ದಾಸವರೇಣ್ಯ ವಿಜಯದಾಸರು ಏ.19 ರಂದು ಬಿಡುಗಡೆ
ಕಲಬುರಗಿ,ಏ.1: ಎಸ್ಪಿಜೆ ಮ್ಯೂವೀಸ್ ಅರ್ಪಿಸುವ ದಾಸವರೇಣ್ಯ ಶ್ರೀ ವಿಜಯದಾಸರು ಚಲನಚಿತ್ರ ಏ.19 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ತ್ರಿವಿಕ್ರಮ ಜೋಶಿ ಹಾಗೂ ನಿರ್ದೇಶಕ ಮಧುಸೂದನ ಹವಲ್ದಾರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕನ್ನಡ ಸಾಹಿತ್ಯಕ್ಕೆ ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯ ಎರಡು ಕಣ್ಣುಗಳಿದ್ದಂತೆ. ಭಗವಂತನ ಅಸ್ತಿತ್ವ ತೋರಿಸಿಕೊಟ್ಟಿರುವ ದಾಸ ಸಾಹಿತ್ಯ ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗಿಲ್ಲ.ಸಮಾಜ ತಿದ್ದುವ ಕಾರ್ಯ ದಾಸರು ಮಾಡಿದ್ದಾರೆ.ದಾಸರ ಸಮಾಜಮುಖಿ ಕೆಲಸಗಳನ್ನು ಜನಸಾಮಾನ್ಯರಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ನಮ್ಮ ತಂಡ ಶ್ರಮಿಸುತ್ತಿದೆ ಎಂದು ಹೇಳಿದರು.
ಈ ಮೊದಲು ಜಗನ್ನಾಥ ದಾಸರು ಮತ್ತು ಪ್ರಸನ್ನ ವೆಂಕಟ ದಾಸರು ಎರಡು ಚಲನಚಿತ್ರಗಳು ನಿರ್ಮಾಣವಾಗಿದ್ದು ಭಕ್ತರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಜಗನ್ನಾಥ ದಾಸರು ಭಾಗ-2 ಮತ್ತು ದಾಸವರೇಣ್ಯ ವಿಜಯದಾಸರು ಭಾಗ-2 ಚಿತ್ರಗಳು ಕೂಡ ಅರ್ಧದಷ್ಟು ಚಿತ್ರಿಕರಣಗೊಂಡಿವೆ. ಮುಂಬರುವ ದಿನಗಳಲ್ಲಿ ಅವರೆಡು ಚಿತ್ರಗಳು ಕೂಡ ತೆರೆಕಾಣಲಿವೆ ಎಂದು ಹೇಳಿದರು.
ಶರಣ ಸಾಹಿತ್ಯದ ಪ್ರತೀಕವಾಗಿರುವ ಮೋಳಿಗೆ ಮಾರಯ್ಯ ಚಲನ ಚಿತ್ರ ಕೂಡ ಇದೆ ತಂಡದಿಂದ ನಿರ್ಮಿಸಲಾಗುತ್ತಿದೆ.ಕಲಬರಗಿಯರಾದ ರವಿ ಲಾತೂರಕರ್ ಅವರು ಈ ಚಿತ್ರದಲ್ಲಿ ಕಾಶಿ ರಾಜನಾಗಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಮುಖರಾದ ಪಂ.ಗೋಪಾಲಾಚಾರ್ಯ ಅಕಮಂಚಿ, ರವಿ ಲಾತೂರಕರ್, ವ್ಯಾಸರಾಜ ಸಂತೆಕೆಲ್ಲೂರ, ರಾಮರಾವ ಗಣೇಕರ್,ಗುಂಡಾಚಾರ್ಯ ನರಬೋಳ, ಶಿರವಾಳ ರಾಘಣ್ಣ ಸುದ್ದಿಗೋಷ್ಠಿಯಲ್ಲಿದ್ದರು