ತಾಯಿ ಕಂಡು ನಟ ದರ್ಶನ್ ಭಾವುಕ
ಬಳ್ಳಾರಿ,ಸೆ.೧೯- ನಗರದ ಸೆಂಟ್ರಲ್ ಜೈಲಿನಲ್ಲಿರುವ ದರ್ಶನ್ ತೂಗುದೀಪ ಅವರನ್ನು ತಾಯಿ ಮೀನಾ ತೂಗುದೀಪ ಅವರು ಇಂದು ಭೇಟಿ ಮಾಡಿದರು.
ತಾಯಿ ಮೀನಾ ಅವರನ್ನು ಕಂಡ ನಟ ದರ್ಶನ್ ಭಾವುಕರಾಗಿ ಸಂತಸಗೊಂಡಿದ್ದಾರೆ.
ಬಳ್ಳಾರಿ ಜೈಲಿಗೆ ನಟ ದರ್ಶನ್ ಸ್ಥಳಾಂತರವಾದ ಬಳಿಕ ಮೊದಲ ಬಾರಿಗೆ ಅವರನ್ನು ನೋಡಲು ತಾಯಿ, ಅಕ್ಕ ಬಂದಿದ್ದರು. ಈವರೆಗೂ ನಾಲ್ಕು ಬಾರಿ ಪತ್ನಿ ವಿಜಯಲಕ್ಷ್ಮಿ, ಇತ್ತೀಚಿಗೆ ನಟ ಧನ್ವೀರ್, ಆಪ್ತ ಹೇಮಂತ್ ಭೇಟಿ ನೀಡಿದ್ದರು.
ತಾಯಿ, ಅಕ್ಕ, ಭಾವ ಅಕ್ಕನ ಮಕ್ಕಳು ಸೇರಿ ಕುಟುಂಬ ಬಂದಿರುವುದನ್ನು ಕಂಡ ದರ್ಶನ್ ಕೆಲ ಕಾಲ ಭಾವುಕರಾದರು. ಬಳಿಕ ಪರಸ್ಪರ ಆರೋಗ್ಯ ವಿಚಾರಿಸಿದರು. ತಾಯಿಗಾಗಿ ನಿತ್ಯ ಜೈಲಿನಲ್ಲಿ ಕನವರಿಸುತ್ತಿದ್ದ ದರ್ಶನ್‌ಗೆ ತಾಯಿಯನ್ನು ಕಂಡು ಸಂತಸಗೊಂಡರು. ಈ ವೇಳೆ ತಾಯಿ ತಂದಿದ್ದ ಬೇಕರಿ ತಿನಿಸುಗಳು, ಮನೆಯಿಂದ ಮಾಡಿಕೊಂಡು ಬಂದಿದ್ದ ತಿನಿಸುಗಳು, ಹಣ್ಣುಗಳನ್ನು ನಟ ದರ್ಶನ್‌ಗೆ ಕೊಡಲಾಯಿತು.
ಹಲವು ದಿನಗಳ ಬೇಡಿಕೆ ಬಳಿಕ ನಟ ದರ್ಶನ್ ಸೆಲ್‌ಗೆ ಟಿವಿ ಸೌಲಭ್ಯವನ್ನು ಜೈಲಿನ ಅಧಿಕಾರಿಗಳು ಒದಗಿಸಿದ್ದರು. ಆದರೆ, ದೂರದರ್ಶನ ವಾಹಿನಿಯನ್ನು ಮಾತ್ರ ನೋಡಲು ಅನುಮತಿ ನೀಡಲಾಗಿತ್ತು.
ಇನ್ನೊಂದೆಡೆ ನಟನಿಂದ ಇತರೆ ಸೌಲಭ್ಯಕ್ಕೆ ಬೇಡಿಕೆ ಹೆಚ್ಚಾಗಿದ್ದು, ಮೆತ್ತನೆಯ ತಲೆ ದಿಂಬು, ಕುರ್ಚಿಯನ್ನು ಕೇಳಿದ್ದಾರೆ.ಬಳ್ಳಾರಿ ಜೈಲಿಗೆ ಬಂದ ೩ ವಾರನಟ ದರ್ಶನ್ ಅವರು ಬಳ್ಳಾರಿ ಜೈಲಿಗೆ ಆಗಮಿಸಿ ಮೂರು ವಾರಗಳು ಪೂರ್ಣಗೊಂಡಿವೆ. ಆಗಸ್ಟ್ ೨೯ ಕ್ಕೆ ಬೆಂಗಳೂರಿನಿಂದ ಬಳ್ಳಾರಿ ಕೇಂದ್ರೀಯಾ ಕಾರಗೃಹಕ್ಕೆ ಸ್ಥಳಾಂತರ ಮಾಡಲಾಗಿತ್ತು. ಇನ್ನು ಕೋರ್ಟ್ ವಿಚಾರಣೆ ಪೂರ್ಣಗೊಳ್ಳುವ ತನಕ ನಟ ಅದೇ ಜೈಲಿನಲ್ಲಿ ಇರಬೇಕಿದೆ.