ಕಲಾವಿದರಿಗೆ ಜನ್ಮಸ್ಥಳ ವಿಶ್ವ ರಂಗಭೂಮಿ:ಟಿ ಹೆಚ್ ಎಂ ಬಸವರಾಜ
(ಸಂಜೆವಾಣಿ ವಾರ್ತೆ)
ಬಳ್ಳಾರಿ ಎ.01 :-ಕಲಾವಿದರಿಗೆ ಜನ್ಮ ಕೊಟ್ಟ ಸ್ಥಳ ವಿಶ್ವ ರಂಗಭೂಮಿ ಎಂದು   ಕರ್ನಾಟಕ ಇತಿಹಾಸ ಅಕಾಡೆಮಿ ಜಿಲ್ಲಾ ಅಧ್ಯಕ್ಷ ಟಿ ಹೆಚ್ ಎಂ ಬಸವರಾಜ  ಅಭಿಪ್ರಾಯಪಟ್ಟಿದ್ದಾರೆ.
ಅವರು ನಿನ್ನೆ ಸಂಜೆ  ನಗರದ
ಡಿ ಆರ್ ಕೆ ಬಯಲು ರಂಗ ಮಂದಿರದಲ್ಲಿ ಅಭಿನಯ ಕಲಾಕೇಂದ್ರ ಮತ್ತು ಡಿ ಆರ್ ಕೆ ರಂಗಸಿರಿ ಟ್ರಸ್ಟ್ ಇವರು ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ “ಕಲಾ ಕಲರವ” ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಡೀ ರಾಜ್ಯದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಇರುವಷ್ಟು ಕಲಾವಿದರು ಮತ್ತು ಕಲಾ ಪ್ರಕಾರಗಳು ಯಾವ ಜಿಲ್ಲೆಯಲ್ಲಿಯೂ ಇಲ್ಲ. ಅನೇಕ ಕಲಾ ಪ್ರಕಾರಗಳು ಇಲ್ಲೇ ಹುಟ್ಟಿ ಬೆಳೆದಿವೆ. ಆದರೂ ಬಳ್ಳಾರಿ ಜಿಲ್ಲೆಗೆ ಈ ವರ್ಷ ಒಂದು ರಾಜ್ಯೋತ್ಸವ ಪ್ರಶಸ್ತಿ ನೀಡಲಿಲ್ಲ, ಅಕಾಡೆಮಿಗಳ ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿಯಲ್ಲಿಯೂ ಅನ್ಯಾಯವಾಯಿತು., ಬಳ್ಳಾರಿ ಉತ್ಸವವಾಗಲೀ, ರಂಗಮಂದಿರ ರಿಪೇರಿಯಾಗಲೀ ಯಾವುದೂ ಆಗದಿರುವುದು ಶೋಚನೀಯ. ಕಲಾವಿದರಿಗೆ ಒಂದು ವರ್ಷ ಕಳೆದರೂ ಆರ್ಥಿಕ ಸಹಾಯ ಬರುವುದಿಲ್ಲ‌ . ಏಕೆಂದರೆ ಕಲಾವಿದರಲ್ಲಿ ಒಗ್ಗಟ್ಟಿಲ್ಲ, ಇದು ನಮ್ಮ ಜಿಲ್ಲೆಯ ದುರಾದೃಷ್ಟ ಎಂದು ವಿಷಾದಿಸಿದರು. ಕಲೆ ಒಂದು ತಪಸ್ಸು. ಯಾರು ಬೇಕಾದರೂ ಅಧಿಕಾರಿಗಳಾಗಬಹುದು. ಆದರೆ ಅಧಿಕಾರಿಗಳು ಕಲಾವಿದರು ಆಗಲಿಕ್ಕೆ ಸಾಧ್ಯವಿಲ್ಲ. ನಮ್ಮ ಜಿಲ್ಲೆ ಎಲ್ಲಾ ರಂಗಗಳಲ್ಲೂ ಕಡೆಗಣಿಸಲ್ಪಟ್ಟಿದೆ. ಇನ್ನು ಮೇಲಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೆಂದು ಟಿ ಹೆಚ್ ಎಂ ಬಸವರಾಜ್ ರವರು ವಿನಂತಿಸಿದರು.
