ಸಮಕಾಲೀನ ಮಹಿಳಾ ಸಮಸ್ಯೆಗಳ ಕುರಿತು ಹಂಪಿ ವಿವಿಯಲ್ಲಿ ವಿಶೇಷ ಉಪನ್ಯಾಸಮಹಿಳೆಗೂ ಸಮಾನ ಒಡೆತನ ಅವಶ್ಯಕ : ಡಾ. ಲಕ್ಷ್ಮೀದೇವಿ ವೈ
ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ31: ದೇಶದ ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆಯು ಶೇ.48 ಇದ್ದರೂ ಅವರು ಭೂ ಒಡೆತನ ಹೊಂದಿರುವುದು ಕೇವಲ ಶೇ.13 ರಷ್ಟು ಮಾತ್ರ. ಇದು ಅವಳನ್ನು ಮತ್ತು ಅವಳ ಕಾರ್ಯವನ್ನು ಪರಿಗಣಿಸದೇ ನಕಾರಾತ್ಮಕವಾಗಿ ಬಿಂಬಿಸುವ ಕಾರ್ಯ ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ಲಕ್ಷ್ಮೀದೇವಿ ವೈ. ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗ ಮತ್ತು ಅಲ್ಲಂ ಸುಮಂಗಲಮ್ಮ ದತ್ತಿ ನಿಧಿ ಹಾಗೂ ಯುಜಿಸಿ ಪ್ರಾಯೋಜಿತ ಮಹಿಳಾ ಅಧ್ಯಯನ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಡಾ. ರಾಜಕುಮಾರ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಕಾಲೀನ ಮಹಿಳಾ ಸಮಸ್ಯೆಗಳು ಎಂಬ ವಿಷಯದ ಕುರಿತ ವಿಶೇಷ ಉಪನ್ಯಾಸ  ಉದ್ಘಾಟಿಸಿ ಅವರು ಮಾತನಾಡಿದರು, ಸರ್ಕಾರಿ ವಲಯದಲ್ಲಿ ಮಹಿಳೆಯರಿಗೆ ಸಮಾನ ಕೆಲಸಕ್ಕೆ ವೇತನ ದೊರೆತರೂ, ಅತಿಹೆಚ್ಚು ಮಹಿಳೆಯರು ಭಾಗವಹಿಸುವ ಖಾಸಗಿ ಕ್ಷೇತ್ರದಲ್ಲಿ ವೇತನದ ಅಸಮಾನತೆಯನ್ನು ಕಾಣಬಹುದಾಗಿದೆ. ಮಹಿಳೆಯು ಸ್ವಾವಲಂಬಿಯಾಗಲು ಉದ್ಯಮಶೀಲತೆಯಲ್ಲಿ ತೊಡಗಿಸಿಕೊಳ್ಳಬೇಕು. ಇದಕ್ಕೆ ಮಹಿಳೆಯರಿಗೆ ಪರಿಪೂರ್ಣ ಕೌಶಲ್ಯದ ಅಗತ್ಯವಿದೆ. ಮಹಿಳೆಯರಿಗೆ ಉದ್ಯೋಗವಕಾಶಗಳ ಮಾಹಿತಿ ಮತ್ತು ಅದಕ್ಕೆ ಸಂಬಂಧಪಟ್ಟ ಕೌಶಲ್ಯಗಳನ್ನು ಕಲಿಸುವುದರ ಮೂಲಕ ಸಬಲೀಕರಣಗೊಳಿಸಲು ಸಾಧ್ಯ ಎಂದರು. ಮಹಿಳೆ ಬಾಲ್ಯವಿವಾಹ, ಒತ್ತಾಯದ ಮದುವೆ,  ಭ್ರೂಣ ಹತ್ಯೆ, ವಿವಾಹ ವಿಚ್ಛೇದನ, ಒತ್ತಾಯದ ಗರ್ಭಪಾತದಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆ. ಇದು ಆತಂಕಕಾರಿಯಾದ ವಿಷಯ ಮತ್ತು ಸಮಾಜವೂ ಚರ್ಚಿಸಬೇಕಾದ ಗಂಭೀರ ವಿಷಯವೂ ಆಗಿದೆ.
ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬಂಡ ಅಧ್ಯಕ್ಷತೆವಹಿಸಿ ಮಾತಾನಾಡುತ್ತ ಮಹಿಳೆಯರ ಸಮಸ್ಯೆಗಳು ಇಂದಿಗೂ ಪರಿಹಾರವಾಗದೇ ನಮ್ಮೆದುರು ಪ್ರಶ್ನೆಗಳಾಗಿಯೇ ಉಳಿದುಬಿಟ್ಟಿವೆ. ಮಹಿಳೆಯರು ಇಂದು ಸಾರ್ವಜನಿಕರಂಗ, ಖಾಸಗಿರಂಗ ಎಂಬ ಬೇಧವಿಲ್ಲದೆ ಎಲ್ಲಾ ಕಡೆಯೂ ಕಿರುಕುಳ ಅನುಭವಿಸುತ್ತಿದ್ದಾಳೆ. ಮಹಿಳಾ ಕಿರುಕುಳ ಎಂದರೆ ಕೇವಲ ಲೈಂಗಿಕ ಕಿರುಕುಳ ಎಂಬುವಂತಹ ವಾತಾವರಣ ನಿರ್ಮಾಣವಾಗಿದೆ. ಆದರೆ ಅದರಾಚೆಗೂ ಅವಳು ಶಿಕ್ಷಣ, ವೇತನ, ಮುಖ್ಯವಾಹಿನಿಯಲ್ಲಿ ಭಾಗವಹಿಸುವಿಕೆಯಂತಹ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ  ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಶೇ.50 ಸ್ಥಾನಗಳು ಲಭಿಸಿಲ್ಲ. ಇದರ ಬಗ್ಗೆ ಮಹಿಳೆಯರ ಜೊತೆಗೆ ನಾವೆಲ್ಲರೂ ಧ್ವನಿ ಎತ್ತುವ ಕಾರ್ಯವಾಗಬೇಕು ಎಂದು ತಿಳಿಸಿದರು.
ಮಹಿಳಾ ಅಧ್ಯಯನ ವಿಭಾಗ ಮುಖ್ಯಸ್ಥೆ ಡಾ. ಶೈಲಜಾ ಹಿರೇಮಠ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿಗಳು, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.