ಸುಭದ್ರ ರಾಷ್ಟ್ರ ನಿರ್ಮಾಣಕ್ಕಾಗಿ ಮೈತ್ರಿ: ನಿಖಿಲ್ ಕುಮಾರಸ್ವಾಮಿ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.31: ಸುಭದ್ರ ರಾಷ್ಟ್ರ ನಿರ್ಮಾಣಕ್ಕಾಗಿ ಜೆಡಿಎಸ್ ನರೇಂದ್ರಮೋದಿ ನೇತೃತ್ವದ ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ. ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಅಣ್ಣತಮ್ಮಂದಿರಂತೆ ಸಮ್ಮಿಲನಗೊಂಡಿದ್ದಾರೆ ಎಂದು ರಾಜ್ಯ ಯುವ ಜನತಾದಳದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಅವರು ಪಟ್ಟಣದ ಟಿಎಪಿಸಿಎಂಎಸ್ ಸಮುದಾಯ ಭವನದ ಆವರಣದಲ್ಲಿ ಏರ್ಪಡಿಸಿದ್ದ ಸ್ನೇಹ ಸಮ್ಮಿಲನ ಸಭೆಯನ್ನು ಉಧ್ಘಾಟಿಸಿ ಮಾತನಾಡಿದರು.
ರಾಜ್ಯದ ರೈತರ ಪರ ಸದಾ ಕೆಲಸ ಮಾಡುವ ಕುಮಾರಣ್ಣನವರನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅತಿಹೆಚ್ಚು ಮತ ನೀಡಿ ಆಯ್ಕೆ ಮಾಡಬೇಕೆಂದು ಮನವಿ ಮಾಡಿದ ನಿಖಿಲ್ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಕೂಡ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದೆ ಮಾಡಿರುವ ಕುಮಾರಣ್ಣ ಗೆಲುವಿಗೆ ಟೊಂಕಕಟ್ಟಿ ನಿಂತಿರುವುದು ಕಾರ್ಯಕರ್ತರಲ್ಲಿ ಹುಮ್ಮಸ್ಸು ತಂದಿದೆ. ಜಿಲ್ಲೆಯ ಎಲ್ಲಾ ಜೆಡಿಎಸ್ ಕಾರ್ಯಕರ್ತರು ಕಾವೇರಿ ಉಳಿವಿಗಾಗಿ ಹಾಗೂ ಕೇಂದ್ರದ ನಾಯಕರುಗಳ ಒತ್ತಡದಿಂದಾಗಿ ಮಂಡ್ಯದಲ್ಲಿ ಸ್ಪರ್ಧೆ ಮಾಡಬೇಕಾಯಿತು. ಕುಮಾರಣ್ಣ ಚುನಾವಣೆಗೆ ನಿಂತರೆ ಹಳೆ ಮೈಸೂರು ಭಾಗ ಸೇರಿದಂತೆ ಚಿತ್ರದುರ್ಗದ ವರೆವಿಗೂ ಬರುವ ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಅನುಕೂಲವಾಗಲಿದೆ ಎಂದು ಈ ನಿರ್ಧಾರಕ್ಕೆ ಬಂದಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ತಮ್ಮ ತೊಂಭತ್ತೊಂದರ ವಯಸ್ಸಿನಲ್ಲಿಯೂ ಸಂಸತ್ತಿನಲ್ಲಿ ಕನ್ಮಡ ನಾಡಿನ ಹಲವಾರು ಸಮಸ್ಯೆಗಳ ಬಗ್ಗೆ ಮಾತನಾಡುವ ಮೂಲಕ ಪರಿಹಾರ ಕಂಡುಕೊಳ್ಳಲು ಶ್ರಮಿಸಿದ್ದಾರೆ. ಆದ್ದರಿಂದ ಕರ್ನಾಟಕ ರಾಜ್ಯದ 28 ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಯ ಗೆಲುವಿಗೆ ಎರಡು ಪಕ್ಷಗಳ ಕಾರ್ಯಕರ್ತರು ಶ್ರಮಿಸಬೇಕು. ಮತ್ತೆ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲು ಶ್ರಮಿಸಬೇಕು. ಜಿಲ್ಲೆಯಲ್ಲಿ ಕುಮಾರಣ್ಣನನ್ನು ಗೆಲ್ಲಿಸಿಕೊಡಬೇಕು. ಏಪ್ರಿಲ್ 04 ರಂದು ಕುಮಾರಣ್ಣ ನಾಮಪತ್ರ ಸಲ್ಲಿಸಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಬೇಕು ಎಂದು ಮನವಿ ಮಾಡಿದರು.
