ಎಚ್‍ಡಿಡಿ ಹೇಳಿಕೆ ಖಂಡಿಸಿದ ಕಾಂಗ್ರೆಸ್ ರಾಜೇಶ್
ಸಂಜೆವಾಣಿ ನ್ಯೂಸ್
ಮೈಸೂರು:ಮಾ.31:- ಈ ಬಾರಿಯ ಲೋಕಸಭಾ ಚುನಾವಣೆ ವೇಳೆ ಸಿಎಂ ಸಿದ್ದರಾಮಯ್ಯ ಅವರ ಗರ್ವಭಂಗ ಮಾಡಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿರುವುದು ಖಂಡನೀಯ ಎಂದು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರ ಎಸ್.ರಾಜೇಶ್ ಟೀಕಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಈ ಕೋಮುವಾದಿಗಳು ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಮನೆ ಬಾಗಿಲಿಗೆ ಬಂದು ಎಚ್.ಡಿ. ಕುಮಾರಸ್ವಾಮಿ ಅವರಿಗೆ ಅಧಿಕಾರ ನೀಡಿದಾಗ ಗರ್ವವಿತ್ತೇ ಎಂಬುದು ದೇವೇಗೌಡರು ಹೇಳಲಿ ಎಂದು ಸವಾಲೆಸೆದರು.
ಅಲ್ಲದೆ, ರಾಜ್ಯದಲ್ಲಿನ ಬರ ಪರಿಸ್ಥಿತಿ, ಬೆಳೆ ನಷ್ಟದ ಬಗ್ಗೆ ದೇವೇಗೌಡರು ಪ್ರಧಾನಿ ಮೋದಿ ಬಳಿ ಏಕೆ ವಿಷಯ ಎತ್ತಲಿಲ್ಲ. ರಾಜ್ಯಕ್ಕೆ ಬರಬೇಕಾದ ಜಿಎಸ್‍ಟಿ ಪಾಲು, ಮೇಕೇದಾಟು ಯೋಜನೆಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿ, ದೇವೇಗೌಡರು ಕೇವಲ ರಾಜಕೀಯ ದ್ವೇಷ ಸಾಧಿಸುತ್ತಿದ್ದಾರೆಂದು ಆರೋಪಿಸಿದರು.
ಇದೇ ವೇಳೆ, ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಮಾತನಾಡುವ ವೇಳೆ ಅಮಿತ್ ಶಾ ಓರ್ವ ಗೂಂಡಾ, ನರಹಂತಕ, ಗೋಧ್ರಾ ಹತ್ಯಾಕಾಂಡದ ರೂವಾರಿ ಎಂದು ಕರೆದಿರುವುದು ಸರಿ ಇದೆ ಎಂದು ಸಮರ್ಥಿಸಿಕೊಂಡರು. ಎಸ್.ಎ.ರಹೀಂ, ರವಿ, ಸಿದ್ದರಾಜು, ಮೊಗಣ್ಣಾಚಾರ್, ರಾಕೇಶ್ ಇದ್ದರು.