ಅನುಭವ ಮಂಟಪ ನಿಜವಾದ ಸಂಸತ್ತು: ಡಾ. ಆಯ್.ಜಿ. ಮ್ಯಾಗೇರಿ
ಸಂಜೆವಾಣಿ ವಾರ್ತೆ,
ವಿಜಯಪುರ,ಏ.1: ಗುರು ಲಿಂಗ ಜಂಗಮ ಸೇವೆಗಳ ಮೂಲಕ ಕಾಯಕದ ಮಹತ್ವವನ್ನು ಸಾರಿದ ಕೀರ್ತಿ 12ನೇ ಶತಮಾನದ ಶರಣರಿಗೆ ಸಲ್ಲುತ್ತದೆ. ಅನುಭವ ಮಂಟಪ 12ನೇ ಶತಮಾನದ ನಿಜವಾದ ಸಂಸತ್ತು ಎಂದು ಜಿಲ್ಲಾ ಕೇಂದ್ರ ಕಾರಾಗೃಹದ ಅಧೀಕ್ಷಕ ಡಾ. ಆಯ್.ಜಿ. ಮ್ಯಾಗೇರಿ ಅಭಿಪ್ರಾಯಪಟ್ಟರು.
ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಹಾಗೂ ನಗರ ಘಟಕ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಡೆದ ದತ್ತಿನಿಧಿ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸತ್ಯ, ಶುದ್ಧ ಕಾಯಕದಿಂದ ಮಾಡಿದ ನಿಜವಾದ ಭಕ್ತಿ ಮಾತ್ರ ಶಿವಲಿಂಗಕ್ಕೆ ಸಲ್ಲುತ್ತದೆ ಎಂದರು.
ದತ್ತಿನಿಧಿ ಕಾರ್ಯಕ್ರಮದ ನಿಮಿತ್ತ ಈರವ್ವ ಮಲ್ಲಪ್ಪ ಹಣಮಶೆಟ್ಟಿ, ದತ್ತಿ ದಾನಿಗಳು, ಎಸ್.ಎಮ್ ಹಣಮಶೆಟ್ಟಿ. “ಕಾಯಕಯೋಗಿ ನುಲಿಯ ಚಂದಯ್ಯ” ನವರ ವಿಷಯದ ಕುರಿತು ಜಯಶ್ರೀ ಹಿರೇಮಠ ಅವರು “ಉಪನ್ಯಾಸ ನೀಡಿ, ವಿಜಯಪುರ ಜಿಲ್ಲೆಯ ಶಿವಣಗಿಯ ಶ್ರೇಷ್ಠ ಕಾಯಕ ಶರಣರಾದ ನುಲಿಯ ಚಂದಯ್ಯನವರ ಕಾಯಕದ ಮಹತ್ವವನ್ನು ಎಲ್ಲರೂ ಅರಿಯಬೇಕು. ಯಾವುದೇ ಕಾಯಕವನ್ನು ಭಾವಶುದ್ಧಿಯಿಂದ, ಅಂತಃಕರಣೆಯ ಮೂಲಕ ಮಾಡಿದಾಗ ಮಾತ್ರ ನಿಜವಾದ ಆತ್ಮದ ಉನ್ನತಿ ಸಾಧ್ಯವಾಗುತ್ತದೆ. ನಾವು ಮಾಡಿದ ಕಾಯಕಕ್ಕೆ ಪ್ರತಿಯಾಗಿ ಹೆಚ್ಚಿನದನ್ನು ಅಪೇಕ್ಷಿಸಬಾರದು ಎಂಬುದನ್ನು ಅನೇಕ ನಿದರ್ಶನಗಳ ಮೂಲಕ ವಿವರಿಸಿದರು.
