ಸ್ವತಂತ್ರ ನಿವೃತ್ತ ಜೀವನ ನಡೆಸಲು ನಿರ್ಧಾರ; ಬಚ್ಚೇಗೌಡ
ವಿಜಯಪುರ;. ರಾಜಕೀಯ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಾಣುವುದರೊಂದಿಗೆ ಶಾಸಕರಾಗಿ, ಸಚಿವರಾಗಿ, ಸಂಸತ್ ಸದಸ್ಯರಾಗಿ ಕಳೆದ ೫೦ ವರ್ಷಗಳಿಂದ ಸಾಕಷ್ಟು ಸೇವೆ ಸಲ್ಲಿಸಿದ್ದು ಇದೀಗ ತಮಗೆ ೮೨ ವರ್ಷಗಳಾಗಿದ್ದು ಉಳಿದ ಜೀವನವನ್ನು ಸ್ವತಂತ್ರ ಹಾಗೂ ನೆಮ್ಮದಿಯಿಂದ ಕಾಣಲು ಇಚ್ಚಿಸುವುದಾಗಿ ಮಾಜಿ ಸಚಿವ ಬಿಎನ್ ಬಚ್ಚೇಗೌಡ ತಿಳಿಸಿದರು.
ಅವರು ಇಲ್ಲಿನ ತಮ್ಮ ಮನೆ ದೇವರಾದ ಸೌಮ್ಯಕೇಶವ ಸ್ವಾಮಿ ದೇವಾಲಯದಲ್ಲಿ ಸೌಮ್ಯಕೇಶವ ಸ್ವಾಮಿ ಬ್ರಹ್ಮ ರಥೋತ್ಸವದ ನಂತರ ನಡೆಯುವ, ಕಳೆದ ಸುಮಾರು ೧೮೦ ವರ್ಷಗಳಿಂದಲೂ ತಮ್ಮ ಕುಟುಂಬದವರು ನಡೆಸಿಕೊಂಡು ಬರುತ್ತಿರುವ ಪುಷ್ಪ ಪಲ್ಲಕ್ಕಿ ಉತ್ಸವದ ಪೂಜಾ ಕಾರ್ಯಕ್ರಮದಲ್ಲಿ ಪತ್ನಿ ಉಮಾ ಬಚ್ಚೇಗೌಡ ಹಾಗೂ ಕುಟುಂಬ ವರ್ಗದವರೊಂದಿಗೆ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಕಾಂಗ್ರೆಸ್ ಶಾಸಕ, ಪುತ್ರ ಶರತ್ ಬಚ್ಚೇಗೌಡ ರವರ ಬಗ್ಗೆ ಪ್ರಶ್ನಿಸಲಾಗಿ ಶರತ್ ಬಚ್ಚೇಗೌಡ ರವರು ಸ್ವತಂತ್ರವಾಗಿ ನಿರ್ಣಯ ಕೈಗೊಳ್ಳಲು ಹಾಗೂ ಅವರ ರಾಜಕೀಯ ನೀತಿ ಹಾಗೂ ಜೀವನ ರೂಪಿಸಿಕೊಳ್ಳಲು ಅವರು ಸಮರ್ಥರಾಗಿರುವರೆಂದು ಅವರಿಗೆ ತಮ್ಮ ಅವಶ್ಯಕತೆ ಏನು ಕಂಡುಬರುವುದಿಲ್ಲವೆಂದು ತಿಳಿಸಿದರು.
ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗಿದ್ದು, ಇದೇ ಪರಿಸ್ಥಿತಿ ಮುಂದುವರೆದರೆ ಯುವಕರ ಸ್ಥಿತಿ ಏನಾಗಲಿದೆ ಎನ್ನುವ ಕುರಿತು ಆತಂಕವಿದೆ. ೫ ವರ್ಷಗಳಲ್ಲಿ ಕೇಂದ್ರದಿಂದ ಕ್ಷೇತ್ರಕ್ಕೆ ಅನುದಾನಗಳನ್ನು ತರಲು ಸಾಕಷ್ಟು ಶ್ರಮಪಡಬೇಕಾಯಿತು ಎಂದು ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.
