ಕಾಂಗ್ರೆಸ್ ಅಭ್ಯರ್ಥಿ ತಮ್ಮ ಕುಟುಂಬದ ಸಾಧನೆ ಜನರಿಗೆ ತಿಳಿಸಲಿ

ಸಂಜೆವಾಣಿ ವಾರ್ತೆ
ದಾವಣಗೆರೆ.ಏ.2: ಸಂಸದ ಡಾ.ಜಿ.ಎಂ.ಸಿದ್ದೇಶ್ವರ್ ಅವರ ಸಾಧನೆಗಳನ್ನು ಪ್ರಶ್ನೆ ಮಾಡುವ ಕಾಂಗ್ರೆಸ್ ಅಭ್ಯರ್ಥಿ ತಮ್ಮ ಕುಟುಂಬದ ಸಾಧನೆಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ತಿರುಗೇಟು ನೀಡಿದರು.ನಗರದ ಲೋಕಸಭಾ ಚುನಾವಣಾ ಬಿಜೆಪಿ ಕಾರ್ಯಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಮತಯಾಚನೆ ಮಾಡುವಾಗ ಕಳೆದ 25 ವರ್ಷಗಳಿಂದ ಒಂದೇ ಅಭ್ಯರ್ಥಿಗೆ ಮತ ಹಾಕುತ್ತಿದ್ದೀರಿ, ಅವರು ಜಿಲ್ಲೆಗೆ ಏನು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದು ಕೇಳಿದ್ದಾರೆ. ನಾವು ಇದೇ ಮಾತನ್ನು ಕೇಳ ಬಯಸುತ್ತೇವೆ, ಕಳೆದ 20 ವರ್ಷಗಳಿಂದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ನಿಮ್ಮ ಮಾವ ಕ್ಷೇತ್ರಕ್ಕೆ ಯಾವ ಕೊಡುಗೆ ನೀಡಿದ್ದಾರೆ ಎಂಬುದನ್ನು ತಿಳಿಸಿ ಎಂದು ತಿರುಗೇಟು ನೀಡಿದರು.8 ವರ್ಷಕ್ಕೂ ಹೆಚ್ಚಿನ ಅವಧಿಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ನಿಮ್ಮ ಪತಿ ಎಸ್.ಎಸ್.ಮಲ್ಲಿಕಾರ್ಜುನ್ ಇಲ್ಲಿವರೆಗೆ ಜಿಲ್ಲೆಯ ಎಷ್ಟು ಹಳ್ಳಿಗಳಿಗೆ ಭೇಟಿ ನೀಡಿದ್ದಾರೆ? ಗ್ರಾಮಾಂತರ ಪ್ರದೇಶದ ಯಾವ ಹಳ್ಳಿಗಳಿಗೆ ಅನುದಾನ ನೀಡಿದ್ದಾರೆ? ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಎಲ್ಲೆಲ್ಲಿ ಪ್ರಚಾರ ಮಾಡಿದ್ದರು? ಒಟ್ಟಾರೆ ದಾವಣಗೆರೆ ನಗರಕ್ಕೆ ಶಾಮನೂರು ಕುಟುಂಬದ ಕೊಡುಗೆ ಏನು? ಎಂಬುದನ್ನು ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಜನರಿಗೆ ತಿಳಿಸಬೇಕು ಎಂದು ಅವರು ಒತ್ತಾಯಿಸಿದರು.ಸಂಸದ ಡಾ.ಜಿ.ಎಂ.ಸಿದ್ದೇಶ್ವರ್ ಕೇಂದ್ರ ಸರ್ಕಾರದ ಯೋಜನೆ, ಕಾರ್ಯಕ್ರಮಗಳ ಜೊತೆಗೆ ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೈಗೊಂಡಿದ್ದಾರೆ. ಈ ಬಗ್ಗೆ ಇತ್ತೀಚೆಗಷ್ಟೇ ಸಾಧನೆಗಳ ರಿಪೋರ್ಟ್ ಕಾರ್ಡ್ ಕೂಡ ಬಿಡುಗಡೆ ಮಾಡಲಾಗಿದೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮಹಾನಗರ ಪಾಲಿಕೆಗೆ ಪ್ರತಿ ವರ್ಷ 100 ಕೋಟಿಯಂತೆ ಮೂರು ವರ್ಷ ಕೊಟ್ಟ 300 ಕೋಟಿ ರೂ. ಅನುದಾನ, ಕೇಂದ್ರ ಸರ್ಕಾರದ ಯು.