ಸುಕೋ ಬ್ಯಾಂಕಿನಲ್ಲಿ  ಉಳಿತಾಯ ಖಾತೆಗೂನಿಶ್ಚಿತ ಠೇವಣಿಯ ಬಡ್ಡಿ:  ಮೋಹಿತ್ ಮಸ್ಕಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.02: ನಮ್ಮ ಸುಕೋ ಬ್ಯಾಂಕಿನಲ್ಲಿ ಈ ವರ್ಷ 2024 ರ ಎಪ್ರಿಲ್ ನಿಂದ ಉಳಿತಾಯ ಖಾತೆಯಲ್ಲಿನ ಮೊತ್ತಕ್ಕೂ, ನಿಶ್ಚಿತ ಠೇವಣೆಗೆ ನೀಡುವ ಶೇ 7.5 ಬಡ್ಡಿ ಧರವನ್ನು ನೀಡಲಿದೆಂದು ಬ್ಯಾಂಕ್‌ನ ಅಧ್ಯಕ್ಷ ಮೋಹಿತ್ ಮಸ್ಕಿ ಅವರು ಪ್ರಕಟಿಸಿದ್ದಾರೆ.
ಅವರು ಇಂದು ನಗರದಲ್ಲಿನ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿ. ನಮ್ಮ ಬ್ಯಾಂಕ್ 2023-2024 ನೇ ಸಾಲಿನಲ್ಲಿ  1114 ಕೋಟಿ ರೂಪಾಯಿ ಠೇವಣಿ’ ಸಂಗ್ರಹ ಮಾಡಿ ನಿವ್ವಳ 6.23 ಕೋಟಿ ರೂಪಾಯಿ ಮ ಲಾಭಗಳಿಸಿದೆ.
ಈವರೆಗೆ 1828 ಕೋಟಿ ರೂಪಾಯಿ ವಹಿವಾಟು ನಡೆಸಿರುವ ಬ್ಯಾಂಕ್, ಶೆಡ್ಯುಲ್ ಬ್ಯಾಂಕ್ ಆಗಿ ಪರಿವರ್ತನೆ ಆಗುವಲ್ಲಿ ದಾಪುಗಾಲನ್ನಿಟ್ಟು ಸಹಕಾರಿ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಮತ್ತು ಭರವಸೆಯ ಬ್ಯಾಂಕ್ ಆಗಿ ಗುರುತಿಸಿಕೊಂಡಿದೆಂದರು.
 ಸಾಲ ನೀಡಿಕೆ:
 ಕೃಷಿ ವಲಯಕ್ಕೆ  ಶೇ 25 ರಷ್ಟು ಸಾಲ ನೀಡಿದೆ.  ಬ್ಯಾಂಕಿನ 86 ಗ್ರಾಹಕರು ಪಿಎಂಇಜಿಪಿ ಮತ್ತು 23 ಗ್ರಾಹಕರು ಪಿಎಂಎಫ್‌ಎಂಇ ಸೌಲಭ್ಯವನ್ನು ಪಡೆದು ಸ್ವ ಉದ್ಯೋಗ ಪ್ರಾರಂಭಿಸಿ ಆರ್ಥಿಕ ಸ್ವಾವಲಂಬನೆ ಹೊಂದಿ ಉದ್ಯೋಗಗಳನ್ನು ಸೃಷ್ಟಿಸಿ ಉದ್ಯೋಗಪತಿಗಳಾಗಿ ಮತ್ತು ಸ್ಥಳೀಯ ಅಭಿವೃದ್ಧಿಯಲ್ಲಿ ಪಾಲ್ಗೊಂಡಿದ್ದಾರೆ.  11,901 ಮಹಿಳಾ ಗ್ರಾಹಕರಿಗೆ 156 ಕೋಟಿ ಸಾಲ ವಿತರಣೆ ಮಾಡಲಾಗಿದೆ. ಸಾಲ ಸೌಲಭ್ಯ ಪಡೆದಿರುವ ಮಹಿಳಾ ಗ್ರಾಹಕರು ಗೃಹ ಮತ್ತು ಗುಡಿ ಕೈಗಾರಿಕೆಗಳಲ್ಲಿ ಹಣವನ್ನು ವಿನಿಯೋಗ ಮಾಡಿ ಆರ್ಥಿಕ ಸ್ವಾವಲಂಬನೆ ಪಡೆದಿದ್ದಾರೆ. ಈ ಮೂಲಕ ಮಹಿಳಾ ಗ್ರಾಹಕರಲ್ಲಿ ಆರ್ಥಿಕ ಪರಿಣಿತಿ ಹೆಚ್ಚಿ ಅವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಸುಧಾರಣೆಯಾಗಿದೆಂದರು