ಮೈಸೂರು ಕೊಡಗು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಮಾತನಾಡಿ ಜೂನ್ ನಾಲ್ಕರ ನಂತರ ಮೋದಿಯವರು ಮೂರನೇ ಬಾರಿಗೆ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ದೇಶ ಕಾಯಲು ಮೋದಿ, ಕಾವೇರಿ ಕಾಯಲು ಕುಮಾರಣ್ಣ ಆಗಬೇಕಿದೆ. ಅದಕ್ಕಾಗಿ ನಾವೆಲ್ಲರೂ ಕುಮಾರಣ್ಣನಿಗೆ ಮತಹಾಕಬೇಕು .ಕಾವೇರಿ ವಿಷಯವಾಗಿ ದೇವೇಗೌಡರ ಹೋರಾಟ ಅಪಾರವಾದುದು ಇಟಲಿಯಲ್ಲಿ ಹುಟ್ಟಿದ ಸೋನಿಯಾಗಾಂಧಿಗೂ ಭಾರತಕ್ಕೂ ಏನು ಸಂಭಂಧ ಇತ್ತು ದೆಹಲಿಯಲ್ಲಿಯಲ್ಲಿ ಹುಟ್ಟಿದ ರಾಹುಲ್ ಗಾಂಧಿಗೆ ವಯನಾಡಿಗೂ ಏನು ಸಂಬಂಧ ಇತ್ತು. ಇಂದಿರಾಗಾಂಧಿಗೂ ಚಿಕ್ಕಮಂಗಳೂರಿಗೂ ಏನು ಸಂಬಂಧ ಇತ್ತು,ಸಿದ್ದರಾಮಯ್ಯಗೂ ಬಾದಾಮಿಗೂ ಏನು ಸಂಬಂಧ ಇತ್ತು ಅದನ್ನು ಕಾಂಗ್ರೆಸ್ ನಾಯಕರುಗಳು ಅರ್ಥ ಮಾಡಿಕೊಳ್ಳಬೇಕು. ಕುಮಾರಣ್ಣ 2018 ರಲ್ಲಿ ಪ್ರವಾಹ ಬಂದಾಗ ಕೊಡಗಿನ ಜನರಿಗೆ ಸಾಕಷ್ಟು ಮನೆ ಕಟ್ಟಿಸಿಕೊಟ್ಟಿದ್ದಾರೆ. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ರಾಜ್ಯಕ್ಕೆ ಕಾಲಿಟ್ಟರೆ ಬರ, ಜೆಡಿಎಸ್ ಬಿಜೆಪಿ ಕಾಲಿಟ್ಟರೆ ವರುಣ ಎಂದರು.
ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ ಇದೇ ಮನೆಯಿಂದ ಹೋದವನು ನಾನು ನಿಮ್ಮನ್ನೆಲ್ಲಾ ನೊಡುತ್ತಿರುವುದು ಸಂತಸವಾಗುತ್ತಿದೆ. ತಾಲ್ಲೂಕಿನಲ್ಲಿ ಅತೀ ಹೆಚ್ಚು ಮತಗಳನ್ನು ನೀಡುವ ಮೂಲಕ ಅವರನ್ನು ಕೇಂದ್ರದ ಮಂತ್ರಿಯನ್ನಾಗಿ ಮಾಡಬೇಕು. ಅದಕ್ಕಾಗಿ ಎರಡು ಪಕ್ಷಗಳ ಮುಖಂಡರು ಶ್ರಮಿಸಬೇಕು. ನನಗೆ ಜೆಡಿಎಸ್ ನಲ್ಲಿ ಇದ್ದಾಗ ಮಂಜಣ್ಣ ಬಲಗೈನಂತೆ ಇದ್ದರು. ನನ್ನ ಎರಡು ಚುನಾವಣೆಗಳಲ್ಲಿ ನನ್ನ ಗೆಲುವಿಗೆ ಶ್ರಮಿಸಿದವರು. ಮಂಜಣ್ಣ ಗೆದ್ದಿರುವುದು ನನಗೆ ಸಂತೋಷವಾಗಿದೆ. ಆದರೆ ಅವರು ಗೆದ್ದಾಗ ನನಗೆ ಒಂದು ಧನ್ಯವಾದ ಹೇಳಲಿಲ್ಲ ಈಗಲೂ 400 ಕೋಟಿ ಅನುದಾನ ಬಿಟ್ಟುಕೊಟ್ಟಿದ್ದೇನೆ. ಮುಂದೆ ಕ್ಷೇತ್ರ ಅಭಿವೃದ್ದಿಗೆ ಮಂಜಣ್ಣ ಜೊತೆ ಕೈಜೋಡಿಸುತ್ತೇನೆ ಎಂದರು.