೬೨ ಸ್ಥಾನಗಳನ್ನು ತುಂಬುದಕ್ಕಾಗಿ ಅರ್ಜಿ ಆಹ್ವಾನ ಮಾಡಿದರೆ, ೭೦ ಸಾವಿರ ಅರ್ಜಿಗಳು ಸಲ್ಲಿಸುತ್ತಿದ್ದಾರೆ. ಇದರಿಂದ ಎಷ್ಟೊಂದು ಪ್ರಮಾಣದಲ್ಲಿ ನಿರುದ್ಯೋಗವಿದೆ ಎನ್ನುವುದು ಅರ್ಥವಾಗುತ್ತದೆ.
೨೦೧೯ ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದರೂ ಅಲ್ಲಿಂದ ಅನುದಾನಗಳನ್ನು ತರುವುದಕ್ಕಾಗಿ ತುಂಬಾ ಕಷ್ಟವಾಯಿತು. ಆದರೂ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳು ಮಾಡಿದ್ದೆ, ಪ್ರಧಾನಿ ನರೇಂದ್ರಮೋದಿ ಅವರು, ೭೫ ವರ್ಷ ಮೇಲ್ಪಟ್ಟವರಿಗೆ ಹಾಗೂ ಒಂದೇ ಕುಟುಂಬದವರಿಗೆ ಟಿಕೆಟ್ ಕೊಡುವುದಿಲ್ಲವೆಂದು ನಿರ್ಣಯ ಕೈಗೊಂಡಿದ್ದರು. ಈ ಕಾರಣದಿಂದ ನಾನು ರಾಜಕೀಯದಿಂದ ನಿವೃತ್ತಿ ಪಡೆದಿದ್ದೇನೆ. ಮುಂದಿನ ದಿನಗಳಲ್ಲಿ ಯಾವ ಪಕ್ಷದೊಂದಿಗೆ ಕೆಲಸ ಮಾಡುವುದಿಲ್ಲ. ಜೆಡಿಎಸ್-ಬಿಜೆಪಿ ಮೈತ್ರಿಯ ಕುರಿತು ಪ್ರತಿಕ್ರಿಯೆ ನೀಡಲು ಅವರು,ಅದು ಅವರ ಪಕ್ಷಗಳ ಸಿದ್ಧಾಂತಕ್ಕೆ ಸಂಬಂಧಪಟ್ಟ ವಿಚಾರ ಈ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಈಗ ಬಿಜೆಪಿಯಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಡಾ.ಕೆ.ಸುಧಾಕರ್ ಅವರು, ೫ ವರ್ಷಗಳಲ್ಲಿ ಕ್ಷೇತ್ರದಲ್ಲಿ ನಾನು ಮಾಡಿರುವ ಸಾಧನೆಗಳ ಕುರಿತು ಜನರಿಗೆ ಹೇಳುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ. ನನ್ನನ್ನು ಯಾವ ಪಕ್ಷದ ಮುಖಂಡರೂ ಸಂಪರ್ಕ ಮಾಡಿಲ್ಲ. ನಾನು ಯಾರ ಪರವಾಗಿಯೂ ಕೆಲಸ ಮಾಡಲ್ಲ ಎಂದರು.
ಅರ್ಚಕರಾದ ಮುರುಳಿಧರ್ ಭಟ್ಟಾಚಾರ್ಯ, ರಾಜು ಭಟ್ಟಾಚಾರ್ಯ, ಗೋಪಾಲಗೌಡರು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮುನಿಯಪ್ಪ ರಥೋತ್ಸವ ಸಮಿತಿಯ ಮನೋಹರ್, ಚೆನ್ನಪ್ಪ ಮತ್ತಿತರರು ಉಪಸ್ಥಿತರಿದ್ದರು