ಸುಡು ಬಿಸಿಲಿಗೆ ಜನ ತತ್ತರ
ಕಲಬುರಗಿ,ಮಾ.31-ಸುಡು ಬಿಸಿಲಿಗೆ ಜಿಲ್ಲೆಯ ಜನ ಅಕ್ಷರಶ: ತತ್ತರಿಸಿ ಹೋಗಿದ್ದಾರೆ. ಜಿಲ್ಲೆಯಲ್ಲಿ ಶುಕ್ರವಾರ 40.9 ಡಿಗ್ರಿ ಸೆಲ್ಸಿಯಸ್ ಮತ್ತು ಶನಿವಾರ 41.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಹವಮಾನ ವರದಿ ಅನುಸಾರ ಇದು ರಾಜ್ಯದಲ್ಲಿಯೇ ಗರಿಷ್ಠ ಉಷ್ಣಾಂಶ ಇದಾಗಿದೆ.
ರಣ ಬಿಸಿಲಿನಿಂದಾಗಿ ಜನ ಹೈರಾಣಾಗಿ ಹೋಗುತ್ತಿದ್ದಾರೆ. ಬೆಳೆಗ್ಗೆ ಹತ್ತುಗಂಟೆಯಷ್ಟೊತ್ತಿಗೆ ಬಿಸಿಲ ತಾಪ ಹೆಚ್ಚಾಗುತ್ತಿರುವುದರಿಂದ ಜನ ಹೊರಗಡೆ ಓಡಾಡುವುದೇ ದುಸ್ತರವಾದಂತಾಗಿದೆ. ಮಧ್ಯಾಹ್ನ 12 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೂ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಈ ಅವಧಿಯಲ್ಲಿ ಜನರ ಓಡಾಟ ತೀರಾ ವಿರಳವಾಗುತ್ತಿದೆ. ಸಾಯಂಕಾಲ 4.30ರ ನಂತರ ಬಿಸಿಲ ತಾಪ ಅಲ್ಪ ಮಟ್ಟಿಗೆ ಕಡಿಯಾಗುತ್ತಿರುವುದರಿಂದ ಈ ವೇಳೆ ಜನ ಮನೆಯಿಂದ ಹೊರ ಬರುವಂತಾಗಿದೆ.
ಹಗಲು ಸುಡು ಬಿಸಿಲಿನಿಂದ ಬೆವೆತು ಹೋಗುತ್ತಿರುವ ಜನ ರಾತ್ರಿ ವೇಳೆ ಧಗೆಯಿಂದ ತತ್ತರಿಸಿ ಹೋಗುವಂತಾಗಿದೆ. ಬಿಸಿಲು ಹೆಚ್ಚಾಗಿರುವುದಿಂದ ಹಗಲು ರಾತ್ರಿ ಫ್ಯಾನ್, ಏರ್ ಕೂಲರ್, ಏಸಿ ಇಲ್ಲದೇ ದಿನ ಕಳೆಯುವುದು ಅಸಾಧ್ಯವೆನಿಸುವಂತಾಗಿದೆ. ಬಿರು ಬಿಸಿಲಿನಿಂದಾಗಿ ಮಧ್ಯಾಹ್ನದ ವೇಳೆ ರಸ್ತೆಗಳಲ್ಲಿ ಜನರ ಓಡಾಟ ಕಡಿಮೆಯಾಗಿದ್ದು, ಸಾಯಂಕಾಲದ ಹೊತ್ತಿಗೆ ಜನರ ಹೆಚ್ಚಾಗಿ ಕಂಡು ಬರುತ್ತಿದೆ. ಬಿಸಿಲ ತಾಪದಿಂದ ತಣಿಸಿಕೊಳ್ಳಲು ಜನ ತಂಪು ಪಾನಿಯಗಳಿಗೆ ಮೊರೆ ಹೋಗುತ್ತಿದ್ದಾರೆ. ಬಡವರ ಫ್ರಿಜ್ ಎಂದೇ ಕರೆಯಲಾಗುವ ಮಣ್ಣಿನ ಮಡಿಕೆಗಳಿಗೂ ಹೆಚ್ಚಿನ ಬೇಡಿಕೆ ಬಂದಂತಾಗಿದೆ. ನಗರದ ಶರಣಬಸವೇಶ್ವರ ದೇವಸ್ಥಾನ ಸೇರಿದಂತೆ ಮತ್ತಿತರ ಕಡೆ ಮಣ್ಣಿನ ಮಡಿಕೆಗಳ ಮಾರಾಟ ಜೋರಾಗಿ ನಡೆದಿದೆ. ನಗರದ ಹಲವು ಕಡೆ ಕಲ್ಲಂಗಡಿ ಹಣ್ಣುಗಳು ಮತ್ತು ಎಳೆ ನೀರು ಮಾರಾಟವು ಜೋರಾಗಿದೆ.
ಈ ನಡುವೆ ರಣ ಬಿಸಿಲಿಗೆ ನರೇಗಾ ಕೂಲಿ ಕಾರ್ಮಿಕನೊಬ್ಬ ಬಲಿಯಾಗಿರುವ ವರದಿಯಾಗಿದೆ. ಜಿಲ್ಲೆಯ ಆಳಂದ ತಾಲ್ಲೂಕಿನ ದಣ್ಣೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಶರಣಪ್ಪ ಸಮಗಾರ (42) ಎಂಬುವವರು ನರೇಗಾ ಕೂಲಿ ಕೆಲಸ ಮಾಡುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಶರಣಪ್ಪ ಅವರು ಬಿಸಿಲಿನ ತಾಪದಿಂದ ಅಥವಾ ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆಯನ್ನು ವ್ಯಕ್ತಪಡಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಸತ್ಯ ತಿಳಿಯಲಿದೆ.
ರಣ ಬಿಸಿಲು ಮಕ್ಕಳು, ಬಾಣಂತಿಯರು ಮತ್ತು ವೃದ್ಧರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಬಿಸಿಲಿನ ತಾಪದಿಂದ ಪಾರಾಗಲು ಮನೆಯಲ್ಲೇ ಇರಲು ಆರೋಗ್ಯ ಇಲಾಖೆ ಸೂಚಿಸಿದೆ.