ಕೆಪಿಎಸ್‍ಸಿ ನೇಮಕಾತಿ ಪಟ್ಟಿ: ಉನ್ನತ ಮಟ್ಟದ ತನಿಖೆಗೆ ಹೆಚ್.ವಿಶ್ವನಾಥ್ ಆಗ್ರಹ
ಸಂಜೆವಾಣಿ ನ್ಯೂಸ್
ಮೈಸೂರು: ಏ.01:- ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‍ಸಿ) ನೇಮಕಾತಿಯ ಪರಿಷ್ಕೃ ಪಟ್ಟಿ ನಾಪತ್ತೆ ಪ್ರಕರಣದಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಭಾಗಿಯಾಗಿರುವ ಸಾಧ್ಯತೆ ಇದ್ದು, ಈ ಕುರಿತು ಉನ್ನತ ಮಟ್ಟದ ತನಿಖೆ ಆಗಬೇಕೆಂದು ವಿಧಾನ ಪರಿಷತ್ ಸದಸ್ಯರಾದ ಹೆಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಎಸ್‍ಸಿ ಮುಖ್ಯಮಂತ್ರಿಗಳ ವ್ಯಾಪ್ತಿಯಲ್ಲಿ ಬರುತ್ತದೆ. ಹೀಗಿದ್ದರೂ 2016ರ ಅಧಿಕಾರಿಗಳ ಆಯ್ಕೆಗೆ ಸಂಬಂಧಿಸಿದ ಪಟ್ಟಿ ನಾಪತ್ತೆಯಾಗಿದೆ ಎಂದು ವಿಧಾನಸೌಧದ ಪೆÇಲೀಸ್ ಠಾಣೆಗೆ ದೂರು ನೀಡಲಾಗಿದೆ. ಪಟ್ಟಿ ಕಂಪ್ಯೂಟರ್‍ನಲ್ಲಿ ಸೇವ್ ಆಗಿರಬಹುದಾಗಿದೆ. ಅದನ್ನು ನೋಡುವ ಬದಲು ಕಳುವಾಗಿದೆ ಎಂದು ದೂರು ನೀಡಿದ್ದು, ಈ ರೀತಿ ಜನರನ್ನು ಮರುಳು ಮಾಡಲು ಯತ್ನಿಸಿರುವುದು ಸರಿಯಲ್ಲ ಎಂದರು.
ಈ ಹಿಂದೆ ಭ್ರಷ್ಟಾಚಾರದ ಮೂಲಕ ಆಯ್ಕೆಯಾಗಿರುವವರೇ ಈ ಕಳವು ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆಯಿದೆ. ಹೀಗಾಗಿ ಈ ಪ್ರಕರಣದ ತನಿಖೆ ಪೆÇಲೀಸರಿಂದ ಸಾಧ್ಯವಿಲ್ಲ. ಆದ್ದರಿಂದಾಗಿ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ, ಪಟ್ಟಿ ಕಳವು ಕುರಿತು ಸಿಎಂ ಮೌನವಾಗಿರುವುದು ಸರಿಯಲ್ಲ. ವಿರೋಧ ಪಕ್ಷಗಳು, ಶಾಸಕರೂ, ಸಂಘ ಸಂಸ್ಥೆಗಳೂ ಮಾತನಾಡದಿರುವುದು ಬೇಸರ ತರಿಸುತ್ತದೆ ಎಂದರು.
ಈ ಬಾರಿಯ ಚುನಾವಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ, ಕೆಲ ದಿನಗಳ ನಂತರ ಈ ಬಗ್ಗೆ ಮಾತನಾಡುವುದಾಗಿ ವಿಶ್ವನಾಥ್ ಉತ್ತರಿಸಿದರು.