ವಡ್ಡರದೊಡ್ಡಿ ಈಸ್ಟರ್ ಹಬ್ಬ ಆಚರಣೆ
ಸಂಜೆವಾಣಿ ವಾರ್ತೆ
ಹನೂರು ಮಾ 31 :- ತಾಲ್ಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡರದೊಡ್ಡಿಯಲ್ಲಿ ಯೇಸು ಕ್ರೈಸ್ತರ ಪುನರುತ್ಥಾನದ ದಿನವಾದ ಈಸ್ಟರ್ ಹಬ್ಬ ಶನಿವಾರ ರಾತ್ರಿಯಿಂದಲೇ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.ಹಬ್ಬದ ಪ್ರಯುಕ್ತ ಶನಿವಾರ ರಾತ್ರಿ ದಿವ್ಯ ಬಲಿಪೂಜೆಯನ್ನು ಧರ್ಮ ಕೇಂದ್ರದ ಗುರುಗಳಾದ ಫಾ ಬಿಲವೆಂದ್ರ ,ಫಾ ಪಾಕ್ಯಾರಾಜ್ ರವರಿಂದ ನೆರವೇರಿಸಲಾಯಿತು.
ಶನಿವಾರ ರಾತ್ರಿಯಿಂದಲೇ ಚರ್ಚ್‍ಗಳಲ್ಲಿ ನಡೆಯುವ ಪ್ರಾರ್ಥನೆ ಹಾಗೂ ವಿಧಿವಿಧಾನಗಳನ್ನು ಒಳಗೊಂಡ `ಪಾಸ್ಕಾ’ ಜಾಗರಣೆಯಲ್ಲಿ ಭಾಗವಹಿಸುವುದರೊಂದಿಗೆ ಕ್ರೈಸ್ತರು ಭಾನುವಾರ ಈಸ್ಟರ್ ಹಬ್ಬವನ್ನು ಸಂತಸ, ಸಂಭ್ರಮದಿಂದಲೇ ಎದುರುಗೊಳ್ಳುತ್ತಾರೆ. ಇದರ ಜತೆಯಲ್ಲಿ ಫೆಬ್ರವರಿ ತಿಂಗಳ ಎರಡನೇ ವಾರದಿಂದ ಆರಂಭವಾದ 40 ದಿನಗಳ ತಪಸ್ಸು ಕಾಲದ ತ್ಯಾಗ, ದೇಹ ದಂಡನೆಯ ವ್ರತ ಈಸ್ಟರ್ ಹಬ್ಬದ ಮೂಲಕ ಮುಕ್ತಾಯಗೊಳ್ಳುತ್ತದೆ. ಯೇಸು ಕ್ರಿಸ್ತ ನಮಗಾಗಿ ಮತ್ತೆ ಬಂದಿದ್ದಾನೆ ಎನ್ನುವ ನಂಬಿಕೆಯ ಮೂಲಕ ಕ್ರೈಸ್ತ ಬಂಧುಗಳು ಹಬ್ಬವನ್ನು ಸಡಗರದಿಂದ ಆಚರಣೆಯಲ್ಲಿ ತೊಡಗುತ್ತಾರೆ.
ವಿಶ್ವದ ನಾನಾ ದೇಶಗಳಲ್ಲಿ ಈ ಹಬ್ಬದ ಆಚರಣೆಯಲ್ಲಿ ವೈವಿಧ್ಯತೆ ಇರಬಹುದು. ಆದರೆ ಇದನ್ನು ಪಾಸ್ಕಾ ಹಬ್ಬ ಅಥವಾ ಪುನರುತ್ಥಾನದ ಹಬ್ಬ ಎಂದೂ ಕರೆಯಲಾಗುತ್ತದೆ. ಕ್ರೈಸ್ತ ರ ಪವಿತ್ರ ಗ್ರಂಥವಾದ ಬೈಬಲ್ ನಲ್ಲಿ ಹೇಳಿರುವಂತೆ ದುಷ್ಟ ಜನರ ಒಳಸಂಚಿನಿಂದ ಅನ್ಯಾಯದ ತೀರ್ಪಿಗೆ ಒಳಗಾಗಿ ಶಿಲುಬೆಯಲ್ಲಿ ಘೋರವಾದ ಮರಣವನ್ನು ಹೊಂದಿದ ಯೇಸು ಕ್ರಿಸ್ತ ಮೂರನೆಯ ದಿನ ಮತ್ತೆ ಜೀವಂತವಾಗಿ ಎದ್ದು ಬಂದು ತಮ್ಮ ದೈವತ್ವವನ್ನು ತೋರ್ಪಡಿಸಿದರು ಎಂಬುದರ ಸಂಭ್ರಮದ ಆಚರಣೆಯೇ ಈಸ್ಟರ್‍ನಲ್ಲಿ ಕಾಣ ಸಿಗುತ್ತದೆ.