ಅಧಿಕಾರಿಗಳು ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಬೇಕು: ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ
ಕಲಬುರಗಿ:ಮಾ.31:ನ್ಯಾಯಾಂಗ, ಕಾನೂನು ಸೇವಾ ಪ್ರಾಧಿಕಾರ ಹಾಗೂ ಲೋಕಾಯುಕ್ತ ಸಂಸ್ಥೆಗಳು ಕಾವಲು ನಾಯಿಯಂತೆ ಕಾರ್ಯನಿರ್ವಹಿಸಿದಲ್ಲಿ ಮಾತ್ರ ಜನತೆಗೆ ಉತ್ತಮ ಸಾರ್ವಜನಿಕ ಆಡಳಿತ ನೀಡಲು ಸಾಧ್ಯವಾಗುತ್ತದೆ ಎಂದು ರಾಜ್ಯದ ಗೌರವಾನ್ವಿತ ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಅವರು ಅಭಿಪ್ರಾಯಪಟ್ಟರು.
ರವಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಉತ್ತಮ ಸಾರ್ವಜನಿಕ ಆಡಳಿತದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಪಾತ್ರ ಕುರಿತ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ ಅವರು, ಸಾರ್ವಜನಿಕ ಅಭಿವೃದ್ಧಿ ಕೆಲಸಗಳು ಸರಿಯಾಗಿ ಅನುಷ್ಠಾನವಾಗುತ್ತವೆಯೇ ಎಂಬ ಬಗ್ಗೆ ನಿಗಾ ಇಡಬೇಕು ಎಂದರು.
ಕರ್ನಾಟಕದಲ್ಲಿ 7 ಕೋಟಿ ಜನರಿದ್ದು, ಇದರಲ್ಲಿ 5 ಲಕ್ಷ ಮಂದಿ ಸರ್ಕಾರಿ ನೌಕರರಿದ್ದಾರೆ. ಇದು ಒಟ್ಟು ಜನಸಂಖ್ಯೆಯಲ್ಲಿ ಶೇಕಡ 1 ರಷ್ಟು ಮಾತ್ರ. ಈ ನೌಕರÀರಿಂದ ರಾಜ್ಯದ ಜನತೆಯ ಮಾನ-ಪ್ರಾಣ ಅಡಗಿದೆ. ಆದ್ದರಿಂದ ಸರ್ಕಾರಿ ನೌಕರರು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಅವರು ಒತ್ತಿ ಹೇಳಿದರು.
ಸಂತ್ರಸ್ತ ಅಥವಾ ಫಲಾನುಭವಿಗೆ ಸರ್ಕಾರದಿಂದ ಸೂಕ್ತ ಸಮಯದಲ್ಲಿ ಪರಿಹಾರ ನೀಡಬೇಕಾಗುತ್ತದೆ. ಇಲ್ಲದಿದ್ದರೆ ಪರಿಹಾರ ಸಿಗದಿದ್ದರಿಂದ ನೊಂದ ಜನರು ಕೆಟ್ಟ ಮಾರ್ಗ ತುಳಿಯುವ ಮೂಲಕ ಸಾಮಾಜಿಕ ಪಿಡುಗಾಗಿ ಪರಿಣಮಿಸುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದರು.
ಸ್ವಜನ ಪಕ್ಷಪಾತ, ಕರ್ತವ್ಯ ಲೋಪ. ಪ್ರಭಾವ ಬೀರುವಿಕೆ, ಸಮಯಕ್ಕೆ ಮತ್ತು ಸಂದರ್ಭೋಚಿತವಾಗಿ ಕೆಲಸ ಮಾಡದಿರುವುದು ಇವೆಲ್ಲಾ ಭ್ರಷ್ಟಾಚಾರವನ್ನು ತೋರಿಸುತ್ತದೆ ಎಂದು ಹೇಳಿದರು.
