾನ ಸ್ವೀಕರಿಸಿದ ಚಿಂತಕ ಡಾ.ಹ.ರಾ.ಮಹೇಶ ಮಾತನಾಡಿ, ಬಹುಜನ ಚಳಿವಳಿಯ ಆದಿಪುರುಷ ಗೌತಮ ಬುದ್ಧರನ್ನು. 130 ದೇಶಗಳಲ್ಲಿ ಆರಾಧನೆಯ ಜತೆಗೆ ಅವರ ವಿಚಾರಗಳ ಅನುಸರಣೆ ನಡೆಯುತ್ತಿದೆ. ಇಸ್ಲಾಂ ಧರ್ಮದಲ್ಲಿ ಯಾವುದೇ ಮೂಢನಂಬಿಕೆ, ದ್ವೇಷ-ಅಸೂಯೆ ಇಲ್ಲ. ಪ್ರಕೃತಿಯೇ ಖುರಾನ್‍ನಲ್ಲಿ ಇದೆ. ಕ್ರೈಸ್ತ ಧರ್ಮದಲ್ಲಿ ಬೌದ್ಧಧರ್ಮದ ಪಂಚಶೀಲ, ಶರಣರ ವಿಚಾರಗಳಿವೆ. ಬುದ್ಧನ ನಂತರ ಬರೆದ ಭಗವದ್ಗೀತೆಯಲ್ಲಿ ಬುದ್ಧರ ಕೆಲ ವಿಚಾರಗಳನ್ನು ನಕಲು ಮಾಡಲಾಗಿದೆ ಎಂದು ಆರೋಪಿಸಿದರು.
‘ದೇಶದ ಹಾಗೂ ರಾಜ್ಯದಲ್ಲಿ ಇಂದು ತಾಂಡವ ಆಡುತ್ತಿರುವ ಪ್ರತಿ ವಿಚಾರಕ್ಕೂ ರಾಜಕಾರಣವೇ ಕಾರಣ. ಬಡತನ, ನಿರುದ್ಯೋಗ, ಹಿಂದು-ಮುಸ್ಲಿಂ ಗಲಾಟೆ, ದಲಿತರು, ರೈತರು, ಕಾರ್ಮಿಕರ ಇನ್ನಿತರ ಸಮಸ್ಯೆಗಳಿಗೆ ರಾಜಕಾರಣವೇ ಕಾರಣ. ಹಾಗಾಗಿ ರಾಜಕಾರಣವನ್ನು ಸ್ವಚ್ಛ ಗೊಳಿಸಬೇಕಿದೆ. ರಾಜಕೀಯ ವ್ಯವಸ್ಥೆಗೆ ಚಿಕಿತ್ಸೆ ಬೇಕಾಗಿದ್ದು, ಈ ಸಮಸ್ಯೆಗೆ ಚಿಕಿತ್ಸೆ ಗೌತಮ ಬುದ್ಧನಲ್ಲಿದೆ’ ಎಂದರು.
ರಾಜ ಪ್ರಭುತ್ವ ಧಿಕ್ಕರಿಸಿ ಪ್ರಜಾಪ್ರಭುತ್ವಕ್ಕೆ ಅಡಿಗಲ್ಲು ಹಾಕಿದ ಗೌತಮ ಬುದ್ಧ ಒಬ್ಬ ರಾಜಕೀಯ ತತ್ವಜ್ಞಾನಿ. ಅವರ ತತ್ವಜ್ಞಾನದ ಕೊರತೆಯಿಂದ ದೇಶ ನರಳುತ್ತಿದೆ.ದಲಿತ ರಾಜಕಾರಣ ಸರಿ ಹೋಗದ ಹೊರತು ದೇಶ ರಾಜಕೀಯ ವ್ಯವಸ್ಥೆ ಬದಲಾಗದು ಎಂದು ಹೇಳಿದರು.
ಡಾ.ಗವಿಸಿದ್ದಪ್ಪ ಪಾಟೀಲ, ಚಂದ್ರಶೇಖರ ಏಕಲೂರ, ಪರಶುರಾಮ, ಗಿರಿಜಾ ಕಾರ್ಯಕ್ರಮದಲ್ಲಿ ಹಾಜರಿದ್ದರು. ಪಂಡಿತ ಮದಗುಣಕಿ ನಿರೂಪಿಸಿದರು.