ಹಗಲು ಬಿಸಿಲು, ರಾತ್ರಿ ಧಗೆ: ಜನ ತಳಮಳ
ಕಲಬುರಗಿ,ಏ.1-ಸೂರ್ಯನ ತಾಪಕ್ಕೆ ಹಗಲು ಭೂಮಿ ಕಾದ ಕೆಂಡವಾಗುತ್ತಿದ್ದು, ಇದರಿಂದ ರಾತ್ರಿ ಧಗೆ ಹೆಚ್ಚಾಗುತ್ತಿದೆ. ಬಿಸಿಲಿಗಂಜಿ ಜನ ಹಗಲು ಹೊರಗಡೆ ಓಡಾಡಲು ಹೆದರಿದರೆ, ರಾತ್ರಿ ಧಗೆ ತಾಳದೆ ಚಡಪಡಿಸುವಂತಾಗಿದೆ.
ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಬಿಸಿಲ ತಾಪ ಹೆಚ್ಚಾಗಿದ್ದು, ಶುಕ್ರವಾರ 40.9, ಶನಿವಾರ 41.8 ಮತ್ತು ಭಾನುವಾರ 41.1 ಗರಿಷ್ಠ ತಾಪಮಾನ ದಾಖಲಾಗಿದೆ. ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಟಿದೆ. ಇದರಿಂದಾಗಿ ರಾತ್ರಿ ಧಗೆ ಹೆಚ್ಚಾಗಿ ನಿದ್ದೆ ಬಾರದೆ ಜನ ಒದ್ದಾಡುವಂತಾಗಿದೆ.
ಬಿಸಿಲು ಹೆಚ್ಚಾದಂತೆ ವಿದ್ಯುತ್ ಬಳಕೆಯೂ ಹೆಚ್ಚಾಗಿದ್ದು, ಫ್ಯಾನ್, ಏರ್ ಕೂಲರ್ ಬಳಕೆ ಮಾಡಿದೂರ ಧಗೆ ತಾಳದಂತಹ ಸ್ಥಿತಿ ನಿರ್ಮಾಣವಾಗಿದೆ. ಬಿಸಿ ಗಾಳಿಯಿಂದ ಫ್ಯಾನ್ ಇದ್ದರೂ ಜನ ಬೆವೆತು ಹೋಗುವಂತಹ ಸ್ಥಿತಿ ಸದ್ಯ ನಿರ್ಮಾಣವಾಗಿದೆ.
ಧಗೆಯ ಕಾರಣಕ್ಕೆ ಜನ ಮನೆ ಮಾಳಿಗೆ ಮೇಲೆ ಮಲಗುತ್ತಿದ್ದರೂ ಕಳ್ಳಕಾಕರ ಭಯ ಕಾಡುತ್ತಿದೆ. ಬೆಳಿಗ್ಗೆ ಹತ್ತುಗಂಟೆಯಷ್ಟೊತ್ತಿಗೆ ಬಿಸಿಲು ಪ್ರಖರವಾಗುತ್ತ ಹೋಗಿ ಹನ್ನೆರಡು ಗಂಟೆಯೊಷ್ಟೊತ್ತಿಗೆ ಭೂಮಿ ಕಾದು ಕೆಂಡವಾಗುತ್ತಿದೆ. ಸಾಯಂಕಾಲ 4 ಗಂಟೆಯ ನಂತರವಷ್ಟೇ ಬಿಸಿಲ ತಾಪ ಸ್ವಲ್ಪ ಕಡಿಮೆಯಾಗುತ್ತಿದೆ. ರಣ ಬಿಸಿಲಿನ ಕಾರಣಕ್ಕೆ ಹೊರಗಡೆ ಜನರ ಓಡಾಟವು ಕಡಿಮೆಯಾಗಿದೆ. ಬಿಸಿಲ ಬೇಗೆ ತಣಿಸಿಕೊಳ್ಳಲು ಜನ ತಂಪು ಪಾನಿಯಗಳಿಗೆ ಮೊರೆ ಹೋಗುತ್ತಿದ್ದಾರೆ. ಲಿಂಬು ಷರಬತ್, ಮಜ್ಜಿಗೆ, ಎಳೆ ನೀರು ಸೇವನೆ ಹೆಚ್ಚಾಗಿದೆ.
ಹಗಲು ಭೂಮಿ ಕಾದು ಕೆಂಡವಾಗುತ್ತಿರುವ ಪರಿಣಾಮದಿಂದಾಗಿ ರಾತ್ರಿ ಬಿಸಿಗಾಳಿ ಮತ್ತು ಧಗೆಯಿಂದ ಜನ ತತ್ತರಿಸಿ ಹೋಗುವಂತಾಗಿದೆ.