ದೇವಸ್ಥಾನ ವಿರೂಪಗೊಳಿಸಿದ ಆರೋಪಿ ಬಂಧನ
ಕಲಬುರಗಿ,ಮಾ.31-ಶಹಾಬಾದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮುತ್ತಗಾ ಕಂಠಿ ನಂದಿ ಬಸವೇಶ್ವರ ಗುಡಿ ವಿರೂಪಗೊಳಿಸಿದ ಆರೋಪಿಯನ್ನು ಶಹಾಬಾದ ಪೊಲೀಸರು ಬಂಧಿಸಿದ್ದಾರೆ.
ಬಸವರಾಜ ಚಂದ್ರಕಾಂತ ಕೋರೆ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಯಾರೋ ದೇವಸ್ಥಾನ ವಿರೂಪಗೊಳಿಸಿದ್ದಾರೆ ಎಂದು ಈತ ಶಬಾಹಾದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದ. ಇದಕ್ಕೂ ಮುನ್ನ ದೇವಸ್ಥಾನ ಕಮೀಟಿ ಅಧ್ಯಕ್ಷ ಬಸವರಾಜ ಮಾಲಿಪಾಟೀಲ ಅವರು ಸಹ ದೂರು ಸಲ್ಲಿಸಿದ್ದರು.
ಈ ದೂರಿನ ಅನ್ವಯ ಶಹಾಬಾದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶಹಾಬಾದ ಉಪ ವಿಭಾಗದ ಡಿಎಸ್‍ಪಿ ಶಂಕರಗೌಡ ಪಾಟೀಲ ಮಾರ್ಗದರ್ಶನದಲ್ಲಿ ಪಿಐ ನಟರಾಜ ವಾಡೆ ಅವರ ನೇತೃತ್ವದಲ್ಲಿ ಪಿಎಸ್‍ಐಗಳಾದ ಲಕ್ಷ್ಮಣ ಹಾಗೂ ಶಿವರಾಯ, ಸಿಬ್ಬಂದಿಗಳಾದ ದೊಡ್ಡಪ್ಪ, ಬಸವರಾಜ, ಕಾಮಯ್ಯಾ, ಶ್ರೀಕಾಂತ, ಸಂತೋಷ ಅವರನ್ನೊಳಗೊಂಡ ಮೂರು ತಂಡ ರಚಿಸಲಾಗಿತ್ತು. ಈ ತಂಡಗಳು ತನಿಖೆ ನಡೆಸಿ ದೇವಸ್ಥಾನದನ ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ದೂರು ಕೊಟ್ಟ ಬಸವರಾಜ ಚಂದ್ರಕಾಂತ ಕೋರೆ ಅವರೇ ದೇವಸ್ಥಾನ ವಿರೂಪಗೊಳಿಸಿದ್ದು ಬೆಳಕಿಗೆ ಬಂದಿದೆ.
ಗುಡಿಯ ಕೆಳಗೆ ಇರುವ 20 ಎಕರೆ ಜಮೀನಿನ ಲಾಭವನ್ನು ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಮಾಲಿಪಾಟೀಲ ಅವರು ಪಡೆಯುತ್ತಿದ್ದು, ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಿ ತಾನು ದೇವಸ್ಥಾನ ಸಮಿತಿ ಅಧ್ಯಕ್ಷನಾಗಿ ಗುಡಿಯ ಕೆಳಗೆ ಇರುವ ಜಮೀನಿನ ಲಾಭ ಪಡೆಯಬೇಕು ಎಂಬ ದುರುದ್ದೇಶದಿಂದ ಗುಡಿಯನ್ನು ಎರಡು ಬಾರಿ ವಿರೂಪಗೊಳಿಸಿದ್ದಾಗಿ ಆರೋಪಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.