ಈ ವರ್ಷ 2024-25ರ ಆರ್ಥಿಕ ಸಾಲಿನಲ್ಲಿ ಗ್ರಾಹಕರಿಗೆ ಡಿಜಿಟಲ್ ವ್ಯವಸ್ಥೆಯಲ್ಲಿ (ತಂತ್ರಜ್ಞಾನದ ಮೂಲಕ) ಸಾಲ ಮಂಜೂರಾತಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುತ್ತಿದೆ. ಈ ಮೂಲಕ ಗ್ರಾಹಕರಿಗೆ ಸುಲಭವಾಗಿ – ತ್ವರಿತವಾಗಿ ಸಕಾಲದಲ್ಲಿ ಸಾಲ ಸಿಗಲಿದೆ.  ನಮ್ಮ ಗ್ರಾಹಕರಿಗೆ ಬ್ಯಾಂಕ್ ವಿವಿಧ ಕಂಪನಿಗಳ ಜೊತೆ ಒಡಂಬಡಿಕೆ ಮಾಡಿಕೊಂಡು ಲೈಫ್ ಇನ್ಸೂರೆನ್ಸ್ ಮತ್ತು ಇತರೆ ಇನ್ಸೂರೆನ್ಸ್ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ.  ಕೇಂದ್ರ ಸರ್ಕಾರದ ಪಿಎಂಎಸ್‌ ಬಿವೈ ವಿಮಾ ಸೌಲಭ್ಯವನ್ನೂ ನೀಡಲಾಗುತ್ತಿದೆಂದರು.
 ದೂರುಗಳಿಗೆ ಕ್ರಮ:
ಗ್ರಾಹಕರ ಕುಂದುಕೊರತೆಗಳ ತ್ವರಿತ ನಿವಾರಣೆಗಾಗಿ ಸೋಷಿಯಲ್ ಮೀಡಿಯಾಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಗ್ರಾಹಕರು ತಮ್ಮ ಸಮಸ್ಯೆಗಳನ್ನು ವಾಟ್ಸಪ್, ಫೇಸ್‌ಬುಕ್, ಟ್ವಿಟರ್, ವೆಬ್ ಸೈಟ್ ಮತ್ತು ಶಾಖೆಗಳಲ್ಲಿ ದೂರು ಸಲ್ಲಿಸಿದಲ್ಲಿ ತ್ವರಿತವಾಗಿ ಪರಿಹರಿಸಲಾಗುತ್ತದೆ.
 ವೇತನ ಹೆಚ್ಚಳ:
ನಮ್ಮ ಬ್ಯಾಂಕ್‌ ಸಿಬ್ಬಂದಿಗಳ ಹಿತಕ್ಕಾಗಿ ಸಿಬ್ಬಂದಿಗಳಿಗೆ ಶೇ. 20 ರಷ್ಟು ವೇತನವನ್ನು ಹೆಚ್ಚಳ ಮಾಡಲಾಗಿದೆ. ಕಳೆದ ಆರ್ಥಿಕ ಸಾಲಿನಲ್ಲಿ 38 ನೂತನ ಅಧಿಕಾರಿಗಳನ್ನು ನೇಮಕಾತಿ ಮಾಡಲಾಗಿದೆ. 40 ಅಧಿಕಾರಿಗಳಿಗೆ ಪದೋನ್ನತಿ ಮಾಡಲಾಗಿದೆ. ಬ್ಯಾಂಕಿನ ಸಿಬ್ಬಂದಿಯವರಿಗೆ ರೂ.10 ಲಕ್ಷ ಮೊತ್ತದ ಜೀವ ವಿಮೆ ಹಾಗೂ ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ರೂ.4 ಲಕ್ಷ ಮೊತ್ತದ ಆರೋಗ್ಯ ವಿಮಾ ಸೌಲಭ್ಯವನ್ನು ಒದಗಿಸಲಾಗಿದೆ ಎಂದರು.
ಸುಕೋ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಜಿ.ಎಸ್. ರವಿಸುಧಾಕರ್,  ಬೋರ್ಡ್ ಸೆಕ್ರೇಟರಿ ವಿಶ್ವಲರಾವ್, ಪ್ರಧಾನ ವ್ಯವಸ್ಥಾಪಕರಾದ ಟಿ.ಎನ್. ಈಶ್ವರನ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.