ಶಾಸಕ ಹೆಚ್.ಟಿ.ಮಂಜು ಮಾತನಾಡಿ ಕಾಂಗ್ರೆಸ್ ನಾಯಕರುಗಳು ಜೆಡಿಎಸ್ ನಾಯಕರುಗಳ ಬಗ್ಗೆ ಮಾತನಾಡುವಾಗ ಎಚ್ಚರದಿಂದ ಮಾತನಾಡಬೇಕು. ಕಾಂಗ್ರೆಸ್ ಪಕ್ಷ ಮತದಾರರನ್ನು ಬ್ಲಾಕ್‍ಮೇಲ್ ಮಾಡುವ ಕೆಲಸ ಮಾಡುತ್ತಿರುವ ನಿಮಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ತುಮಕೂರಿಗೆ ನೀರು ಬಿಟ್ಟು ನಮಗೆ ನೀರು ಬಿಡಲು ಕೇಳಿದಾಗ ಉಸ್ತುವಾರಿ ಸಚಿವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಯಾವ ಮುಖ ಹೊತ್ತುಕೊಂಡು ಮತ ಕೇಳಲು ಬರುತ್ತೀರಿ. ಬಜೆಟ್‍ನಲ್ಲಿ ಮಂಡ್ಯಕ್ಕೆ ಹಣ ನೀಡಿದಾಗ ಮಂಡ್ಯ ಬಜೆಟ್ ಎಂದು ಹಾಸ್ಯ ಮಾಡಿದ ನಿಮಗೆ ಕುಮಾರಣ್ಣ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಜೆಡಿಎಸ್ ಪಕ್ಷ ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಮಾಡಿದೆ. ನಮ್ಮ ತಾಲ್ಲೂಕಿನಲ್ಲಿ ಕುಮಾರಣ್ಣನಿಗೆ ಹೆಚ್ಚು ಮತ ನೀಡಲು ನೀವೆಲ್ಲರೂ ಶ್ರಮಿಸಬೇಕು ಎಂದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ ಕುಮಾರಣ್ಣ ಕೇವಲ ಮಂಡ್ಯದ ಸಂಸದರಾಗಿ ಕೆಲಸ ಮಾಡುವುದಿಲ್ಲ ಅವರು ಗೆದ್ದರೆ ರಾಜ್ಯದ ಪ್ರತಿನಿಧಿಯಂತೆ ಕೆಲಸ ಮಾಡುತ್ತಾರೆ. ಇದಕ್ಕಾಗಿ ಮಂಡ್ಯದ ಜನ ಕುಮಾರಣ್ಣನಿಗೆ ಆಶೀರ್ವದಿಸಬೇಕು. ಕೆ.ಆರ್.ಪೇಟೆ ಜೆಡಿಎಸ್ ಪಕ್ಷದ ಭದ್ರಕೋಟೆ ಇಲ್ಲಿ ಬಿಜೆಪಿ ನಮ್ಮ ಜೊತೆ ಕೈಜೋಡಿಸಿರುವುದು ನಮಗೆ ಆನೆಬಲ ತಂದಿದೆ. ಜಿಲ್ಲೆಯ ಅಭಿವೃದ್ಧಿಗಾಗಿ ಕೆ.ಆರ್ ಪೇಟೆಯ ಜನ ಅತಿ ಹೆಚ್ಚು ಬಹುಮತವನ್ನು ತಮ್ಮ ಅಭ್ಯರ್ಥಿ ಕುಮಾರಣ್ಣನಿಗೆ ನೀಡಬೇಕು. ಪ್ರಸಕ್ತ ಚುನಾವಣೆಯಲ್ಲಿ ನಾನು ಅಭ್ಯರ್ಥಿಯಾಗಲು ಬಯಸಿದ್ದರೆ ಎರಡು ತಿಂಗಳ ಮುಂಚೆಯೇ ಪಕ್ಷ ನನಗೆ ಟಿಕೆಟ್ ನೀಡುತ್ತಿತ್ತು. ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳ ಒತ್ತಾಸೆಯ ಮೇರೆಗೆ ಕುಮಾರಣ್ಣ ಸ್ಪರ್ಧಿಸಿದ್ದಾರೆ. ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಶಾಸಕರಾಗಿದ್ದಾಗ ನಮ್ಮ ಸಲಹೆ ಪಡೆಯುತ್ತಿದ್ದರು. ನಾರಾಯಣಗೌಡ ಎರಡನೇ ಅವಧಿಗೆ ಕ್ಷೇತ್ರದ ಶಾಸಕರಾಗಲು ನಾನು ಕಾರಣ. ದೇವೇಗೌಡರ ಕಾಲು ಹಿಡಿದು ಅವರಿಗೆ ಟಿಕೆಟ್ ಕೊಡಿಸಿದೆ. ಕುಮಾರಣ್ಣನ ಆರೋಗ್ಯದ ಬಗ್ಗೆ ಲಘುವಾಗಿ ಮಾತನಾಡಿರುವ ಶ್ರೀರಂಗಪಟ್ಟಣದ ಶಾಸಕ ರಮೇಶ್ ಬಂಡಿಸಿದ್ದೇಗೌಡ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು ಕುಮಾರಣ್ಣನಿಗೆ ಅವರ ತಂದೆ ದೇವೇಗೌಡ್ರು ಮತ್ತು ಅವರ ತಾಯಿ ಚನ್ನಮ್ಮನವರ ಆಶೀರ್ವಾದ ಇದೆ ನಾವೆಲ್ಲ ಸೇರಿ ಅವರ ಎದೆಗೆ ಹೊಡೆದರೂ ಕುಮಾರಣ್ಣನ ಹೃದಯ ಬಗ್ಗುವುದಿಲ್ಲ ಅಷ್ಟು ಗಟ್ಟಿ ಇದೆ. ಕುಮಾರಣ್ಣನ ಆರೋಗ್ಯದ ಬಗ್ಗೆ ಅನುಮಾನವಿದ್ದರೆ ರಮೇಶ್ ಬಂಡಿಸಿದ್ದೇಗೌಡ್ರು ಆಸ್ಪತ್ರೆಯ ದಾಖಲೆಗಳನ್ನು ಪರಿಶೀಲನೆ ಮಾಡಲಿ. ರಮೇಶ್ ಬಂಡಿಸಿದ್ದೇಗೌಡ್ರು ತಮ್ಮ ಹೇಳಿಕೆಯ ಬಗ್ಗೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ ಸಿಎಸ್ ಪುಟ್ಟರಾಜು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರಿಗೆ ಹಣ ಕೊಟ್ಟಂತೆ ಮಾಡಿ ಅದನ್ನು ಗಂಡಸರಿಂದ ಸುಲಿಗೆ ಮಾಡುತ್ತಿದೆ ಇಂದು ಒಂದು ಡೆತ್‍ಸರ್ಟಿಫಿಕೆಟ್, ಪಡೆಯಲು ಕನಿಷ್ಠ ನೂರು ರೂಪಾಯಿ ಕೊಡಬೇಕಾದ ಸ್ಥಿತಿ ರಾಜ್ಯದಲ್ಲಿ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ,ಕೆ.ಸುರೇಶ್ ಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್,ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮ್, ರಾಜ್ಯ ಮಹಾಮಂಡಳದ ನಿರ್ದೇಶಕ ಎಸ್.ಎಲ್.ಮೋಹನ್, ಮಾಜಿ ಎಂಎಲ್‍ಸಿ ಕೆ.ಟಿ.ಶ್ರೀಕಂಠೇಗೌಡ, ಮನ್ಮುಲ್ ನಿರ್ದೇಶಕ ಡಾಲುರವಿ, ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್, ಮೂಡ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್, ಎ.ಆರ್.ರಘು ಸೇರಿದಂತೆ ಹಲವರು ಉಪಸ್ಥಿತರಿದ್ದರು.