ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ವಿಜ್ಞಾನ ಪರೀಕ್ಷೆ ಬರೆದ ವಿದ್ಯಾರ್ಥಿನಿಆರೋಗ್ಯ ಇಲಾಖೆಯ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ
ಅಥಣಿ : ಮಾ.31:ಬೇಸಿಗೆಯ ಬಿಸಿಲಿನ ತಾಪದ ನಡುವೆ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ವಿದ್ಯಾರ್ಥಿನಿ ಒಬ್ಬಳು ಎಸ್ ಎಸ್ ಎಲ್ ಸಿ ವಿಜ್ಞಾನ ಪರೀಕ್ಷೆಯನ್ನ ಬರೆದ ಪ್ರಸಂಗ ಅಥಣಿ ತಾಲೂಕಿನ ಮಲಾಬಾದ ವಿಮೋಚನಾ ವಸತಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಜರುಗಿದೆ.
ಅಥಣಿ ತಾಲೂಕಿನ ಬಳ್ಳಿಗೇರಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕವಿತಾ ಮಲ್ಲಪ್ಪ ಹಿಪ್ಪರಗಿ ಎಂಬ ವಿದ್ಯಾರ್ಥಿನಿಗೆ ಆರೋಗ್ಯದಲ್ಲಿ ಏರುಪೇರಾಗಿ ಮೂರ್ಛೆ ಹೋದ ಪ್ರಸಂಗ ಪರೀಕ್ಷಾ ಸಮಯದಲ್ಲಿ ಜರುಗಿದ್ದು, ತಕ್ಷಣವೇ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆಯ ಸಹಾಯಕಿ 108 ಅಂಬುಲೆನ್ಸ್ ವಾಹನ ಕರೆಯಿಸಿ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಆರೋಗ್ಯದಲ್ಲಿ ಚೇತರಿಕೆ ಕಂಡ ನಂತರ ವಿದ್ಯಾರ್ಥಿನಿ ಆರೋಗ್ಯ ಇಲಾಖೆಯ ಸಿಬ್ಬಂದಿಯ ಸಹಕಾರದಿಂದ ತನ್ನ ಇಚ್ಛೆಯಂತೆ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಪರೀಕ್ಷೆ ಬರೆದು ಸೈನಿಸಿಕೊಂಡಿದ್ದಾಳೆ. ಕಳೆದ ಎರಡು ದಿನಗಳಿಂದ ಆರೋಗ್ಯದಲ್ಲಿ ಸಮಸ್ಯೆ ಇದ್ದರೂ ಕೂಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ವಿದ್ಯಾರ್ಥಿನಿ ಶನಿವಾರ ವಿಜ್ಞಾನ ಪರೀಕ್ಷೆಗೆ ಹಾಜರಾಗಿದ್ದಳು. ಪರೀಕ್ಷೆಗೆ ಹಾಜರಾಗಿ ಅರ್ಧಗಂಟೆಯಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡು ಮೂರ್ಛೆ ಹೋಗಿದ್ದಳು. ಕೊಠಡಿ ಮೇಲ್ವಿಚಾರಕರು ತಕ್ಷಣವೇ ಎಚ್ಚೆತ್ತುಕೊಂಡು ಆರೋಗ್ಯ ಸಹಾಯಕಿಗೆ ಮಾಹಿತಿ ನೀಡಿದ್ದು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು 108 ಅಂಬುಲೆನ್ಸ್ ವಾಹನ ಕರೆಸಿ ಅಥಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಿ ಮತ್ತೆ ಅರ್ಧ ಗಂಟೆಯಲ್ಲಿ ಪರೀಕ್ಷೆಗೆ ಹಾಜರಾಗಲು ಸಹಾಯ ಮಾಡಿದ್ದಾರೆ. ವಿದ್ಯಾರ್ಥಿನಿ ಕವಿತಾ ಹಿಪ್ಪರಗಿ ಕೈಯಲ್ಲಿ ಸಿರಿಂಜ್ ಮತ್ತು ಕೊಠಡಿಯ ಕಿಟಕಿಯಲ್ಲಿ ಶಿಲಾಯಿನ್ ಬಾಟಲಿ ಮತ್ತು ಗುಲ್ಕೋಸ್ ಇಟ್ಟುಕೊಂಡು ಪರೀಕ್ಷೆ ಬರೆದಿದ್ದಾಳೆ. ಪರೀಕ್ಷೆ ಬರೆಯುವಾಗ ಯಾವುದೇ ಆರೋಗ್ಯ ಸಮಸ್ಯೆಯಾಗಿಲ್ಲ. ಪರೀಕ್ಷೆ ಮುಗಿದ ನಂತರವೂ ವಿದ್ಯಾರ್ಥಿನಿ ಆರೋಗ್ಯವಾಗಿದ್ದಾಳೆ ಎಂದು ತಾಲೂಕ ವೈದ್ಯಾಧಿಕಾರಿ ಡಾ. ಬಸಗೌಡ ಕಾಗೆ ತಿಳಿಸಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿಯ ಆರೋಗ್ಯದಲ್ಲಿ ಏರುಪೇರಾದಾಗ ಸಕಾಲಕ್ಕೆ ಸ್ಪಂದಿಸಿ ಚಿಕಿತ್ಸೆ ನೀಡಿದ ವೈದ್ಯರಿಗೆ ಮತ್ತು 108 ಆಂಬುಲೆನ್ಸ್ ಸಿಬ್ಬಂದಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಬಿ ಮೊರಟಗಿ, ವಿದ್ಯಾರ್ಥಿನಿಯ ಪಾಲಕರು, ಪರೀಕ್ಷಾ ಕೇಂದ್ರದ ಅಧೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.