ಉಡಿಗಾಲದಲ್ಲಿ ವಿಜೃಂಭಣೆಯ ಪಟ್ಟಲದಮ್ಮ ರಥೋತ್ಸವ
ಸಂಜೆವಾಣಿ ನ್ಯೂಸ್
ಚಾಮರಾಜನಗರ, ಮಾ.31- ತಾಲೂಕಿನ ಉಡಿಗಾಲ ಗ್ರಾಮದಲ್ಲಿ ಶನಿವಾರ ಸಂಜೆ ಪಟ್ಟಲದಮ್ಮ ಜಾತ್ರಾ ಮಹೋತ್ಸವ ಅಂಗವಾಗಿ ವಿಜೃಂಭಣೆಯಿಂದ ರಥೋತ್ಸವವು ಜರುಗಿತು.
ರಥೋತ್ಸವದ ಅಂಗವಾಗಿ ಕುದುರೆಯ ಅಲಂಕೃತ ವಾಹನದಲ್ಲಿ ಪಟ್ಟಲದಮ್ಮ ವಿಗ್ರಹವನ್ನು ಬಿಜಂಗೈದು, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯದೊಂದಿಗೆ ಸತ್ತಿಗೆ, ಸುರಾಪಾಣಿ, ಗೊರವರಕುಣಿತ ಬಿರುದು ಬಾವಲಿಗಳೊಡನೆ ಸಂಜೆಯವರೆಗೂ ಉತ್ಸವ ಜರುಗಿತು.
ಸಂಜೆ ಅಲಂಕೃತರಥದಲ್ಲಿ ಪಟ್ಟಲದಮ್ಮ ದೇವಿಯನ್ನು ಕೂರಿಸಿ ಮಹಾಮಂಗಳಾರತಿ ಮಾಡುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಗ್ರಾಮದ ಯುವಕರು, ಗ್ರಾಮಸ್ಥರು ಉದ್ಘೋಷಗಳನ್ನು ಕೂಗುತ್ತಾ, ಗ್ರಾಮದ ಪ್ರಮುಖ ಬೀದಿಗಳಲ್ಲಿ ರಥ ಎಳೆದು ಸಂಭ್ರಮಿಸಿದರು.
ಜಾತ್ರೆಗೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ರಥೋತ್ಸವ ನೋಡಿ ಕಣ್ತುಂಬಿಕೊಂಡರು.
ದೇವಸ್ಥಾನದ ಆವರಣದಲ್ಲಿ ಅಂಗಡಿ ಮುಂಗಟ್ಟುಗಳು, ಮಕ್ಕಳ ಆಟಿಕೆ ವಸ್ತುಗಳ ಅಂಗಡಿಗಳನ್ನು ಹಾಕಲಾಗಿತ್ತು. ಗ್ರಾಮದಎಲ್ಲಾ ರಸ್ತೆಗಳಲ್ಲಿ ಕಳೆದ ಒಂದು ವಾರದಿಂದ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು.
ರಥೋತ್ಸವದಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉಘೇ ಪಟ್ಟಲದಮ ತಾಯಿ ಎಂದು ಘೋಷಗಳನ್ನು ಹಾಕಿ ದೇವರ ದರ್ಶನ ಪಡೆದರು. ಯುವಕರು ತಮಟೆಯ ವಾದನಕ್ಕೆ ಕುಣಿದು ಕುಪ್ಪಳಿಸಿದರು.
ಎರಡು ದಿನಗಳ ಜಾತ್ರೆ ಇದಾಗಿದ್ದು, ಮಾ.29 ರಂದು ಮಧ್ಯಾಹ್ನ 3.30 ರಲ್ಲಿಗ್ರಾಮದ ಹೊರವಲಯದಲ್ಲಿ ಬಂಡಿ ಉತ್ಸವ ಜರುಗಿತು.
ಶನಿವಾರ ಬೆಳಗಿನ ಜಾವ 3 ಗಂಟೆಯಿಂದ 4.15 ರತನಕ ಕೇಲು ಉತ್ಸವ ಜರುಗಿತು. ಬಳಿಕ ಮದ್ದಿನ ಪ್ರದರ್ಶನ ನಡೆಯಿತು. ಬೆಳಗ್ಗೆ 5.30 ರಲ್ಲಿ ನಡೆದ ಕೊಂಡೋತ್ಸವ ಹರಕೆ ಹೊತ್ತ ಭಕ್ತಾದಿಗಳು ಕೊಂಡ ಹಾಯ್ದು ಭಕ್ತಿ ಸಮರ್ಪಿಸಿದರು.
ಸಂಜೆ ಪಟ್ಟಲದಮ್ಮ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ರಥೋತ್ಸವದೊಂದಿಗೆ ಎರಡು ದಿನಗಳ ಜಾತ್ರೆಗೆ ತೆರೆಬಿತ್ತು. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೆÇಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.