ಶ್ರದ್ಧೆ, ಭಕ್ತಿಯ ಶುಭ ಶುಕ್ರವಾರ ಆಚರಣೆಟ್ರ್ಯಾಕ್ಟರನಲ್ಲಿ ಯೇಸು ರೂಪಕ ಪ್ರದರ್ಶನ
ಬೀದರ್:ಮಾ.31: ಸೇಂಟ್ ಜೊಸೆಫ್ ಕೆಥೋಲಿಕ್ ಚರ್ಚ್ ಹಾಗೂ ಸೆಕ್ರೇಡ್ ಹಾರ್ಟ್ ಚರ್ಚ್ ವತಿಯಿಂದ ನಗರದಲ್ಲಿ ಶ್ರದ್ಧೆ, ಭಕ್ತಿಯಿಂದ ಶುಭ ಶುಕ್ರವಾರ ಆಚರಿಸಲಾಯಿತು.
ಕ್ರೈಸ್ತರು ಯೇಸುವಿನ ಪ್ರಾಣ ತ್ಯಾಗದ ಪವಿತ್ರ ಸ್ಮರಣೆಯ ಶಿಲುಬೆ ಹಾದಿಯ ಪ್ರಾರ್ಥನಾ ವಿಧಿಯನ್ನು ಭಕ್ತಿಯಿಂದ ನೆರವೇರಿಸಿದರು.
ಕೈಯಲ್ಲಿ ಶಿಲುಬೆಗಳನ್ನು ಹಿಡಿದುಕೊಂಡು ನಗರದ ನೆಹರೂ ಕ್ರೀಡಾಂಗಣ ಸಮೀಪದ ಸಾಯಿ ಶಾಲೆ ಮೈದಾನದಿಂದ ಮೆರವಣಿಗೆ ಆರಂಭಿಸಿದರು. ಜನರಲ್ ಕಾರ್ಯಪ್ಪ ವೃತ್ತ, ಅಂಬೇಡ್ಕರ್ ವೃತ್ತ, ಭಗತಸಿಂಗ್ ವೃತ್ತ, ತಹಶೀಲ್ದಾರ್ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಹರಳಯ್ಯ ವೃತ್ತ, ಗುದಗೆ ಆಸ್ಪತ್ರೆ ಕ್ರಾಸ್, ರೋಟರಿ ಕನ್ನಡಾಂಬೆ ವೃತ್ತದ ಮಾರ್ಗವಾಗಿ ಹಾಯ್ದು ಪುನಃ ಸಾಯಿ ಶಾಲೆಗೆ ಆಗಮಿಸಿ ಮುಕ್ತಾಯಗೊಳಿಸಿದರು.
ಮೆರವಣಿಗೆಯಲ್ಲಿ ಚಲಿಸುವ ಟ್ರ್ಯಾಕ್ಟರನಲ್ಲೇ ಪ್ರದರ್ಶಿಸಿದ ಯೇಸು ಅವರ ಜೀವನದ ಅಂತಿಮ ಗಳಿಗೆಯ ರೂಪಕ ಗಮನ ಸೆಳೆಯಿತು.
ಏಳು ಸ್ಥಳಗಳಲ್ಲಿ ಯೇಸು ಅವರು ಶಿಲುಬೆಯಲ್ಲಿ ನುಡಿದ ಏಳು ನುಡಿಗಳನ್ನು ಹೇಳಲಾಯಿತು.
ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಂಜಯ್ ಜಾಗೀರದಾರ್, ಕಾಂಗ್ರೆಸ್ ಮುಖಂಡ ಶ್ರೀಮಂತ ಸೂರ್ಯವಂಶಿ, ಕೆಥೋಲಿಕ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಸುರೇಶ ಎನ್. ದೊಡ್ಡಿ, ಫಾದರ್ ವಿಲ್ಸನ್, ಫಾದರ್ ಜೋನ್ ಪೌಲ್, ಫಾದರ್ ವಿನ್ಸೆಂಟ್, ಕನ್ಯಾಭಗಿನಿ, ಸಿಸ್ಟರ್ ಕ್ರಿಸ್ಟಿನಾ ಜಮಗಿ ಕಾಲೊನಿ, ಶಾಂತಕುಮಾರ, ಅರುಣ ಪೌಲ್ ಮೊದಲಾದವರು ಪಾಲ್ಗೊಂಡಿದ್ದರು.