ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಎಂ.ಲಕ್ಷ್ಮಣ್
ಸಂಜೆವಾಣಿ ನ್ಯೂಸ್
ಮೈಸೂರು: ಏ.02:- ಸಾಮಾನ್ಯ ಕಾರ್ಯಕರ್ತನಾಗಿ ಕಾಂಗ್ರೆಸ್ ಪಕ್ಷಕ್ಕಾಗಿ ಕಳೆದ 20 ವರ್ಷಗಳಿಂದ ನಿರಂತರ, ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ. ಸರ್ವತೋಮುಖ ಅಭಿವೃದ್ಧಿಗೆ ನನ್ನನ್ನು ಬೆಂಬಲಿಸಿ ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ?ಮಣ್ ತಿಳಿಸಿದರು.
ಕುವೆಂಪುನಗರದ ಹಿರಿಯ ಮುಖಂಡರಾದ ವಿಕ್ರಾಂತ್ ದೇವೇಗೌಡ ಅವರ ಮನೆಯಲ್ಲಿ ಇಂದು ನಡೆದ ಸ್ಥಳೀಯ ಮುಖಂಡರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಚಾಮಲಾಪುರದ ವಿದ್ಯುತ್ ಸ್ಥಾವರ ನಿರ್ಮಾಣದ ವಿರುದ್ಧವಾಗಿ 18 ತಿಂಗಳುಗಳ ಕಾಲ ಹೋರಾಟ ಮಾಡಿ ಸಮಸ್ಯೆಯನ್ನು ಬಗೆಹರಿಸಿದ್ದೇನೆ. ಹಾಗಾಗಿ ಮೈಸೂರಿನ ಸರ್ವತೋಮುಖ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ನನ್ನನು ಗೆಲ್ಲಿಸಬೇಕು ಎಂದು ಹೇಳಿದರು.
ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ಹಾಗೂ ಮುಖ್ಯ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಬಿಜೆಪಿಯು ಕೇವಲ ಜಾತಿ ಜಾತಿ ನಡುವೆ ಸಂಘರ್ಷ ತಾರತಮ್ಯ ಮಾಡಿ ಜನರು ನೆಮ್ಮದಿಯನ್ನು ಹಾಳು ಮಾಡಿದೆ. ಹಾಗಾಗಿ ಜನರ ಶಾಂತಿ ಹಾಗೂ ಮೈಸೂರಿನ ಬದಲಾವಣೆಗೆ ಈ ಬಾರಿ ಕಾಂಗ್ರೆಸ್‍ಗೆ ಬೆಂಬಲಿಸಿ ಎಂದು ಹೇಳಿದರು.
ಇದೇ ಎ.3ರಂದು ಬುಧವಾರ ಮಧ್ಯಾಹ್ನ 2 ಗಂಟೆಗೆ ಮೈಸೂರಿನ ನೂತನ ಡಿ.ಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುತ್ತಿದ್ದೇನೆ. ಈ ಕಾರ್ಯಕ್ರಮದಲ್ಲಿ ಮಾನ್ಯಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು, ಸಚಿವರು, ಶಾಸಕರು ಆಗಮಿಸಲಿದ್ದಾರೆ. ಹಾಗಾಗಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನನಗೆ ಆಶೀರ್ವದಿಸಿ ಎಂದರು.
ಸಭೆಯಲ್ಲಿ ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಮೈಸೂರು ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆಯೂಬ್ ಖಾನ್, ಹಿರಿಯ ಮುಖಂಡ ವಿಕ್ರಾಂತ್ ದೇವೇಗೌಡ, ಜಿ.ಪಂ. ಮಾಜಿ ಅಧ್ಯಕ್ಷ ಬಿ.ಎಂ.ರಾಮು ಸೇರಿ ಇನ್ನಿತರರು ಉಪಸ್ಥಿತರಿದ್ದರು.