ದೇಶಕ್ಕಾಗಿ ಪ್ರಧಾನಿ, ಕಾವೇರಿಗಾಗಿ ಕುಮಾರಸ್ವಾಮಿ ಹೇಳಿಕೆ ಹಾಸ್ಯಾಸ್ಪದ
ಸಂಜೆವಾಣಿ ನ್ಯೂಸ್
ಮೈಸೂರು: ಏ.01:- ಜೆಡಿಎಸ್‍ನವರು ದೇಶಕ್ಕಾಗಿ ಮೋದಿ ಪ್ರಧಾನಿ, ಕಾವೇರಿಗಾಗಿ ಎಚ್.ಡಿ. ಕುಮಾರಸ್ವಾಮಿ ಎಂದು ಹೇಳಿರುವುದು ನಗೆಪಾಟಲಿನ ವಿಷಯವಾಗಿದೆ. ಈ ಹಿಂದೆ ಎಚ್.ಡಿ. ದೇವೇಗೌಡರೇ ಪ್ರಧಾನಿಯಾಗಿದ್ದ ವೇಳೆ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಶಾಶ್ವತ ಪರಿಹಾರ ಕಂಡು ಹಿಡಿಯಲಿಲ್ಲ. ಚುನಾವಣೆ ವೇಳೆ ಬಳಸಿಕೊಳ್ಳಲು ವಿವಾದವನ್ನು ಹಾಗೆಯೇ ಉಳಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರರಾದ ಎಚ್.ಎ. ವೆಂಕಟೇಶ್ ಆರೋಪಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ನಗರ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಚುನಾವಣೆ ನಂತರವೂ ಮುಂದುವರಿಯುತ್ತದೆ ಎಂದು ಮಾಜಿ ಪ್ರಧಾನ ಹೇಳಿದ್ದಾರೆ. ಆದರೆ ಅದು ಮೈತ್ರಿಯೋ ಅಥವಾ ವಿಲೀನವೋ ಎಂಬ ಅನುಮಾನ ಅವರ ಪಕ್ಷದವರಲ್ಲೇ ಇದೆ ಎಂದು ಲೇವಡಿ ಮಾಡಿದರು. ಬಿಜೆಪಿ ಮಾರ್ಗದರ್ಶಿ ಹಾಗೂ ಪ್ರಧಾನಿ ಮೋದಿ ಅವರ ಕಟ್ಟಾ ಅಭಿಮಾನಿಯಾಗಿರುವ ಹಿರಿಯ ಸಾಹಿತಿ ಪೆÇ್ರ.ಎಸ್.ಎಲ್. ಭೈರಪ್ಪ ಅವರು ಈ ಬಾರಿ ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸದು ಎಂದು ಹೇಳಿರುವುದನ್ನು ನಾವು ಸ್ವಾಗತಿಸುತ್ತೇವೆ. ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ನಗರಕ್ಕೆ ಬಂದು ಭಾಷಣ ಮಾಡಿ ಹೋಗುವ ವೇಳೆ ತಮ್ಮಲ್ಲಿ ಹಣ ಇರದ ಕಾರಣ ಈ ಬಾರಿ ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದಾರೆ. ಈ ಹೇಳಿಕೆ ಮಹತ್ವದ್ದಾಗಿದೆ. ಇದರಿಂದಾಗಿ ಹಣ ಇರುವವರಿಗೇ ಬಿಜೆಪಿಯಲ್ಲಿ ಚುನಾವಣೆ ಸಾಧ್ಯ ಎಂಬಂತಾಗಿದೆ. ಇದಲ್ಲದೆ ತಾವು ಜನಪ್ರಿಯತೆ ಕಳೆದುಕೊಂಡಿದ್ದೇವೆ ಎಂಬ ಭಯ ಸೃಷ್ಟಿಯಾಗಿದೆ ಎಂದರು.
ಈ ಮೊದಲು ಬಿಜೆಪಿಯವರು ನಮ್ಮ ಐದು ಗ್ಯಾರಂಟಿಗಳನ್ನು ಟೀಕಿಸುತ್ತಿದ್ದರು. ಇದನ್ನು ನಾವು ಪಕ್ಷದ ಯಾವುದೇ ಮುಖಂಡರ ಗ್ಯಾರಂಟಿ ಎಂದಿರಲಿಲ್ಲ. ಬದಲಾಗಿ ಕಾಂಗ್ರೆಸ್ ಗ್ಯಾರಂಟಿ ಎಂದಿದ್ದೆವು. ಆದರೆ ಈಗ ಬಿಜೆಪಿಯವರು ತಮ್ಮದನ್ನು ಮೋದಿ ಗ್ಯಾರಂಟಿ ಎಂದಿದ್ದಾರೆ. ಅಂದರೆ ಆ ಪಕ್ಷ ತಮ್ಮ ಪಕ್ಷದ ಗ್ಯಾರಂಟಿ ಎಂದು ಹೇಳಿಕೊಳ್ಳುವ ಧೈರ್ಯವಿಲ್ಲದ ದುರ್ಬಲ ಪಕ್ಷವಾಗಿದೆ ಎಂದು ವ್ಯಂಗ್ಯವಾಡಿದರು.
ಏಪ್ರಿಲ್ ಮೂರರಂದು ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ ಈ ಭೇಟಿ ಈ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪಂಚ ಗ್ಯಾರೆಂಟಿಗಳ ಎದುರು ಬಿಜೆಪಿ ಸೋಲುತ್ತಿದೆ. ಕಾಂಗ್ರೆಸ್ ಪ್ರಚಾರ ಆರಂಭಿಸಿದ್ದು, ನಮ್ಮ ಪರವಾಗಿ ಉತ್ತಮ ವಾತಾವರಣವಿದೆ. ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದರು.
ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಜೈಲಿಗೆ ಹೋಗಬೇಕಾಗುತ್ತದೆ ಎಂಬ ವಿರೋಧ ಪಕ್ಷದ ನಾಯಕ ಅಶೋಕ ಅವರ ಹೇಳಿಕೆ ಆಕ್ಷೇಪಾರ್ಹವಾದುದಾಗಿದೆ. ಈ ಬಗ್ಗೆ ಅಶೋಕ್ ಕ್ಷಮೆ ಕೇಳದಿದ್ದರೆ ಅವರ ಕಾರ್ಯಕ್ರಮಗಳ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ನಗರಾಧ್ಯಕ್ಷ ಆರ್. ಮೂರ್ತಿ, ಬಿ.ಕೆ. ಪ್ರಕಾಶ್, ಶಿವನಾಗಪ್ಪ, ಲೋಕೇಶ್, ಗೋಪಿನಾಥ್, ಭಾಸ್ಕರ್ ಉಪಸ್ಥಿತರಿದ್ದರು.