ಐ.ಡಿ.ಎಸ್.ಎಸ್.ಎಂ.ಟಿ. ಯೋಜನೆಯ 88 ಕೋಟಿ ರೂ. ಅನುದಾನ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯ 1,070 ಕೋಟಿ ರೂ. ಅನುದಾನದಿಂದ ದಾವಣಗೆರೆ ಈ ದಿನ ಸುಂದರವಾಗಿ ಕಾಣುತ್ತಿದೆ ಎಂಬುದನ್ನು ಮರೆಯಬಾರದು ಎಂದರು.ಸAಸದ ಡಾ.ಜಿ.ಎಂ.ಸಿದ್ದೇಶ್ವರ್ ಕಳೆದ 20 ವರ್ಷಗಳಲ್ಲಿ ಜಿಲ್ಲೆಯ 1,300 ಹಳ್ಳಿಗಳಿಗೆ ಎಷ್ಟು ಬಾರಿ ಭೇಟಿ ನೀಡಿದ್ದಾರೆ, ಎಷ್ಟು ಅನುದಾನ ಕೊಟ್ಟಿದ್ದಾರೆ? ಎಂಬ ಮಾಹಿತಿ ಕೊಡಲು ನಾವು ಸಿದ್ಧರಿದ್ದೇವೆ. ವಿಮಾನ ನಿಲ್ದಾಣ ಸ್ಥಾಪನೆಗೆ ಈಗಾಗಲೇ ಸರ್ವೆ ಮಾಡಿಸಿ, ಅಗತ್ಯ ಜಮೀನು ಗುರುತಿಸಲಾಗಿದೆ. ಭೂಸ್ವಾಧೀನಕ್ಕಾಗಿ 142 ಕೋಟಿ ರೂ. ಬೇಕಾಗಿದ್ದು, ಅದನ್ನು ರಾಜ್ಯ ಸರ್ಕಾರದಿಂದ ಕೊಡಿಸುವ ಕೆಲಸ ಮಾಡಿ ಎಂದು ಅವರು ಸಲಹೆ ನೀಡಿದರು.ಪ್ರಧಾನಿ ನರೇಂದ್ರ ಮೋದಿಯವರು ಶೇ.33ರಷ್ಟು ಮಹಿಳಾ ಮೀಸಲಾತಿಗೆ ಕ್ರಮ ಕೈಗೊಂಡಿದ್ದಾರೆ. ಆದರೆ ಶಾಮನೂರು ಶಿವಶಂಕರಪ್ಪ ಬಿಜೆಪಿ ಅಭ್ಯರ್ಥಿ ಕುರಿತು ಅಡುಗೆ ಮನೆಗೆ ಲಾಯಕ್ಕು ಎಂದಿದ್ದಾರೆ. ಮಾವನವರು ನೀಡಿರುವ ಈ ಹೇಳಿಕೆಗೆ ನಿಮ್ಮ ಪ್ರತಿಕ್ರಿಯೆ ಏನೆಂಬುದನ್ನು ಮೊದಲು ಜನರಿಗೆ ತಿಳಿಸಿ. ಅದನ್ನು ಬಿಟ್ಟು ದಿಕ್ಕು ತಪ್ಪಿಸುವ ಹೇಳಿಕೆ ನೀಡುವ ಮೂಲಕ ಪಲಾಯನ ಮಾಡಿದರೆ ಜನ ನಿಮ್ಮನ್ನು ನಂಬುವುದಾದರು ಹೇಗೆ? ಎಂದು ಅವರು ಪ್ರಶ್ನಿಸಿದರು.ನರೇಂದ್ರ ಮೋದಿಯವರಿಗೆ ಕಾಂಗ್ರೆಸ್ಸಿನ ಮಣಿಶಂಕರ್ ಅಯ್ಯರ್ ಚಾಯ್ ವಾಲಾ ಅಂದಿದ್ದಕ್ಕೆ ಪ್ರತಿಯಾಗಿ ಚಾಯ್ ಪೆ ಚರ್ಚಾ ಮಾಡಿದ್ದೆವು. ಅದೇ ಮಾದರಿಯಲ್ಲಿ ಶಾಮನೂರು ಶಿವಶಂಕರಪ್ಪ ಹೇಳಿಕೆ ಖಂಡಿಸಿ, ಮಹಿಳೆಯು ಅಡುಗೆ ಮಾಡಲು ಸಿದ್ಧ, ಜನಸೇವೆಗೂ ಸಿದ್ಧ ಎಂಬ ಅಭಿಯಾನವನ್ನು ಜಿಲ್ಲೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಏಪ್ರಿಲ್ 3 ರಿಂದ ಕೈಗೊಳ್ಳಲಿದೆ. ಬಿಜೆಪಿ ಅಭ್ಯರ್ಥಿ ಸೇರಿದಂತೆ ಎಲ್ಲ ಬಗೆಯ ವೃತ್ತಿಯಲ್ಲಿರುವ ಮಹಿಳೆಯರು, ಸ್ಟಾರ್ ಪ್ರಚಾರಕರು ಸಾರ್ವಜನಿಕ ಸ್ಥಳದಲ್ಲಿ ಅಡುಗೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.