ನರೇಗಾ ಮೂಲಕ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಿ: ಜಿಪಂ ಸಿಇಒ ರಿಶಿ ಆನಂದ
ವಿಜಯಪುರ, ಮಾ. 31: ನರೇಗಾ ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರಿಗೆ ದಿನಗೂಲಿಯ ಮೊತ್ತ 349ರೂ ಮಾಡಲಾಗಿದೆ. ಇದನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಶಿ ಆನಂದ ತಿಳಿಸಿದ್ದಾರೆ.
ಏಪ್ರಿಲ್ 01 2024 ರಿಂದ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ದಿನಗೂಲಿ ಹಣ ರೂ.316 ರಿಂದ ರೂ.349 ಗೆ ಹೆಚ್ಚಿಸಿ ಕೇಂದ್ರ ಸರ್ಕಾರವು ಆದೇಶ ಹೊರಡಿಸಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತಾಲಯದ ನಿರ್ದೇಶನದಂತೆ ಜಿಲ್ಲೆಯಾದ್ಯಂತ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ನಿರಂತರ ಕೆಲಸ ಒದಗಿಸಿ ವಲಸೆ ತಡೆಯುವ ಉದ್ದೇಶದಿಂದ “ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ, ಉದ್ಯೋಗ ಖಾತ್ರಿ ದುಡಿಮೆ ಖಾತ್ರಿ” ಅಭಿಯಾನವನ್ನು ಮಾರ್ಚ್ 15 ರಿಂದ ಮೇ 31 2024ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2023-24ನೇ ಸಾಲಿನಲ್ಲಿ ಮಳೆ ಕೊರತೆಯಿಂದ ವಿಜಯಪುರ ಜಿಲ್ಲೆಯ 13 ತಾಲೂಕುಗಳನ್ನೂ ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರ, ರೈತರ ಕೃಷಿ ಚಟುವಟಿಕೆಗಳು ಕುಂಠಿತವಾಗಿರುವ ಕಾರಣದಿಂದ ಗ್ರಾಮೀಣ ಪ್ರದೇಶದಲ್ಲಿ ಅಕುಶಲ ಕೂಲಿಕಾರ್ಮಿಕರ ಜೀವನ ನಿರ್ವಹಣೆ ಕಷ್ಟ ಸಾಧ್ಯವಾಗಿರುತ್ತದೆ. ಇಂತಹ ಕುಟುಂಬಗಳಿಗೆ ಪ್ರತಿದಿನ ರೂ.349 ಕೂಲಿ ಜೊತೆಗೆ 100 ದಿನಗಳ ಕೆಲಸ ನೀಡಲಾಗುತ್ತದೆ.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಮುಂದಿನ 2024-25 ನೇ ಸಾಲಿಗೆ ವಿಜಯಪುರ ಜಿಲ್ಲೆಗೆ 42 ಲಕ್ಷ ಮಾನವ ದಿನಗಳನ್ನು ಸೃಜಿಸಲು ಗುರಿ ಹೊಂದಲಾಗಿದೆ. ಗುರಿ ಹೊಂದಿದ ಮಾನವದಿನಗಳನ್ನು ಸೃಜಿಸಲು ಗ್ರಾಮ ಪಂಚಾಯತಿ ಕ್ರಿಯಾ ಯೋಜನೆಗಳನ್ನು ಈಗಾಗಲೇ ಅನುಮೋದಿಸಲಾಗಿದೆ. ಅನುಮೋದನೆಯಾದ ಕಾಮಗಾರಿಗಳಲ್ಲಿನ ಸಮುದಾಯ ಹಾಗೂ ಕೂಲಿ ಆಧಾರಿತ ಕಾಮಗಾರಿಗಳನ್ನು ಮಾತ್ರ ಆರ್ಥಿಕ ವರ್ಗದ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಅನುಷ್ಠಾನಗೊಳಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ತಲೆದೋರಿರುವ ಬರದಿಂದ ಗ್ರಾಮೀಣ ಪ್ರದೇಶದಿಂದ ಅನೇಕ ಕುಟುಂಬಗಳಿಗೆ ಜೀವನ ನಿರ್ವಹಣೆಗಾಗಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಸ್ಥಳೀಯವಾಗಿ ಅಕುಶಲ ಕೆಲಸ ಒದಗಿಸಲಾಗುತ್ತಿದೆ. ಜನರು ಉದ್ಯೋಗ ಅರಸಿ ವಲಸೆ ಹೋಗುತ್ತಿರುವುದನ್ನು ತಡೆಯಲು, ಮುಂಗಾರು ಆರಂಭಕ್ಕೂ ಮುನ್ನ ಹೆಚ್ಚಿನ ಜನರಿಗೆ ಸ್ಥಳೀಯವಾಗಿ ನಿಗದಿತ ಸಮಯದಲ್ಲಿ ನಿರಂತರ ಕೆಲಸ ಒದಗಿಸುವುದು ಅಗತ್ಯವಾಗಿರುತ್ತದೆ. ಬೇಸಿಗೆ ಬಂದರೆ ಗ್ರಾಮಗಳನ್ನು ತೊರೆದು ಬೇರೆ ರಾಜ್ಯಗಳಿಗೆ ಹಾಗೂ ಜಿಲ್ಲೆಗಳಿಗೆ ಜನರು ವಲಸೆ ಹೋಗುವುದನ್ನು ತಡೆಗಟ್ಟುವುದು ಹಾಗೂ ಗ್ರಾಮೀಣ ಪ್ರದೇಶದ ಎಲ್ಲಾ ಜನರಿಗೆ ನಿರಂತರ ಉದ್ಯೋಗ ಒದಗಿಸಿ ಜೀವನ ಸಂಕಷ್ಟ ನೀಗಿಸುವ ಉದ್ದೇಶದಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಉದ್ಯೋಗ ಚೀಟಿ ಹೊಂದಿರುವ ಎಲ್ಲ ಕುಟುಂಬಗಳು ಗ್ರಾಮ ಪಂಚಾಯತಿ ವತಿಯಿಂದ ಹಮ್ಮಿಕೊಂಡಿರುವ ಈ ಅಭಿಯಾನದಲ್ಲಿ ಸ್ಥಳೀಯವಾಗಿ ಉದ್ಯೋಗ ಪಡೆದು ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆ ಮೂಲಕ ಕೋರಿದ್ದಾರೆ.