ಪ್ರವಾಸೋದ್ಯಮ ದಿನ ಆಚರಣೆಗೆ ಅಗತ್ಯ ಸಿದ್ಧತೆ
ಸಂಜೆವಾಣಿ ನ್ಯೂಸ್
ಮೈಸೂರು.ಸೆ.19:- ಪ್ರವಾಸೋದ್ಯಮ ಮತ್ತು ಶಾಂತಿ ಎಂಬ ಧ್ಯೇಯ ವಾಕ್ಯದೊಂದಿಗೆ ಸೆ.27ರಂದು ಬೆಳಗ್ಗೆ 10 ಗಂಟೆಗೆ ಮೈಸೂರು ಅರಮನೆಯ ಆವರಣದಲ್ಲಿ ವಿಶ್ವ ಪ್ರವಾಸೋದ್ಯಮ ದಿನವನ್ನು ಸಂಭ್ರಮದಿಂದ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ ತಿಳಿಸಿದರು.
ಪ್ರವಾಸೋದ್ಯಮ ಇಲಾಖೆಯ ಸಭಾಂಗಣದಲ್ಲಿ ನಡೆದ, ವಿಶ್ವ ಪ್ರವಾಸೋದ್ಯಮ ದಿನಾಚರಣಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಂತಿ ಹಾಗೂ ಭದ್ರತೆ ಇರುವಂತಹ ರಾಷ್ಟ್ರಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹಾಗಾಗಿ ಸರ್ವಧರ್ಮದ ಜನರನ್ನು ಒಳಗೊಂಡು ಅಂದು ಕಾರ್ಯಕ್ರಮದಲ್ಲಿ ಮೆರವಣಿಗೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಉದ್ಘಾಟನೆಯ ನಂತರ ಅರಮನೆಯಿಂದ ಹೈವೆ ಸರ್ಕಲ್‍ವರೆಗೆ ಮೆರವಣಿಗೆ ಏರ್ಪಡಿಸಲಾಗಿದ್ದು, ಇದರಲ್ಲಿ ಗಜಪಡೆ, ಪೆÇಲೀಸ್ ಬ್ಯಾಂಡ್, ನಾದಸ್ವರ, ಡೊಳ್ಳುಕುಣಿತ, ಕಂಸಾಳೆ, ವೀರಗಾಸೆ, ಕೊಡವ ನೃತ್ಯ, ಟಿಬೇಟಿಯನ್ ನೃತ್ಯ ಹಾಗೂ ಕೇರಳ ಚೆಂಡೆ ಸೇರಿದಂತೆ ಇನ್ನಿತರ ಕಲಾತಂಡಗಳ ಪ್ರದರ್ಶನದ ಮೂಲಕ ಪ್ರವಾಸಿಗರ ಗಮನ ಸೆಳೆಯುವಂತಹ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಮೆರವಣಿಗೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಅಧಿಕಾರಿಗಳು, ಸಂಘ-ಸಂಸ್ಥೆಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಶಾಂತಿಯ ಸಂಕೇತವಾದ ಬಿಳಿ ವಸ್ತ್ರವನ್ನು ಧರಿಸಬೇಕು. ಮೆರವಣಿಗೆಯಲ್ಲಿ ಭಾಗವಹಿಸುವ ಕಲಾತಂಡಗಳು ಹಾಗೂ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮತ್ತು ಭಾಗವಹಿಸುವ ಪ್ರತಿಯೊಬ್ಬರಿಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರವಾಸೋದ್ಯಮ ಇಲಾಖೆಯ ಅಧಿಕೃತ ವೆಬ್‍ಸೈಟ್ ಅನ್ನು ಮಾನ್ಯ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪನವರು ಅನಾವರಣಗೊಳಿಸಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅರಮನೆ ಮಂಡಳಿಯ ಉಪ ನಿರ್ದೇಶಕ ಸುಬ್ರಮಣ್ಯ, ಕರ್ನಾಟಕ ದಸರಾ ವಸ್ತುಪ್ರದರ್ಶನದ ಕಾರ್ಯನಿರ್ವಹಣಾಧಿಕಾರಿ ರುದ್ರೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ್ರಭುಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಮೈಸೂರು ಟ್ರಾವಲ್ಸ್ ಅಸೋಸಿಯೇಶನ್‍ನ ಅಧ್ಯಕ್ಷ ಜಯಪ್ರಕಾಶ್ ರಾಜೇ ಅರಸ್, ಸ್ಕಾಲ್ ಇಂಟರ್‍ನ್ಯಾಷನಲ್ ಮೈಸೂರು ವಿಭಾಗದ ಅಧ್ಯಕ್ಷ ಬಿ.ಎಸ್.ಪ್ರಶಾಂತ್, ಟೂರಿಸ್ಟ್ ಗೈಡ್ಸ್ ಅಸೋಸಿಯೇಶನ್‍ನ ಅಧ್ಯಕ್ಷ ಎಸ್.ಜೆ.ಅಶೋಕ್, ಚಾಲಕರ ಸಂಘದ ಅಧ್ಯಕ್ಷರಾದ ನಾಗರಾಜು, ಡಿ.ದೇವರಾಜು ಅರಸು ರಸ್ತೆ ಅಂಗಡಿ ಮಾಲೀಕರ ಹಾಗೂ ಬಾಡಿಗೆದಾರರು ಸಂಘದ ಅಧ್ಯಕ್ಷ ಪ್ರಕಾಶ್.ಕೆ.ಜಿ, ಹೋಟೆಲ್ ಜೇಡ್ ಗಾರ್ಡ್‍ನ್ ಭರತ್ ಗೌಡ, ಅರೋಹಿ ಹೋಟೆಲ್‍ನ ಸಮರ್ಥ್ ವೈದ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.