ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಸಿದ್ಧ
ರಾಯಚೂರು.ಏ.೦೧- ಪ್ರಾದೇಶಿಕ ಅಸಮತೋಲನೆ ನಿವಾರಣೆಗಾಗಿ ಏಮ್ಸ್ ಮಂಜೂರು ಜೊತೆಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗಾಗಿ ಕೆಲಸ ಮಾಡಬೇಕಾಗಿದೆ. ಸಂಸತ್ತಿನಲ್ಲಿ ಮಾತನಾಡುವ ಭಾಷೆಯ ಜೊತೆಗೆ ನನಗೆ ಅಧಿಕಾರದ ಆಡಳಿತ ಭಾಷೆ ಗೊತ್ತಿದೆ. ಇದರಿಂದ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗಾಗಿ ಕೆಲಸ ಮಾಡಲು ಆಸಕ್ತಿಯಿದೆ ನಿಮ್ಮೆಲ್ಲರ ಸಹಕಾರ ಆಶೀರ್ವಾದ ನನ್ನ ಮೇಲಿರಲಿ. ನನ್ನನ್ನು ಸಂಸತ್ತಿಗೆ ಕಳುಹಿಸುವ ಜವಾಬ್ದಾರಿ ನಿಮ್ಮದು ಈ ಭಾಗದ ಸೇವೆ ಮಾಡುವ ಶಕ್ತಿ ನನ್ನಲ್ಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿಯಾದ ಜಿ ಕುಮಾರ್ ನಾಯಕ್ ಅವರು ತಿಳಿಸಿದರು.ರಾಯಚೂರಿನಲ್ಲಿ ಸುಮಾರು ೬೮೯ ದಿನಗಳಿಂದ ಸುಧೀರ್ಘವಾಗಿ ಏಮ್ಸ್ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವದಿ ಹೋರಾಟ ಸ್ಥಳಕ್ಕೆ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾದ ಜಿ ಕುಮಾರ್ ನಾಯಕ್ ಹಾಗೂ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾ ಇಲಾಖೆಯ ಸಚಿವರಾದ ಎನ್‌ಎಸ್ ಬೋಸರಾಜು ಅವರು ಭಾಗವಹಿಸಿ ಮಾತನಾಡಿದರು.ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ಹಿಂದುಳಿದ ಭಾಗವಾದ ಕಲ್ಯಾಣ ಕರ್ನಾಟಕದ ಮಹತ್ವಾಕಾಂಕ್ಷಿ ಜಿಲ್ಲೆಯಾದ ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸಬೇಕೆಂದು ಈಗಾಗಲೇ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮೂರು ಬಾರಿ ಬಹಿರಂಗವಾಗಿ ಕೇಂದ್ರಕ್ಕೆ ಪತ್ರವನ್ನು ಬರೆದಿದ್ದಾರೆ. ಆದರೆ ಕೇಂದ್ರ ಸರ್ಕಾರ ಹುಬ್ಬಳ್ಳಿ ಧಾರವಾಡಕ್ಕೆ ಏಮ್ಸ್ ಮಂಜೂರು ಮಾಡುವಂತೆ ರಾಜ್ಯ ಸರ್ಕಾರ ಪ್ರಸ್ಥಾವನೆ ಪತ್ರ ಬರೆದು ಗೊಂದಲ ಸೃಷ್ಟಿಸಿದೆ ಎಂದು ತಿಳಿಸಿದರು. ಈ ಭಾಗದ ಜನಪ್ರತಿನಿಧಿಗಳ ನಿಯೋಗ ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವರಿಗೆ ಮನವಿ ಜೊತೆಗೆ ಅಗತ್ಯತೆಯ ಕುರಿತು ಮನವರಿಕೆ ಮಾಡಿಕೊಟ್ಟಿದ್ದೇವೆ. ಅಲ್ಲದೆ ನಾನು ಕಲ್ಯಾಣ ಕರ್ನಾಟಕದ ಎಲ್ಲಾ ಸಂಸದರಿಗೂ ಪತ್ರ ಬರೆದು ಮನವಿ ಮಾಡಿದ್ದೇನೆ. ಆದರೆ ಕೇಂದ್ರ ಸರ್ಕಾರ ಗೊಂದಲ ಸೃಷ್ಠಿಸುತ್ತಿದೆ ಎಂದರು.ಪ್ರಾಸ್ತವಿಕವಾಗಿ ಏಮ್ಸ್ ಹೋರಾಟ ಸಮಿತಿಯ ಬಸವರಾಜ ಕಳಸ ಹೋರಾಟದ ಇತಿಹಾಸ ಕುರಿತು ಮಾತನಾಡಿ, ನೀವು ಸಂಸದರಾದರೆ ಏಮ್ಸ್ ಸ್ಥಾಪಿಸಲು ಪ್ರಯತ್ನಿಸಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ಹೋರಾಟಗಾರರಾದ ಅಶೋಕ್ ಕುಮಾರ್ ಜೈನ್, ಎಂ.ಆರ್.ಬೇರಿ, ಅನಿತಾ ಬಸವರಾಜ್, ಬಸವರಾಜ್, ಬಾಬುರಾವ್ ಸೇಗುಣಿಸಿ, ಕಾಂಗ್ರೆಸ್ ಮುಖಂಡರಾದ ಕೆ.ಶಾಂತಪ್ಪ, ಜಿ.ಶಿವಮೂರ್ತಿ, ರುದ್ರಪ್ಪ ಅಂಗಡಿ ತಾಯನಗೌಡ, ಬಸವರಾಜ ಪಾಟೀಲ್ ಅತ್ತನೂರು ಸೇರಿದಂತೆ ಅನೇಕರಿದ್ದರು.