ಮದ್ಯ ಸಂಗ್ರಹಿಸಿಟ್ಟಿದ್ದ ಮನೆಯ ಮೇಲೆ ಅಬಕಾರಿ ದಾಳಿ
ಯಾದಗಿರಿ : ಏ.2: ಭಾರತ ಚುನಾವಣಾ ಆಯೋಗವು ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ಘೋಷಿಸಿ ದಿನಾಂಕ 2024ರ ಮಾರ್ಚ್ 16 ರಿಂದ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಚುನಾವಣೆ ಶಾಂತಿಯುತವಾಗಿ ನಿಷ್ಪಕ್ಷಪಾತವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಲು ಜಿಲ್ಲೆಯ ವ್ಯಾಪ್ತಿಯಲ್ಲಿ ನಕಲಿ ಮದ್ಯ, ಅಕ್ರಮ ಮದ್ಯ, ಕಲಬೆರಕೆ ಸೇಂದಿ, ಕಳ್ಳಭಟ್ಟಿ ಸಾರಾಯಿ ಹಾಗೂ ಇತರೆ ಅಬಕಾರಿ ಅಕ್ರಮ ಪದಾರ್ಥಗಳ ತಯಾರಿಕೆ ಸಾಗಾಣಿಕೆ ಸಂಗ್ರಹಣೆ ಹಾಗೂ ಮಾರಾಟಗಳಂತಹ ಅಕ್ರಮ ಚಟುವಟಿಕೆಗಳು ನಡೆಯದಂತೆ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಮ ಕೈಗೊಂಡಿರುವ ಮಾಹಿತಿ ಸಲ್ಲಿಸಲಾಗಿದೆ ಎಂದು ಯಾದಗಿರಿ ಅಬಕಾರಿ ಉಪ ಆಯುಕ್ತರು ಶಾರದಾ ಸಿ.ಕೋಲಕಾರ ಅವರು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ 2024ರ ಮಾರ್ಚ್ 30 ರಂದು ಮಾನ್ಯ ಅಬಕಾರಿ ಜಂಟಿ ಆಯುಕ್ತರು (ಜಾ ಮತ್ತು ತ) ಕಲಬುರಗಿ ವಿಭಾಗ ಕಲಬುರಗಿ ರವರ ಮತ್ತು ಮಾನ್ಯ ಅಬಕಾರಿ ಉಪ ಆಯುಕ್ತರು, ಯಾದಗಿರಿ ಜಿಲ್ಲೆ ಯಾದಗಿರಿ ಅವರ ಮಾರ್ಗದರ್ಶನದಲ್ಲಿ ಗುರುಮಿಠಕಲ್ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲ್ಲೂಕಿನ ಅನಪುರ ಗ್ರಾಮದ ಮನೆಯೊಂದರ ಮೇಲೆ ದಾಳಿ ನಡೆಸಿದ್ದು, ಐದು ಲೀಟರ್ ಐಡಿ ಮದ್ಯ ಹಾಗೂ ಐಡಿ ಮದ್ಯ ಸಾಗಿಸಲು ಬಳಸುತ್ತಿದ್ದ ಐದು ಟ್ಯೂಬ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಸದರಿ ದಾಳಿಯಲ್ಲಿ ಯಾದಗಿರಿ ವಲಯ ಅಬಕಾರಿ ನಿರೀಕ್ಷಕರಾದ ಸಿದ್ರಾಮಪ್ಪ ತಾಳಿಕೋಟಿ, ಅಬಕಾರಿ ಉಪ ನಿರೀಕ್ಷಕರಾದ ಅಶೋಕ್ ರಾಥೋಡ್ ಮತ್ತು ಅಬಕಾರಿ ಮುಖ್ಯ ಪೇದೆಯಾದ ಶರೀಫ್ ವಾಲೀಕರ್ ಹಾಗೂ ಅಬಕಾರಿ ಪೇದೆಯಾದ ಶಿವಶರಣಪ್ಪ, ಗೃಹ ರಕ್ಷಕ ಸಿಬ್ಬಂದಿಯಾದ ಅರ್ಜುನ ಮತ್ತು ಅನಿಲ್ ಅವರು ಉಪಸ್ಥಿತರಿರುತ್ತಾರೆ. ಈ ದಾಳಿಯಲ್ಲಿ ಮದ್ಯ ಸಂಗ್ರಹಿಸಿಟ್ಟಿದ್ದ ಮನೆಯು ಆರೋಪಿಯಾದ ನರಸಿಂಹ ತಂದೆ ತಮ್ಮಣ್ಣ ಸಾ.ಅನಪುರ ಗ್ರಾಮ ತಾ.ಗುರುಮಿಟಕಲ್ ಅವರಿಗೆ ಸೇರಿರುತ್ತದೆ. ತಲೆಮರೆಸಿಕೊಂಡಿರುವ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.