ಎ ಎಂ ಪಿ ವೀರೇಶ್ ಸ್ವಾಮಿ ವಿಶ್ವ ರಂಗಭೂಮಿ ದಿನಾಚರಣೆಯ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು. ದಸ್ತಗೀರ್ ಸಾಬ್ ದಿನ್ನಿಯವರು  ಕಲಾವಿದರಿಗೆ ಅವಕಾಶ ಕಲ್ಪಿಸುವ ಇಂತಹ ಪ್ರಯತ್ನ ಶ್ಲಾಘನೀಯ ಎಂದರು. ಅಧ್ಯಕ್ಷತೆ ವಹಿಸಿದ್ದ ಖಾಸೀಂ ಅಲಿಯವರು ಕಾರ್ಯಕ್ರಮವನ್ನು ಮೆಚ್ಚಿ ಮಾತನಾಡಿದರು. ಸಾಹಿತಿ ರಂಗ ನಿರ್ದೇಶಕ ಕೆ‌ . ಜಗದೀಶ್ ರವರು ಸ್ವಾಗತ ಪ್ರಾಸ್ತಾವಿಕ ಮತ್ತು ವಂದನಾರ್ಪಣೆ ಮಾಡಿದರು.
 ವಿಷ್ಣು ಹಡಪದ್ ನಿರೂಪಿಸಿದರು ಅಣ್ಣಾಜಿ ಕೃಷ್ಣಾರೆಡ್ಡಿ ರಂಗಗೀತೆಗಳನ್ನು ಹಾಡಿದರು. ರಂಗಜಂಗಮ ಸಂಸ್ಥೆಯ ಡಾ. ಅಣ್ಣಾಜಿ ಕೃಷ್ಣಾರೆಡ್ಡಿ ಮತ್ತು ವಿಷ್ಣು ಹಡಪದರ ರಂಗಗೀತೆ ರಂಜಿಸಿತು. ಡಾ. ಚಾರುಲತಾ ಶ್ರೀನಿಧಿ ಕಲಾ ಟ್ರಸ್ಟ್ ಇವರಿಂದ ಸಮೂಹ ನೃತ್ಯ, ಡಾ. ಶ್ರೀ ಹರ್ಷಿತ ಬಿಡಿಎಸ್ ಇವರಿಂದ ಭರತನಾಟ್ಯ ನಡೆಯಿತು. ಡಾ. ವೀಣಾ ನೂಪುರ ಕಲಾ ಟ್ರಸ್ಟ್ ಇವರಿಂದ ಪುಟ್ಟ ಮಕ್ಕಳ ಶಾಸ್ತ್ರೀಯ ನೃತ್ಯ,  ರೇಣುಕಾ ಅಭಿಲಾಷ್ ಪ್ರಕೃತಿ ಕಲಾ ಟ್ರಸ್ಟ್ ಇವರಿಂದ ಸುಗಮ ಸಂಗೀತ, ಚಾರ್ವಿಕ್ ಕಲಾ ಟ್ರಸ್ಟ್ ಕೆ ಬಿ ಶಿವಕುಮಾರ್ ಹಾರ್ಮೋನಿಯಂ ವಿರೂಪಾಕ್ಷಪ್ಪ ದೇವಲಾಪುರ ತಬಲಾ ಇವರಿಂದ ಜುಗಲ್ ಬಂದಿ, ಆದರ್ಶ್ ಮತ್ತು ದಕ್ಷಿಣ ಮೂರ್ತಿ ಎಡಿ ಜೋಡಿ ಇವರಿಂದ ಪ್ರಹಸನ ಮತ್ತು ಮಿಮಿಕ್ರಿ ನಡೆಯಿತು. ಕೊನೆಯಲ್ಲಿ ಎಲ್ಲಾ ಕಲಾವಿದರಿಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಪ್ರತಿ ತಿಂಗಳು ಇಂತಹ ಕಾರ್ಯಕ್ರಮಗಳು ನಡೆಯಬೇಕೆಂದು ಪೋಷಕರು ಅಭಿಪ್ರಾಯ ವ್ಯಕ್ತಪಡಿಸಿದರು.