ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ಅಧ್ಯಕ್ಷರಾಗಿ ಅಲ್ಲಂ‌ಪ್ರಶಾಂತ್ ನೇಮಕ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.02: ಕಾಂಗ್ರೆಸ್ ಪಕ್ಷದ ನಗರ ಜಿಲ್ಲಾ ಸಮಿತಿಯ ಅಧ್ಯಕ್ಷರನ್ನಾಗಿ ಅಲ್ಲಂ ಪ್ರಶಾಂತ್ ಅವರನ್ನು ನೇಮಕ ಮಾಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ನಿನ್ನೆ ರಾತ್ರಿ ಆದೇಶ ಹೊರಡಿಸಿದ್ದಾರೆ.
ಈವರಗೆ ಕಳೆದ ಹಲವು ವರ್ಷಗಳಿಂದ ಸಚಿವ ಸಂತೋಷ್ ಲಾಡ್ ಆಪ್ತ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್ ಅವರು ಈ ಸ್ಥಾನದಲ್ಲಿದ್ದರು.‌
ಇವರನ್ನು ಬದಲಾಯಿಸುವ ಪ್ರಯತ್ನ ಆಗಿದ್ದಾಂಗೆ ಕೇಳಿ ಬರುತ್ತಿದ್ದರೂ, ಅವರನ್ನೇ ಮುಂದುವರೆಸಲಾಗಿತ್ತು. ಈಗ ಚುನಾವಣೆ ಸಂದರ್ಭದಲ್ಲಿ ಅವರನ್ನು ಬದಲಾಯಿಸಲಾಗಿದೆ.
ಈ ಸ್ಥಾನಕ್ಕೆ ಬೆಣಕಲ್ ಬಸವರಾಜ್ ಗೌಡ ಸೇರಿದಂತೆ ಹಲವರು ಪ್ರಯತ್ನಿಸಿದ್ದರು. ಆದರೆ ಪಕ್ಷ  ಕೆಪಿಸಿಸಿ ಮಾಜಿ ಅಧ್ಯಕ್ಷರಾದ ಅಲ್ಲಂ ವೀರಭದ್ರಪ್ಪ ಅವರ ಪುತ್ರ ಜಿಲ್ಲಾ ಪಂಚಾಯ್ತಿಯ ಮಾಜಿ ಸದಸ್ಯ, ಅಲ್ಲಂ ಪ್ರಶಾಂತ ಅವರನ್ನು ನೇಮಕ ಮಾಡಿದೆ.
ಪ್ರಶಾಂತ ಅವರು ರಾಜ್ಯ ಮಟ್ಟದ ನಿಗಮ ಮಂಡಳಿಯ ಅಧ್ಯಕ್ಷರಾಗಲು ಬಯಸಿದ್ದರು. ಆದರೆ ಪಕ್ಷ ಡಿಸಿಸಿ ಜವಾಬ್ದಾರಿ ವಹಿಸಿಕೊಂಡು ಪಕ್ಷ ಸಂಘಟನೆ ಮಾಡಲು ಸೂಚಿಸಿದೆ.‌
ಇದರೊಂದಿಗೆ ನಗರದ ವೆಂಕಟೇಶ್ ಹೆಗಡೆ ಮತ್ತು ಹುಮಾಯೂನ್‌ ಖಾನ್  ಅವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಮಾಡಲಾಗಿದೆ.