ದೇವಾಲಯಗಳು ವಧಾಲಯಗಳಾಗ ಬಾರದು; ಶ್ರೀ ದಯಾನಂದ ಸ್ವಾಮೀಜಿ

ಸಂಜೆವಾಣಿ ವಾರ್ತೆ
ದಾವಣಗೆರೆ.ಏ.೨; ಹರಿಹರ ತಾಲೂಕಿನ ಹಿರೇ ಹಾಲಿವಾಣ ಗ್ರಾಮದಲ್ಲಿ ನಡೆಯುತ್ತಿರುವ ಶ್ರೀ ಏಳೂರು ಕರಿಯಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ಯಾವುದೇ ಕಾರಣಕ್ಕೂ ಪ್ರಾಣಿಬಲಿಗೆ ಜಿಲ್ಲಾಡಳಿತ ಅವಕಾಶ ನೀಡಬಾರದು ಎಂದು ವಿಶ್ವ ಪ್ರಾಣಿ ಕಲ್ಯಾಣಿ ಮಂಡಳಿ ಅಧ್ಯಕ್ಷ ಶ್ರೀ ದಯಾನಂದ ಸ್ವಾಮೀಜಿ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಏಳೂರು ಕರಿಯಮ್ಮ ದೇವಿ ಜಾತ್ರೆ ಏ. 5 ರವರೆಗೆ ನಡೆಯಲಿದೆ. ನಮಗೆ ದೊರೆತ ಮಾಹಿತಿ ಪ್ರಕಾರ ಮೂರನೇ ದಿನ ಕೋಣ ಸೇರಿದಂತೆ ವಿವಿಧ ಪ್ರಾಣಿಗಳ ಬಲಿಗೆ ಸಿದ್ಧತೆ ನಡೆದಿದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಯಾವುದೇ ಪ್ರಾಣಿಬಲಿ ಆಗದಂತೆ ತಡೆಯಲು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಬೇಕು ಎಂದು ಒತ್ತಾಯಿಸಿದರು.ರಾಜ್ಯದಲ್ಲಿ ಕೋಣ ಬಲಿ ನೀಡುವುದಕ್ಕೆ ಕಾನೂನಿನಲ್ಲಿ ಅವಕಾಶವೇ ಇಲ್ಲ. ಹದಿಮೂರು ವರ್ಷಗಳ ಒಳಗಿನ ಕೋಣ ಬಲಿ ನೀಡುವಂತೆಯೇ ಇಲ್ಲ. ದೇವಾಲಯ ಪರಿಸರ ಸುತ್ತಮುತ್ತಲಿನ ನೂರು ಮೀಟರ್ ಒಳಗೆ ಪ್ರಾಣಿಬಲಿ ನೀಡುವಂತೆ ಭಾವಿಸಿ ದ್ದಾರೆ. ಕರ್ನಾಟಕ ಪ್ರಾಣಿಬಲಿಗಳ ಪ್ರತಿ ಬಂಧಕ ಅಧಿನಿಯಮ, ತಿದ್ದುಪಡಿ ಪ್ರಕಾರ ಯಾವುದೇ ಮನೆಗಳ ಮುಂದೆಯೂ ಕೋಣ ಬಲಿ ನಡೆಯುವಂತಿಲ್ಲ. ಹಾಗಾಗಿ ಪ್ರಾಣಿಬಲಿಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.ದೇವಾಲಯಗಳು ವಧಾಲಯಗಳಾಗ ಬಾರದು. ಹಾಲಿವಾಣ ಗ್ರಾಮದ ಜನರು ಸಾತ್ವಿಕವಾಗಿ ಪೂಜೆ ಮಾಡಬೇಕು. ಭಕ್ತ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅಹಿಂಸಾ ಪ್ರಾಣಿದಯಾ ಆಧ್ಯಾತ್ಮಿಕ ಯಾತ್ರೆ ನಡೆಸಲಾಗುವುದು ಎಂದು ತಿಳಿಸಿದರು.