ಅಕ್ರಮ ಮರಳುಗಾರಿಕೆ ತಡೆಯುವಲ್ಲಿ ಅಧಿಕಾರಿಗಳು ವಿಫಲ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.02: ಮಳೆಯಿಲ್ಲದೆ ತಾಲೂಕಿನ ಕೆರೆ ಕಟ್ಟೆಗಳು ಬರಿದಾಗಿದ್ದು ರೈತ ಸಮುದಾಯ ತನ್ನ ಅಳಿದುಳಿದ ಬೆಳೆ ಸಂರಕ್ಷಿಸಿಕೊಳ್ಳಲು ಪರದಾಡುತ್ತಿದ್ದರೆ ಮರಳು ದಂದೆಕೋರರು ರೈತರ ಜೀವನಾಡಿಗಳಾದ ಕೆರೆಗಳ ಒಡಲನ್ನೆ ಬಗೆದು ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಾ ನೆಲದ ಕಾನೂನನ್ನೆ ಧಿಕ್ಕರಿಸಿ ನಿಂತಿದ್ದಾರೆ. ಅಕ್ರಮ ಮರಳು ಗಣಿಗಾರಿಕೆಯನ್ನು ತಡೆದು ಪ್ರಾಕೃತಿಕ ಸಂಪತ್ತನ್ನು ರಕ್ಷಿಸಬೇಕಾದ ಅಧಿಕಾರಿಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದು ತಾಲೂಕಿನಾದ್ಯಂತ ಕೆರೆ-ಕಟ್ಟೆಗಳು ಮರಳುಗಳ್ಳರ ಅಕ್ರಮ ದಾಳಿಯಿಂದ ತಮ್ಮ ಮೂಲ ಸ್ವರೂಪವನ್ನೇ ಕಳೆದುಕೊಳ್ಳುತ್ತಿವೆ.
ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಣಿಗಾರಿಕೆಯ ಬಗ್ಗೆ ಸಮಗ್ರ ವರದಿ ಮಾಡಿತ್ತು. ಪತ್ರಿಕಾ ವರದಿಯನ್ನು ಆಧರಿಸಿ 2024ರ ಜನವರಿ 01 ರಂದು ರಾಜ್ಯ ಉಪ ಲೋಕಾಯುಕ್ತರಾದ ಕೆ.ಎನ್.ಫಣೀಂದ್ರ ಅವರು ತಾಲೂಕಿನ ತಹಸೀಲ್ದಾರರು, ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳು, ಕೆ.ಆರ್.ಪೇಟೆ ಪಟ್ಟಣ, ಗ್ರಾಮಾಂತರ ಮತ್ತು ಕಿಕ್ಕೇರಿ ಪೆÇಲೀಸ್ ಠಾಣೆಯ ಪೆÇಲೀಸ್ ನೀರೀಕ್ಷರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ತಾಲೂಕು ಅಧಿಕಾರಿ ಮತ್ತು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ನಿರ್ದೇಶಕಿ ಸೇರಿದಂತೆ ಒಟ್ಟು 07 ಜನ ಅಧಿಕಾರಿಗಳ ವಿರುದ್ದ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಅಕ್ರಮ ಮರಳು ಗಣಿಗಾರಿಕೆ ಸಂಬಂಧ ಪರಿಶೀಲಿಸಿ ವರದಿ ನೀಡುವಂತೆ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದ್ದ ಉಪ ಲೋಕಾಯುಕ್ತರು ಪತ್ರಿಕಾ ವರದಿಯಲ್ಲಿ ಉಲ್ಲೇಖಿತ ಸ್ಥಳಗಳನ್ನು ಪರಿಶೀಲಿಸಿ ವರ್ತಮಾನದ ಸ್ಥಿತಿಗತಿಗಳ ಬಗ್ಗೆ ವಿಡೀಯೋ ಮತ್ತು ಚಿತ್ರ ಸಹಿತವಾದ ವರದಿ ನೀಡುವಂತೆ ಜಿಲ್ಲಾ ಪೆÇಲೀಸ್ ವರಿಷ್ಟಾಧಿಕಾರಿಗಳಿಗೂ ಸೂಚಿಸಿದ್ದರು.
