ನಟ ರಮೇಶ್ ಸೇರಿ ನಾಲ್ವರು ಬೆಂಗಳೂರು ಐಕಾನ್ಸ್
ಬೆಂಗಳೂರು, ಏ.೨- ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ೪ ಪ್ರಮುಖ ವ್ಯಕ್ತಿಗಳನ್ನು ನಮ್ಮ ಬೆಂಗಳೂರು ಐಕಾನ್ಸ್(ರಾಯಭಾರಿ) ಗಳಾಗಿ ನಿಯೋಜನೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ತಿಳಿಸಿದರು.
ನಗರದಲ್ಲಿಂದು ಪುರಭವನದಲ್ಲಿ ನಮ್ಮ ಬೆಂಗಳೂರು ಐಕಾನ್ಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಮತದಾನ ಮಾಡುವ ಸಲುವಾಗಿ ನಗರದ ಜನತೆಗೆ ಉಮ್ಮಸ್ಸು ತುಂಬಿಸುವ ಸಲುವಾಗಿ ಹಾಗೂ ಚುನಾವಣಾ ಹಬ್ಬಕ್ಕಾಗಿ ಈ ೪ ಪ್ರಮುಖ ವ್ಯಕ್ತಿಗಳು ರಾಯಭಾರಿಗಳಾಗಿ ನಮ್ಮ ಜೊತೆ ಕೈಜೋಡಿಸಿ ನಾಗರೀಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.
ಮೊದಲ ಬಾರಿ ಚುನಾವಣಾವಣೆಯಲ್ಲಿ ಮತ ಚಲಾಯಿಸುತ್ತಿರುವ ವರಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ತಪ್ಪದೆ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಮುಂದೆ ಬಂದು ಎಲ್ಲರಿಗೂ ಮತದಾಮ ಮಾಡಲು ಪ್ರೆರೇಪಿಸಿ ಮತದಾನ ಮಾಡಬೇಕೆಂದು ತಿಳಿಸಿದರು.
ಮತ ಚಲಾಯಿಸುವುದು ಎಲ್ಲರ ಆದ್ಯ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ಮತಗಟ್ಟೆಗಳ ಬಳಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿರುತ್ತದೆ. ನಿಮಗೆ ಮತ ಚಲಾಯಿಸಲು ಇಷ್ಟವಿಲ್ಲದಿದ್ದರೆ ನೋಟ ಮಾಡಲು ಕೂಡಾ ಅವಕಾಶವಿದ್ದು, ಎಲ್ಲರೂ ಮತ ಚಲಾಯಿಸಲು ಮನವಿ ಮಾಡಿದರು.
ಚುನಾವಣಾ ರಾಯಭಾರಿ ಚಿತ್ರನಟ ರಮೇಶ್ ಅರವಿಂದ್ ಮಾತನಾಡಿ, ಏಪ್ರಿಲ್ ೨೬ ರಂದು ಚುನಾವಣಾ ಹಬ್ಬವಿದ್ದು, ಎಲ್ಲರೂ ಸಡಗರದಿಂದ ಒಟ್ಟಾಗಿ ಮತಗಟ್ಟೆಗೆ ತೆರಳಿ ಮತದಾನ ಮಾಡೋಣ. ಒಂದು ಮತದಿಂದ ಎಲ್ಲವನ್ನೂ ಬದಲಿಸುವ ಶಕ್ತಿಯಿದೆ. ಆದ್ದರಿಂದ ಎಲ್ಲರೂ ತಪ್ಪದೆ ಮತದಾನ ಮಾಡಲು ತಿಳಿಸಿದರು.
ಚುನಾವಣಾ ವ್ಯವಸ್ಥೆಯಲ್ಲಿ ನಾವು ಮತದಾನ ಮಾಡಿದರೆ ಏನೂ ಬದಲಾಗೋದಿಲ್ಲ ಎಂಬ ಮನೋಭಾವಿದ್ದರೆ ಅದನ್ನು ಮೊದಲು ತಲೆಯಿಂದ ತೆಗೆಯಿರಿ. ಜವಾಬ್ದಾರಿಯಿಂದ ಎಲ್ಲರೂ ಒಂದಾಗಿ ಮತದಾನ ಮಾಡಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಉತ್ತಮ ಸಮಾಜವನ್ನು ರೂಪಿಸಿ ಎಂದು ಪ್ರೆರೇಪಿಸಿದರು.
ಚುನಾವಣಾ ರಾಯಭಾರಿ ಬ್ಯಾಡ್ಮಿಂಟನ್ ಆಟಗಾರ ಅನುಪ್ ಶ್ರೀಧರ್ ಮಾತನಾಡಿ, ಎಲ್ಲರೂ ತಪ್ಪದೆ ಮತದಾನ ಮಾಡುವುದು ನಮ್ಮೆಲ್ಲ ಕರ್ತವ್ಯ, ನಾವು ಮತದಾನ ಮಾಡಿಲ್ಲವಾದಲ್ಲಿ ನಾವು ಪ್ರಶ್ನೆ ಮಾಡಲು ಅರ್ಹರಿರುವುದಿಲ್ಲ. ಆದ್ದರಿಂದ ನಾವೆಲ್ಲರೂ ತಪ್ಪದೆ ಮತದಾನ ಮಾಡೋಣ ಎಂದರು.
ಈ ಸಂದರ್ಭದಲ್ಲಿ ರಾಯಭಾರಿಗಳಾದ ನಟಿ ನೀತು ವನಜಾಕ್ಷಿ,ಅನುಪ್ ಶ್ರೀಧರ್, ಅರ್ಚನಾ ಜಿ ಕಾಮತ್, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಕಾಂತರಾಜ್, ವಿಶೇಷ ಆಯುಕ್ತ ಸುರೋಲ್ಕರ್ ವಿಕಾಸ್ ಕಿಶೋರ್, ಸ್ವೀಪ್ ನೋಡಲ್ ಅಧಿಕಾರಿ ಪ್ರತಿಭಾ, ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.