ರಣ ಬಿಸಿಲಿಗೆ ಮೊದಲ ಬಲಿ
ಕಲಬುರಗಿ,ಮಾ.31-ರಾಜ್ಯದಲ್ಲಿ ಕಳೆದ ಕೆಲ ವಾರಗಳಿಂದ ರಣ ಬಿಸಿಲಿನ ಬೇಗೆ ಹೆಚ್ಚುತ್ತಿದ್ದು ಬಿಸಿಲಿನ ತಾಪಕ್ಕೆ ಬೆದರಿ ಜನರು ಮನೆಯಿಂದ ಹೊರ ಬರಲು ಹೆದರುತ್ತಿರುವ ಬೆನ್ನಲ್ಲೇ ನರೇಗಾ ಕೂಲಿ ಕೆಲಸ ಮಾಡುವಾಗ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದು, ಬಿಸಿಲಿನ ತಾಪದಿಂದ ಸಾವು ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.
ಜಿಲ್ಲೆಯ ಆಳಂದ ತಾಲ್ಲೂಕಿನ ದಣ್ಣೂರ ಗ್ರಾಮದ ಶರಣಪ್ಪ ಸಮಗಾರ (42) ನರೇಗಾ ಕೆಲಸ ಮಾಡುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಬಿಸಿಲಿನ ಹೊಡೆತಕ್ಕೆ ಶರಣಪ್ಪನ ಸಾವನ್ನಪ್ಪಿದ್ದಾರೆಯೇ ಅಥವಾ ಹೃದಯಾಘಾತದಿಂದ ಸಾವನ್ನಪ್ಪಿರುವ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಶರಣಪ್ಪ ಸಮಗಾರ ಮರಣೋತ್ತರ ಪರೀಕ್ಷೆ ವರದಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ. ಘಟನೆ ಸಂಬಂಧ ಕಲಬುರಗಿ ಜಿಲ್ಲೆಯ ನರೋಣಾ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಾರಿ ರಾಜ್ಯದ ಎರಡು ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ 40ಡಿಗ್ರಿ ದಾಟಿದ್ದು, ಬಾಗಲಕೋಟೆ 40.6ಡಿಗ್ರಿ ಹಾಗೂ ಕಲಬುರಗಿಯಲ್ಲಿ 40.9ಡಿಗ್ರಿ ತಾಪಮಾನ ದಾಖಲಾಗಿದೆ. ಬೆಂಗಳೂರಲ್ಲಿ 1996ರ ಬಳಿಕ ಅತಿ ಹೆಚ್ಚು ತಾಪಮಾನ ಮಾರ್ಚ್‍ನಲ್ಲಿ ದಾಖಲಾಗಿದೆ. 1996ರಲ್ಲಿ ಬೆಂಗಳೂರಲ್ಲಿ 37.3ಡಿಗ್ರಿ ನಷ್ಟು ತಾಪಮಾನ ದಾಖಲಾಗಿತ್ತು. ಈ ಬಾರಿ ಬೆಂಗಳೂರಲ್ಲಿ ಮಾರ್ಚ್‍ನಲ್ಲಿ 36ಡಿಗ್ರಿ ಸರಾಸರಿಯಲ್ಲಿ ತಾಪಮಾನ ದಾಖಲಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಉಳಿದಂತೆ ಈ ಬೇಸಿಗೆಯಲ್ಲಿ ಉತ್ತರ ಕರ್ನಾಟಕದ ಕೆಲವು ಭಾಗದಲ್ಲಿ ದಾಖಲೆಯ ತಾಪಮಾನ ದಾಖಲಾಗಿದೆ. ಕೊಪ್ಪಳ, ರಾಯಚೂರು, ಗದಗ, ಬಳ್ಳಾರಿ, ವಿಜಯಪುರ ಜಿಲ್ಲೆಗಳಲ್ಲಿ ಅಧಿಕ ತಾಪಮಾನ ಇದೆ. 1996ರಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗರಿಷ್ಠ 44.6ಡಿಗ್ರಿಗೆ ಏರಿದ್ದ ಬೇಸಿಗೆಯ ಧಗೆ, ಬಳಿಕ ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕ ಭಾಗದಲ್ಲಿ 40ಲಿ ದಾಟಿದೆ.