ಉಪನ್ಯಾಸ ಎರಡರ ದತ್ತಿ ದಿ. ಕಾಶೀನಾಥ ಸಿದ್ಧಮಲ್ಲಪ್ಪ ಇಂಗಳೇಶ್ವರ ದತ್ತಿ ದಾನಿಗಳು ಎಸ್.ಕೆ ಇಂಗಳೇಶ್ವರ. ಯಡಿಯೂರು ಸಿದ್ಧಲಿಂಗೇಶ್ವರರ ವಿಷಯದ ಕುರಿತು ಉಪನ್ಯಾಸ ನೀಡಿದ, ಕವಿಯಿತ್ರಿ ಸುಜಾತಾ ಹ್ಯಾಳದ ಅವರು ಉಪನ್ಯಾಸ ನೀಡಿ, 16ನೇ ಶತಮಾನದಲ್ಲಿ ಆಗಿ ಹೋದ ಕನ್ನಡ ನಾಡು ಕಂಡ ಅನುಭಾವಿ ಸಂತ ಶರಣರಲ್ಲಿ ಎಡೆಯೂರಿನ ಶ್ರೀ ಸಿದ್ಧಲಿಂಗೇಶ್ವರರು ಒಬ್ಬ ಶ್ರೇಷ್ಠ ಪವಾಡ ಪುರುಷರಾಗಿದ್ದರು. ಸಿದ್ಧಲಿಂಗೇಶ್ವರರು ಚೆನ್ನಬಸವೇಶ್ವರ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಲೋಕ ಸಂಚಾರ ಮಾಡುತ್ತಾ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ, ಪಶ್ಚಿಮ ಘಟ್ಟಗಳಿಂದ ಅರುಣಾಚಲ ಪ್ರದೇಶದ ವರೆಗೆ ಇಡೀ ಭಾರತವನ್ನು ಸಂಚಾರ ಮಾಡಿ ಶಿವಯೋಗ, ಶಿವಭಕ್ತಿಯನ್ನು ಪ್ರಸಾರ ಮಾಡುವ ಮೂಲಕ ಸಿದ್ಧಲಿಂಗೇಶ್ವರರ ಅನೇಕ ಸಂದೇಶಗಳನ್ನು ಉಪನ್ಯಾಸದಲ್ಲಿ ತಿಳಿಸಿಕೊಟ್ಟರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ರಾಂತ ಮುಖ್ಯಾಧ್ಯಾಪಕ ಶಾರದಾ ಐಹೊಳ್ಳಿ ಅವರು, ಕಾಯಕಯೋಗಿ ನುಲಿಯ ಚಂದಯ್ಯನವರ ಹಾಗೂ ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ ಜೀವನದ ಸಂದೇಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸ್ವತಃ ಗಳಿಸಿದ ಹಣದಿಂದ ಮಾತ್ರ ದಾಸೋಹ ಮಾಡಿದಾಗ ಅದು ಭಗವಂತನ ಪಾದಕ್ಕೆ ಸಮರ್ಪಿತವಾಗಲು ಸಾಧ್ಯವೆಂದರು. ಕಾರ್ಯಕ್ರಮದಲ್ಲಿ ಕುಮಾರಿ ಅನುಶ್ರೀ ಹಾಗೂ ಶ್ರೀನಿಧಿ ಬಂಡೆಯವರು ಮಾರ್ಮಿಕವಾಗಿ ವಚನ ಗಾಯನ ಮಾಡುವ ಮೂಲಕ ಗಮನ ಸೆಳೆದರು.
ಪೂಜ್ಯ ಶ್ರೀ.ಮ.ನಿ.ಪ್ರ ವಿರತೀಶಾನಂದ ಸ್ವಾಮೀಜಿಯವರು ಸಾನ್ನಿಧ್ಯ ವಹಿಸಿ ಮಾತನಾಡಿ, “ಲಿಂಗದ ಬಾಯಿ ಜಂಗಮವೆಂದು, ಹಿರಿದಾದ ಒಂದು ಮರಕ್ಕೆ ಮೂಲ ಆ ಮರದ ಬೇರು ಎನ್ನುತ್ತಾ, ವಚನ ಸಾಹಿತ್ಯ ಇಡೀ ವಿಶ್ವಕ್ಕೆ ಮಾದರಿಯಾದ ಸಾಹಿತ್ಯವಾಗಿದೆ ಎಂದರು.
ಡಾ. ವ್ಹಿ.ಡಿ. ಐಹೊಳ್ಳಿ, ಶಶಿಕಲಾ ನಾಯ್ಕೋಡಿ, ಪ್ರಭು ಅಳ್ಳಗಿ, ಜಿಲ್ಲಾ ದತ್ತಿ ಸಂಚಾಲಕ ರಾಜೇಸಾಬ ಶಿವನಗುತ್ತಿ ಮುಖ್ಯ ಅತಿಥಿಗಳಾಗಿ ವೇದಿಕೆ ಮೇಲಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಸಾಹಿತಿಗಳಾದ ಶಂಕರ ಬೈಚಬಾಳ, ಸಿದ್ದಾರಾಮ ಬಿರಾದಾರ, ವಿದ್ಯಾವತಿ ಅಂಕಲಗಿ, ಅನ್ನಪೂರ್ಣ ಬೆಳ್ಳೆಣ್ಣವರ, ವಿಜಯಲಕ್ಷ್ಮಿ ಹಳಕಟ್ಟಿ, ಕಮಲಾ ಮುರಾಳ, ಜಿ.ಎಸ್ ಬಳ್ಳೂರ, ಶ್ರೀಶೈಲ ಬಿರಾದಾರ, ಸಂತೋಷಕುಮಾರ ಬಂಡೆ, ಅಹ್ಮದ ವಾಲೀಕಾರ, ಅನಸೂಯ ಮಜಗಿ, ಗಂಗಮ್ಮ ರಡ್ಡಿ, ಬಿ.ವಿ. ಪಟ್ಟಣಶೆಟ್ಟಿ, ಯುವರಾಜ್ ಚೋಳಕೆ, ಎ.ಎಚ್ ಕಜರಗಿ, ಅಲ್ತಾಫ್ ಮದಭಾವಿ ಹಾಜರಿದ್ದರು.
ಕಸಾಪ ಗೌರವ ಕಾರ್ಯದರ್ಶಿ ಸುಭಾಸ ಕನ್ನೂರ ಸ್ವಾಗತಿಸಿದರು. ಡಾ. ಮಾಧವ ಎಚ್ ಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಶೋಭಾ ಬಡಿಗೇರ ವಂದಿಸಿದರು.