ಪ್ರಜೆಯಾಗಿ ದೇಶಕ್ಕೆ ಏನೂ ಕೊಡುಗೆ ನೀಡದಿದ್ದರೂ ಪರವಾಗಿಲ್ಲ. ಪ್ರಾಮಾಣಿಕತೆ ನೀಡಬೇಕು ಎಂಬ ಸಂತ ಸ್ವಾಮಿ ವಿವೇಕಾನಂದ ಅವರ ವಾಣಿಯನ್ನು ಉಲ್ಲೇಖಿಸಿದ ಅವರು, ಸರ್ಕಾರಿ ಅಧಿಕಾರಿಗಳು ಸಹ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಬೇಕು ನೀತಿಪಾಠ ಹೇಳಿದರು.
ಕಾನೂನು ಸೇವಾ ಪ್ರಾಧಿಕಾರದ ಮೂಲಕ ಹಳ್ಳಿ-ಹಳ್ಳಿಗಳಲ್ಲಿ ಕಾನೂನು ಶಿಬಿರ ಏರ್ಪಡಿಸಿದಾಗ ಲೋಕಾಯುಕ್ತ ಸಂಸ್ಥೆ ಬಗ್ಗೆ ಅರಿವು ಮೂಡಿಸಬೇಕು. ಯಾವ-ಯಾವ ದೂರಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದರು.
ಕೆಲವೊಂದು ದೂರುಗಳು ಕಾನೂನು ಸೇವಾ ಪ್ರಾಧಿಕಾರಕ್ಕೆ ಬರಬೇಕಾಗಿದ್ದು ಲೋಕಾಯುಕ್ತಕ್ಕೆ ಬರುತ್ತವೆ. ಲೋಕಾಯುಕ್ತಕ್ಕೆ ಬರಬೇಕಾಗಿದ್ದ ದೂರುಗಳು ಕಾನೂನು ಸೇವಾ ಪ್ರಾಧಿಕಾರಕ್ಕೆ ಬರುತ್ತವೆ. ಇವುಗಳನ್ನು ವಿನಿಮಯ ಮಾಡಿಕೊಂಡು ಮುಂದಿನ ಕ್ರಮ/ಇತ್ಯರ್ಥಕ್ಕೆ ಒತ್ತು ನೀಡಬೇಕಾಗಿದೆ ಎಂದು ಸಲಹೆ ನೀಡಿದರು.
ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶರು ಹಾಗೂ ಕಲಬುರಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ನಾಗಶ್ರೀ ಅಧ್ಯಕ್ಷತೆ ವಹಿಸಿ ಮಾತನಾಡಿ, ಭ್ರಷ್ಟಾಚಾರ ಎಂಬುವುದು ಒಂದು ಸಾಮಾಜಿಕ ಪಿಡುಗಾಗಿದೆ. ಇವತ್ತಿನ ದಿನಗಳಲ್ಲಿ ಯಾರ್ಯಾರು ಭ್ರಷ್ಟರು ಎಂಬುದು ಕಂಡು ಹಿಡಿಯುವುದೇ ಕಷ್ಟವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಮನುಷ್ಯನ ಅಸೆಗೆ ಕೊನೆಯಿಲ್ಲ. ಮನುಷ್ಯನಿಗೆ ಇರುವ ಅತಿಯಾಸೆಯೇ ಅವನನ್ನು ಭ್ರಷ್ಟಾಚಾರಕ್ಕೆ ಈಡು ಮಾಡುತ್ತದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಪ್ರತಿಪಾದಿಸಿದರು.
ಗೌರವಾನ್ವಿತ ಪ್ರಧಾನ ಜಿಲ್ಲಾ ಕೌಟುಂಬಿಕ ನ್ಯಾಯಾಧೀಶರಾದ ಶ್ರೀಮತಿ ಹೇಮಾವತಿ, ಗೌರವಾನ್ವಿತ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮೊಹನ ಬಾಡಗಂಡಿ, ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಜಾನ್ ಆಂಟೋನಿ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ನ್ಯಾಯಾಧೀಶರು ಹಾಜÀರಿದ್ದರು. ಕಲಬುರಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಲಬುರಗಿ ಸದಸ್ಯ ಕಾರ್ಯದರ್ಶಿಗಳಾದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀನಿವಾಸ ನವಲೆ ಅವರು ಕಾರ್ಯಕ್ರಮ ನಿರೂಪಿಸಿದರು.