ಉಪ ಲೋಕಾಯುಕ್ತರು ಸುಮೋಟೋ ಕೇಸ್ ದಾಖಲಿಸಿದ ಅನಂತರ ತಾಲೂಕಿನಲ್ಲಿ ಅಕ್ರಮ ಮರಳು ದಂದೆ ಸಂಪೂರ್ಣ ನಿಂತು ಹೋಗುತ್ತದೆಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ರಾಜ್ಯ ಉಪ ಲೋಕಾಯುಕ್ತರು ಸುಮೋಟೋ ಕೇಸ್ ದಾಖಲಿಸಿದ್ದರೂ ಅಕ್ರಮ ಮರಳು ದಂದೆ ಕೋರರನ್ನು ನಿಯಂತ್ರಿಸಲು ತಾಲೂಕು ಅಧಿಕಾರಿಗಳು ಯಾವುದೇ ರೀತಿಯ ಗಂಭೀರ ಕ್ರಮ ತೆಗೆದುಕೊಂಡಂತೆ ಕಾಣುತ್ತಿಲ್ಲ. ಪರಿಣಾಮ ತೀವ್ರ ಬರಗಾಲದ ಸನ್ನಿವೇಶದಲ್ಲಿ ತಾಲೂಕಿನ ಕೆರೆ ?ಕಟ್ಟೆಗಳು ಅಕ್ರಮ ಮರಳು ದಂದೆಕೋರರ ದಾಳಿಗೆ ಬಲಿಯಾಗುತ್ತಿವೆ. ತಾಲೂಕಿನ ಹೇಮಾವತಿ ನದಿ ದಂಡೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ. ಆದರೆ ಕೆರೆ ಬಯಲಿನಲ್ಲಿ ಫಿಲ್ಟರ್ ಮರಳು ದಂದೆ ಯಾವ ಅಡೆತಡೆಯೂ ಇಲ್ಲದೆ ನಡೆಯುತ್ತಿದೆ. ತಾಲೂಕಿನ ಶೀಳನೆರೆ ಮತ್ತು ಸಂತೇಬಾಚಹಳ್ಳಿ ಹೋಬಳಿಯ ಬಹುತೇಕ ಕೆರೆಗಳ ಒಡಲು ಮರಳುಗಳ್ಳರ ಹಾವಳಿಗೆ ತುತ್ತಾಗಿವೆ. ಸಾರ್ವಜನಿಕರ ಮಾಹಿತಿಯಂತೆ ತಾಲೂಕಿನ ರಾಯಸಮುದ್ರ, ಮರುವನಹಳ್ಳಿ, ಹರಳಹಳ್ಳಿ, ನೀತಿಮಂಗಲ, ಶೀಳನೆರೆ, ಹೆಮ್ಮನಹಳ್ಳಿ ಹಳ್ಳ, ಸಾರಂಗಿ, ಜಾಗಿನ ಕೆರೆ, ರಂಗನಾಥಪುರ ಕ್ರಾಸ್, ನಾಗರಘಟ್ಟ, ಅಘಲಯ, ಚಿಕ್ಕಹಾರನಹಳ್ಳಿ, ನಾಯಕನಹಳ್ಳಿ ಮುಂತಾದ ಕೆರೆಗಳಲ್ಲಿ ಯಾವುದೇ ಕಾನೂನಿನ ಭಯವಿಲ್ಲದೆ ಮರಳು ಫೀಲ್ಟರ್ ದಂದೆ ನಡೆಯುತ್ತಿದೆ.
ಶಾಸಕರ ಮಾತಿಗೂ ಕಿಮ್ಮತ್ತಿಲ್ಲ:
ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂದೆಯ ಬಗ್ಗೆ ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು ಕೂಡ ಧ್ವನಿಯೆತ್ತಿದ್ದರು. ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿಯೇ ಅಕ್ರಮ ಫಿಲ್ಟರ್ ಮರಳು ದಂದೆಯ ಬಗ್ಗೆ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಪತ್ರಿಕಾ ವರದಿ ಮತ್ತು ಶಾಸಕರು ಧ್ವನಿಯೆತ್ತಿದ ಅನಂತರ ಒಂದೆರಡು ದಿನ ಅಕ್ರಮ ಮರಳು ಸಾಗಾಣಿಕೆ ವಾಹನಗಳನ್ನು ಹಿಡಿದಂತೆ ಮಾಡಿ ಕಣ್ಣೊರೆಸುವ ನಾಟಕ ಮಾಡಿದ ಅಧಿಕಾರಿಗಳು ಮರಳು ದಂದೆಯನ್ನು ಬುಡಸಮೇತ ಕಿತ್ತು ಹಾಕಲು ಯಾವುದೇ ಕಠಿಣ ಕ್ರಮ ವಹಿಸುತ್ತಿಲ್ಲ. ಫಿಲ್ಟರ್ ಮರಳಿನಲ್ಲಿ ಮನೆ ನಿರ್ಮಿಸುವುದರಿಂದ ಮನೆಗಳಿಗೆ ಬಳಸಿದ ಕಬ್ಬಿಣ ತುಕ್ಕುಹಿಡಿದು ಹಾಳಾಗಲಿದ್ದು ಕೋಟ್ಯಾಂತರ ರೂ ಖರ್ಚುಮಾಡಿ ನಿರ್ಮಿಸಿದ ಮನೆಗಳು ಧೀರ್ಘಕಾಲ ಬಾಳಿಕೆ ಬರುವುದಿಲ್ಲ. ಫಿಲ್ಟರ್ ಮಾಡಿದ ನೀರನ್ನು ಕುಡಿದ ದನಕರುಗಳು ಕಾಯಿಲೆಗಳಿಗೆ ತುತ್ತಾಗುತ್ತಿವೆ. ಕೆರೆಗಳ ಒಡಲನ್ನು ಬಗೆದು ಗುಂಡಿ ಮಾಡುತ್ತಿರುವುದರಿಂದ ಕೆರೆ ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿಗಳು ಸ್ಥಗಿತಗೊಳ್ಳುತ್ತಿವೆ. ಇದರ ಪರಿಣಾಮ ಬರಗಾಲದಲ್ಲಿ ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿರುವ ರೈತ ಸಮುದಾಯದ ಮೇಲಾಗುತ್ತಿದೆ. ಸ್ಥಗಿತಗೊಂಡಿರುವ ಬೋರ್ ವೆಲ್ ಗಳನ್ನು ರೀ ಬೋರ್ ಮಾಡಿಸಿಕೊಳ್ಳಲು ಕೆರೆ ಬಯಲಿನ ರೈತರು ಲಕ್ಷಾಂತರ ರೂ ವ್ಯಹಿಸುತ್ತಿದ್ದಾರೆ.
ತಾಲ್ಲೂಕಿನ ಹಲವಾರು ಕಡೆಗಳಲ್ಲಿ ಅಕ್ರಮ ಮರಳುಗಣಿಗಾರಿಕೆ ನಡೆಯುತ್ತಿರುವುದು ಪೆÇಲಿಸರಿಗೆ ತಿಳಿದಿರುತ್ತದೆ. ಆದರೆ ಮಾಸಿಕವಾಗಿ ಇಂತಿಷ್ಟು ಹಣ ಪಡೆದು ಸುಮ್ಮನಿದ್ದಾರೆ ಎಂಬ ಆರೋಪಗಳಿವೆ. ಪೆÇಲೀಸರು ದಂಧೆಕೋರರಿಂದ ಹಣ ಪಡೆಯದಿದ್ದರೆ ಅಕ್ರಮ ಮರಳುಗಾರಿಕೆ ತಡೆಗಟ್ಟುವುದು ಕಷ್ಟಸಾದ್ಯವೇನಲ್ಲ. ಅದೇರೀತಿ ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮಲೆಕ್ಕಾಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಿಬ್ಬಂದಿಗಳು ಹಣ ಪಡೆದು ಮರಳುಗಣಿಗಾರಿಕೆಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿರುವುದು ಅಕ್ರಮ ಮರಳು ಗಣಿಗಾರಿಕೆ ನಿರಂತರವಾಗಿರಲು ಕಾರಣ ಎನ್ನುತ್ತಾರೆ ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್.